ಕುಶಾಲನಗರ, ಆ. 24: ಜಿಲ್ಲೆಯ ನೆರೆ ಸಂತ್ರಸ್ತರು ಹಾಗೂ ಇತರ ನಾಗರಿಕರಿಗೆ ಆದಿಚುಂಚನಗಿರಿ ಮಹಾಸಂಸ್ಥಾನದಿಂದ ತಾ. 25 ರಿಂದ ಎರಡು ದಿನಗಳ ಕಾಲ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ ಎಂದು ಹಾಸನ-ಕೊಡಗು ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದ್ದಾರೆ.

ಉಚಿತ ಆರೋಗ್ಯ ಶಿಬಿರದ ಸಂಬಂಧ ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಅವರು, ನೆರೆ ಸಂತ್ರಸ್ತ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶ್ರೀಮಠದ ಉಸ್ತುವಾರಿಯಲ್ಲಿ ತಾ. 25 ರಂದು ಕುಶಾಲನಗರದ ಜಿಎಂಪಿ ಶಾಲಾ ಮೈದಾನ, ತಾ. 26 ರಂದು ಮಡಿಕೇರಿಯ ಗೌಡ ಸಮಾಜದ ಆವರಣದಲ್ಲಿ ಶಿಬಿರ ಏರ್ಪಡಿಸಲಾಗುವದು. ಆದಿಚುಂಚನ ಗಿರಿ ಆಸ್ಪತ್ರೆಯ ನುರಿತ ವೈದ್ಯರ ತಂಡ ಅತ್ಯಾಧುನಿಕ ಉಪಕರಣಗಳೊಂದಿಗೆ ಶಿಬಿರಾ ರ್ಥಿಗಳ ತಪಾಸಣೆ ಮಾಡಲಿದೆ. ನಂತರ ಸಂತ್ರಸ್ತ ಪ್ರದೇಶಗಳಿಗೆ ವೈದ್ಯರು ಮತ್ತು ಸಿಬ್ಬಂದಿಗಳ ತಂಡ ತೆರಳಿ ಉಚಿತ ಸೇವೆ ನೀಡಲಿದೆ ಎಂದಿದ್ದಾರೆ.

ಶಿಬಿರದ ಮೇಲುಸ್ತುವಾರಿಯನ್ನು ಹಿರಿಯ ಶ್ರೀಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸುವರು. ಈ ಸೇವೆಯನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ. ಸಭೆಯಲ್ಲಿ ಶಾಖಾ ಮಠದ ಪ್ರಮುಖರಾದ ಶಿವಪುತ್ರ ಸ್ವಾಮೀಜಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಧಮೇಂದ್ರ, ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ಎಂ.ಡಿ. ಕೃಷ್ಣಪ್ಪ, ಕೇಚಪ್ಪನ ಮೋಹನ್, ಪೊನ್ನಚ್ಚನ ಮೋಹನ್, ಎಂ.ಕೆ. ದಿನೇಶ್, ಆನಂದ ಕರಂದ್ಲಾಜೆ, ಚಿಲ್ಲನ ಗಣಿಪ್ರಸಾದ್ ಮತ್ತಿತರರು ಇದ್ದರು.