ವೀರಾಜಪೇಟೆ, ಆ. 24: ಕಳೆದ ಎರಡು ದಿನಗಳಿಂದ ವೀರಾಜಪೇಟೆ ವಿಭಾಗದಲ್ಲಿ ಮಳೆ ಇಳಿಮುಖ ಗೊಂಡಿದ್ದು ಭಾರೀ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದ ಜನ ಜೀವನ ಮಾಮೂಲಿನತ್ತ ಸಾಗುತ್ತಿದೆ. ಮಳೆ ಪ್ರಮಾಣ ಇಳಿಮುಖ ಗೊಂಡ ಹಿನ್ನೆಲೆ ತಾಲೂಕಿನಾದ್ಯಂತದ ಕೆರೆ ಹೊಳೆ ತೋಡುಗಳಲ್ಲಿ ನೀರಿನ ಪ್ರಮಾಣ ಇಳಿಮುಖಗೊಂಡಿದೆ. ಬೇತರಿ ಗ್ರಾಮದ ಕಾವೇರಿ ಹೊಳೆ, ಸಿದ್ದಾಪುರ ಬಳಿಯ ಕರಡಿಗೋಡು ಗ್ರಾಮದ ಕಾವೇರಿ ಹೊಳೆ, ಗುಹ್ಯದ ಕಾವೇರಿ ಹೊಳೆಯ ನೀರಿನ ಪ್ರಮಾಣ ಕಡಿಮೆಯಾಗಿದೆ. ಅರಮೇರಿ, ಕದನೂರು, ಮಲ್ಲಂಬಟ್ಟಿ, ಆರ್ಜಿ, ಬಾಳುಗೋಡು, ಪೆರಂಬಾಡಿ, ಬಿಟ್ಟಂಗಾಲ ಹಾಗೂ ವಿ. ಬಾಡಗದ ಗದ್ದೆಗಳಲ್ಲಿ ಜಲಾವೃತ ಗೊಂಡಿದ್ದ ನಾಟಿ ಗದ್ದೆಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಪರಿಹಾರ ಕೇಂದ್ರ ಆರಂಭಿಸಲಾಗಿದ್ದರೂ ಒಟ್ಟು 74 ಮಂದಿ ಸಂತ್ರಸ್ತರು ಮಾತ್ರ ಆಶ್ರಯ ಪಡೆದಿದ್ದಾರೆ. ಪರಿಹಾರ ಕೇಂದ್ರಗಳಿಗೆ ದಾನಿಗಳಿಂದಲೇ ಪರಿಹಾರ ಸಾಮಗ್ರಿಗಳು ಹರಿದು ಬರುತ್ತಿದ್ದು, ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಪಿ. ಹೇಮ್‍ಕುಮಾರ್ ಉಸ್ತುವಾರಿಯಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಇಲ್ಲಿನ ಪರಿಹಾರ ಕೇಂದ್ರಗಳಿಗೆ ಸಮುಚ್ಚಯ ನ್ಯಾಯಾಲ ಯಗಳ ನ್ಯಾಯಾಧೀಶರುಗಳಾದ ಜಯಪ್ರಕಾಶ್, ಶಿವಾನಂದ ಲಕ್ಷ್ಮಣ್ ಅಂಚಿ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ, ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರುಗಳು ಭೇಟಿ ಮಾಡಿ ಸಂತ್ರಸ್ತರುಗಳಿಗೆ ಸಾಂತ್ವನ ಹೇಳಿದರಲ್ಲದೆ, ಆರೋಗ್ಯ ವಿಚಾರಿಸಿ ಪರಿಹಾರದ ಧೈರ್ಯ ತುಂಬಿದರು.
ವೀರಾಜಪೇಟೆಯ ತಾಲೂಕು ಕಚೇರಿಯ ಪರಿಹಾರ ಕೇಂದ್ರಕ್ಕೆ ಮಂಡ್ಯ ಜಿಲ್ಲೆಯ ಶಿಕ್ಷಕರುಗಳ ಸಂಘದಿಂದ ವೀರಾಜಪೇಟೆಯ ನಾಲ್ಕು ಪರಿಹಾರ ಕೇಂದ್ರಗಳಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸುವಂತೆ ಬ್ಲಾಂಕೇಟ್, ಬೆಡ್‍ಶೀಟ್, ಅಕ್ಕಿ ತರಕಾರಿ ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ತಾಲೂಕು ತಹಶೀಲ್ದಾರ್‍ಗೆ ತಲಪಿಸಲಾಗಿದೆ.