ಕುಶಾಲನಗರ, ಆ. 24: ಕೂಡಿಗೆಯ ಸೈನಿಕ ಶಾಲೆಯಲ್ಲಿ 2018-19ನೇ ಸಾಲಿನ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಯಿತು.
ಕೊಡಗು ಸೈನಿಕ ಶಾಲೆ ಆಶ್ರಯದಲ್ಲಿ ನಡೆದ ಅಖಿಲ ಭಾರತ ಸೈನಿಕ ಶಾಲಾ ಒಕ್ಕೂಟದ ಮೊದಲ ರಾಷ್ಟ್ರೀಯ ಮಟ್ಟದ ಅಂತರ ವಲಯ ವಾಲಿಬಾಲ್ ಪಂದ್ಯಾವಳಿಗೆ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಕಠಿಣವಾದ ಪರಿಶ್ರಮ ಮತ್ತು ದೃಢ ನಿರ್ಧಾರವು ಒಬ್ಬ ವ್ಯಕ್ತಿಯನ್ನು ಪರಿಪೂರ್ಣ ಕ್ರೀಡಾಪಟುವಾಗಿ ಮಾರ್ಪಡಿಸುತ್ತದೆ. ಕ್ರೀಡಾ ಸ್ಪೂರ್ತಿ ಮತ್ತು ಸಂಘಟನಾತ್ಮಕ ಪ್ರದರ್ಶನವನ್ನು ಹೊಂದಿ ಸ್ಪರ್ಧಾ ಮನೋಭಾವದಿಂದ ಕ್ರೀಡಾಪಟುಗಳು ಹೋರಾಡಿದಲ್ಲಿ ಜಯವು ನಿಶ್ಚಯವಾಗಿ ದೊರೆಯುವದೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
4 ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಸೈನಿಕ ಶಾಲೆ ಗೋಲ್ಪಾರ (ಅಸ್ಸಾಂ), ಸೈನಿಕ ಶಾಲೆ ಕಪುರ್ತಲಾ (ಪಂಜಾಬ್), ಸೈನಿಕ ಶಾಲೆ ಕೋರುಕೊಂಡ (ಅಂಧ್ರಪ್ರದೇಶ), ಸೈನಿಕ ಶಾಲೆ ನಳಂದ (ಬಿಹಾರ) ಮತ್ತು ಸೈನಿಕ ಶಾಲೆ ಸತಾರ(ಮಹಾರಾಷ್ಟ್ರ)ದ ಒಟ್ಟು ಐದು ಶಾಲೆಯ ತಂಡಗಳು ಪಾಲ್ಗೊಂಡಿದ್ದವು.
ಶಾಲೆಯ ಕ್ರೀಡಾ ನಾಯಕನಾದ ಕೆಡೆಟ್ ಶಿವಕುಮಾರ್ ಎಲ್ಲಾ ತಂಡಗಳ ನಾಯಕರುಗಳಿಗೆ ಮತ್ತು ಸ್ಪರ್ಧಾಳುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಾಲ್ಕು ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ಸೈನಿಕ ಶಾಲೆ ಕಪುರ್ತಲಾ(ಪಂಜಾಬ್)ನ ತಂಡ ಪ್ರಥಮ, ಸೈನಿಕ ಶಾಲೆ ಗೋಲ್ಪಾರ(ಅಸ್ಸಾಂ) ದ್ವಿತೀಯ ಸ್ಥಾನ ಗಳಿಸಿತು.
ಸೈನಿಕ ಶಾಲೆ ಗೋಲ್ಪಾರ(ಅಸ್ಸಾಂ)ನ ವಿದ್ಯಾರ್ಥಿ ಕೆಡೆಟ್ ರಾಹುಲ್ ಕುಮಾರ್ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು. ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ವಿಜೇತ ತಂಡವಾದ ಸೈನಿಕ ಶಾಲೆ ಕಪುರ್ತಲಾ(ಪಂಜಾಬ್) ತಂಡಕ್ಕೆ ಅಖಿಲ ಭಾರತ ಅಂತರ ವಲಯ ವಾಲಿಬಾಲ್ ಪಾರಿತೋಷಕವನ್ನು ಪ್ರದಾನ ಮಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸೈನಿಕ ಶಾಲೆ ಕೊಡಗಿನ ಉಪ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಟಿ, ಆಡಳಿತಾಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಡಿ ಮ್ಯಾಥ್ಯು, ಭಾಗಿಯಾಗಿದ್ದ ಎಲ್ಲಾ ತಂಡಗಳ ನಿರ್ವಾಹಕರು ಮತ್ತು ಶಾಲೆಗಳ ಪ್ರತಿನಿಧಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.