ಕೂಡಿಗೆ, ಆ. 26: ಕೂಡಿಗೆ ಗ್ರಾ.ಪಂ.ನ ಸದಸ್ಯರೋರ್ವರ ಮನೆಗೆ ನೆರೆಸಂತ್ರಸ್ತರಿಗೆ ಬಂದ ಆಹಾರ ಸಾಮಗ್ರಿಗಳನ್ನು ಇಳಿಸಲಾಗಿದೆ ಎಂದು ಕೂಡಿಗೆ ಗ್ರಾಮದ ಅಂಬೇಡ್ಕರ್ ಕಾಲೋನಿಯ ಗ್ರಾಮಸ್ಥರ ಆರೋಪದ ಮೇರೆಗೆ ದಾಸ್ತಾನನ್ನು ಕುಶಾಲನಗರದ ಆರ್.ಎಮ್.ಸಿ ಗೋದಾಮಿಗೆ ಸಾಗಿಸಲಾಯಿತು.

ಶನಿವಾರ ರಾತ್ರಿ ಕೂಡಿಗೆ ಗ್ರಾ.ಪಂ.ನ ಜನಪ್ರತಿನಿಧಿಯ ಮನೆಗೆ ಒಂದು ಗೂಡ್ಸ್ ವಾಹನದಲ್ಲಿ ನೆರೆಸಂತ್ರಸ್ತರಿಗಾಗಿ ಬಂದ ದಾಸ್ತಾನನ್ನು ಇಳಿಸಲಾಗುತ್ತಿತ್ತು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಆಹಾರ ಪದಾರ್ಥಗಳನ್ನು ಕುಶಾಲನಗರದ ಆರ್.ಎಮ್.ಸಿಯ ಗೋದಾಮಿಗೆ ಸಾಗಿಸಿದ್ದಾರೆ.