ಮಡಿಕೇರಿ, ಆ. 25: ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕ ರಸ್ತೆಗಳು, ವಿದ್ಯುತ್ ಸಂಪರ್ಕ, ವಾಸದ ಮನೆಗಳ ಸಹಿತ ಉಂಟಾಗಿರುವ ಹಾನಿಯ ಬಗ್ಗೆ ಜಿಲ್ಲಾಡಳಿತವು ಸಂಬಂಧಿಸಿದ ಇಲಾಖೆಗಳಿಂದ ತುರ್ತು ಮಾಹಿತಿ ಸಂಗ್ರಹಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸುವಂತೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಲಹೆ ನೀಡಿದ್ದಾರೆ.ಮಡಿಕೇರಿ ಸುತ್ತಮುತ್ತಲಿನ ಉದಯಗಿರಿ, ಕಾಂಡನಕೊಲ್ಲಿ, ಮಕ್ಕಂದೂರು, ಹೆಬ್ಬೆಟ್ಟಗೇರಿ, ಮೇಘತ್ತಾಳು, ಹೆಮ್ಮೆತ್ತಾಳು, ಮುಕ್ಕೋಡ್ಲು, ಕಾಲೂರು, ಹಚ್ಚಿನಾಡು, ಆವಂಡಿ ಸೇರಿದಂತೆ ಸೋಮವಾರಪೇಟೆ, ತಾಲೂಕಿನ ಇಗ್ಗೋಡ್ಲು, ಶಿರಂಗಳ್ಳಿ, ಮೂವತ್ತೊಕ್ಲು, ರಾಜಂಡಬಾಣೆ, ಗರ್ವಾಲೆ, ಹರಗ, ತಾಕೇರಿ, ಬಿಳಿಗೇರಿ, ಮುಂತಾದೆಡೆಯ ಗ್ರಾಮಗಳಲ್ಲಿ ನೂರಾರು ಮನೆಗಳು ಹಾನಿಗೊಂಡಿರುವದಾಗಿ ಅವರು ‘ಶಕ್ತಿ’ಯೊಂದಿಗೆ ವಿವರಿಸಿದರು.ಅಲ್ಲದೆ ಅನೇಕ ಗ್ರಾಮಗಳಲ್ಲಿ ಇನ್ನು ಕೂಡ ಜನರು ಅಲ್ಲೇ ನೆಲೆಸಿದ್ದು, ಮನೆಗಳು ವಾಸಕ್ಕೆ ಯೋಗ್ಯವಿಲ್ಲವೆಂದು ಆತಂಕ ವ್ಯಕ್ತಪಡಿಸಿದ ಶಾಸಕರು, ಆ ಮನೆಗಳನ್ನು ಸಮೀಕ್ಷೆ ನಡೆಸಿ ಅಪಾಯ ಎದುರಾಗುವ ಮುನ್ನ ಜಿಲ್ಲಾಡಳಿತ ಪರ್ಯಾಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.ಸೂರ್ಲಬ್ಬಿ, ಮುಟ್ಲು, ಹಮ್ಮಿಯಾಲ, ಹಚ್ಚಿನಾಡು, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯ ಸೇರಿದಂತೆ ಜನತೆ ಅಲ್ಲಲ್ಲಿ ಆತಂಕದಲ್ಲಿದ್ದು,

(ಮೊದಲ ಪುಟದಿಂದ) ಅಂತಹವರಿಗೆ ತಾನು ಎದೆ ಗುಂದದಂತೆ ಆತ್ಮಸ್ಥೈರ್ಯ ತುಂಬುವ ದಿಸೆಯಲ್ಲಿ ಪ್ರಯತ್ನಿಸುತ್ತಿರುವದಾಗಿಯೂ ಅವರು ಮಾರ್ನುಡಿದರು.

ಹಾಲೇರಿ, ಕೆದಕಲ್, ಕಾಂಡನಕೊಲ್ಲಿ ಹಾಗೂ ಕೊಪ್ಪತ್ತೂರು ವ್ಯಾಪ್ತಿ ಯೊಂದಿಗೆ ಬಿಳಿಗೇರಿಯ ರಾಜಂಡಬಾಣೆ, ಕಲ್ಲಡಿ ಯಂತಹ ಪ್ರದೇಶಗಳಲ್ಲಿ ಬಾಚಿನಾಡಂಡ ಹಾಗೂ ಇತರರ ಮನೆಗಳು ಬಿರುಕು ಕಾಣಿಸಿಕೊಂಡು ಗ್ರಾಮಸ್ಥರು ಮನೆಗಳನ್ನು ತೊರೆದಿರುವದಾಗಿ ‘ಶಕ್ತಿ’ಯೊಂದಿಗೆ ಕಳವಳ ತೋಡಿಕೊಂಡರು.

ಕೇವಲ ಮನೆಗಳಲ್ಲದೆ, ಜಾನುವಾರು ಕೊಟ್ಟಿಗೆಗಳು, ವಾಹನ ನಿಲುಗಡೆ ಶೆಡ್‍ಗಳು, ತೋಟ, ಗದ್ದೆಗಳು ಕೂಡ ಹಾನಿಗೊಂಡಿದ್ದು, ಕೃಷಿ, ಕಂದಾಯ, ತೋಟಗಾರಿಕಾ ಇಲಾಖೆಯೊಂದಿಗೆ ಕಾಫಿ ಮಂಡಳಿ ಸಮೀಕ್ಷೆ ನಡೆಸಿ ನೊಂದ ಕುಟುಂಬಗಳಿಗೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕೆಂದು ಶಾಸಕರು ಕಳಕಳಿ ವ್ಯಕ್ತಪಡಿಸಿದರು.

ಶವ ತೆಗೆಯಲು ತೊಡಕು: ಮೂವತ್ತೊಕ್ಲು ಗ್ರಾಮದಲ್ಲಿ ಭೂಕುಸಿತದಿಂದ ಮನೆಯೊಳಗೆ ಸಿಲುಕಿ ಬಂಡೆಯಡಿ ಸಮಾಧಿಯಾಗಿರುವ ಮುಕ್ಕಾಟಿರ ಸಾಬು ಉತ್ತಪ್ಪ ಎಂಬವರ ಶವ ಹೊರತೆಗೆಯಲು ತೊಡಕಾಗಿದೆ ಎಂದು ನೋವು ತೋಡಿಕೊಂಡ ಶಾಸಕರು, ಅಲ್ಲಿ ಮಣ್ಣು ಮತ್ತು ಕುಸಿದಿರುವ ಬಂಡೆಯನ್ನು ಸರಿಸಿದರೆ ಇನ್ನಷ್ಟು ಅಪಾಯ ಸಂಭವಿಸುವ ಆತಂಕದಲ್ಲಿ ಗ್ರಾಮಸ್ಥರಿರುವದಾಗಿ ನೆನಪಿಸಿದರು.

ಗ್ರಾಮಸ್ಥರ ಹೇಳಿಕೆ: ರಾಜಂಡಬಾಣೆ ನಿವಾಸಿ ಬಾಚಿನಾಡಂಡ ಚಿಟ್ಟಿಯಪ್ಪ ದಂಪತಿ ಹೇಳಿಕೆ ನೀಡಿ, ಕೆಲವು ವರ್ಷಗಳ ಹಿಂದೆ ತಮ್ಮಗಳ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದನ್ನು ನೆನಪಿಸಿದರು. ಪ್ರಸಕ್ತ ಮಳೆಯೊಂದಿಗೆ ಜಲಸ್ಫೋಟದಿಂದ ಇನ್ನಷ್ಟು ಹಾನಿಯಾಗಿದ್ದು, ಗ್ರಾಮದ 10 ಕುಟುಂಬಗಳು ಊರು ತೊರೆದಿರುವದಾಗಿ ಅಳಲು ತೋಡಿಕೊಂಡರು.

ಗರ್ವಾಲೆ ಗ್ರಾ.ಪಂ. ಅಧ್ಯಕ್ಷ ಕನ್ನಿಕಂಡ ಸುಭಾಷ್ ಹಾಗೂ ಇತರರು ತಮಗೆ ರಸ್ತೆ ಸಂಪರ್ಕವಿಲ್ಲದೆ ದೈನಂದಿನ ಜೀವನ, ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯಿಲ್ಲದೆ ವಿದ್ಯುತ್ ಕಡಿತದಿಂದ ತೀವ್ರ ತೊಂದರೆಯಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.