ಸೋಮವಾರಪೇಟೆ, ಆ. 24: ಭಾರೀ ಮಳೆಯಿಂದ ಜಲಪ್ರಳಯಕ್ಕೆ ಒಳಗಾಗಿ ತೀರಾ ಸಂಕಷ್ಟದ ಸ್ಥಿತಿಯಲ್ಲಿರುವ ಕುಗ್ರಾಮಗಳಿಗೆ ಚನ್ನರಾಯಪಟ್ಟಣ ನಾಗೇಶ್ ವಿದ್ಯಾಸಂಸ್ಥೆಯ ಜ್ಞಾನಸಾಗರ ಶಾಲೆ, ಹಾಸನದ ವಿಜಯಾ ಬ್ಯಾಂಕ್ ಮತ್ತು ಉಡುಪಿಯ ಗೆಳೆಯರ ಬಳಗ ತಂಡದಿಂದ ನೆರವು ಒದಗಿಸಲಾಯಿತು.

ಶಾಂತಳ್ಳಿ ಹೋಬಳಿಯ ಗ್ರಾಮಗಳಲ್ಲಿ ಭಾರೀ ಮಳೆಯಿಂದ ಭೂಕುಸಿತ, ಗದ್ದೆ, ತೋಟ ಹಾನಿ, ಮನೆ ಕಳೆದುಕೊಂಡವರು, ಮನೆಯಿದ್ದರೂ ದಿನಸಿ ಸಾಮಗ್ರಿಗಳು ಇಲ್ಲದವರನ್ನು ಗುರುತಿಸಿ ಸಂಘ-ಸಂಸ್ಥೆಗಳಿಂದ ನೆರವು ಒದಗಿಸ ಲಾಯಿತು. ಶಾಂತಳ್ಳಿ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿರುವ ಮಂದಿ, ಹರಗ, ಕುಂಬೂರಿನ ಕೂಲಿಕಾರ್ಮಿಕರ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಗೃಹೋಪಯೋಗಿ ಮತ್ತು ಅತೀ ಅಗತ್ಯವಾದ ಪರಿಕರ, ಔಷಧಿಗಳನ್ನು ವಿತರಿಸಲಾಯಿತು. ಇದರೊಂದಿಗೆ ಇಲ್ಲಿನ ಚರ್ಚ್‍ನಲ್ಲಿರುವ ಸಂತ್ರಸ್ತರಿಗೂ ಪರಿಕರ ನೀಡಲಾಯಿತು. ಚನ್ನರಾಯಪಟ್ಟಣ ಜ್ಞಾನಸಾಗರ ಶಾಲೆಯಿಂದ ಹರಿದುಬಂದ ನೆರವನ್ನು ಶಾಲೆಯ ಪ್ರಾಂಶುಪಾಲೆ ಡಾ. ಸುಜಾ ಫಿಲಿಪ್, ಆಡಳಿತಾಧಿಕಾರಿ ಫಿಲಿಪ್, ಮುಖ್ಯ ಶಿಕ್ಷಕ ಪ್ರಕಾಶ್, ಸಿಬ್ಬಂದಿಗಳಾದ ಸುನಿಲ್, ಕೌಶಿಕ್, ಚಂದ್ರಪ್ಪ, ಶ್ರೀಶೈಲ, ಜಯರಾಂ ಸೇರಿದಂತೆ 26 ಮಂದಿಯ ತಂಡ ಕುಗ್ರಾಮಗಳಲ್ಲಿ ನೆರವಿಗಾಗಿ ಮೊರೆಯಿಡುತ್ತಿರುವ ಮಂದಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿತು.