ಮಡಿಕೇರಿ, ಆ. 24: ಕೃಷಿ ಪ್ರಧಾನವಾಗಿರುವ ಕೊಡಗು ಜಿಲ್ಲೆಯಲ್ಲಿನ ಪ್ರಮುಖ ಹಬ್ಬಗಳು ಕೃಷಿಗೆ ಪೂರಕವಾಗಿಯೇ ಆಚರಿಸಲ್ಪಡುವದು ಪದ್ಧತಿ. ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಪೂರೈಸಿದ ಬಳಿಕ ಆಚರಿಸುವ ಪ್ರಥಮ ಹಬ್ಬ ಕೈಲು ಮುಹೂರ್ತವಾಗಿದೆ. ಜಿಲ್ಲೆಯಲ್ಲಿ ಸೆಪ್ಟೆಂಬರ್ 3 ರಂದು ಸಾರ್ವತ್ರಿಕವಾಗಿ ಈ ಹಬ್ಬ ಆಚರಣೆಯಾಗುತ್ತಿದೆಯಾದರೂ ಈ ಹಿಂದಿನ ಪದ್ಧತಿಯಂತೆ ಸೂರ್ಲಬ್ಬಿನಾಡ್‍ನಲ್ಲಿ ಮೊದಲು, ಬಳಿಕ ಮುತ್ತ್‍ನಾಡ್ ಹಾಗೂ ಆ ನಂತರ ನಾಲ್ಕುನಾಡು ವಿಭಾಗದಲ್ಲಿ ಈ ಹಬ್ಬ ಆಚರಣೆಯಾಗುತ್ತದೆ.

ಹಿಂದಿನಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯದಂತೆ ಸೂರ್ಲಬ್ಬಿನಾಡ್ ವಿಭಾಗದಲ್ಲಿ ಆಗಸ್ಟ್ 20 ಹಾಗೂ 21 ರಂದು ಈ ಹಬ್ಬ ಆಚರಣೆಯಾಗಬೇಕಿತ್ತು. ಆದರೆ ಪ್ರಸಕ್ತ ವರ್ಷ ಉಂಟಾದ ಪ್ರಾಕೃತಿಕ ವಿಕೋಪದಿಂದಾಗಿ ಈ ವಿಭಾಗದ ಜನತೆಯೂ ಸೇರಿದಂತೆ ಸನಿಹದ ಮುತ್ತ್‍ನಾಡ್ ಎಂದು ಕರೆಯಲ್ಪಡುವ ಕಾಲೂರು, ಮುಕ್ಕೋಡ್ಲು, ಗಾಳಿಬೀಡು ವಿಭಾಗಗಳಲ್ಲಿ ಭಾರೀ ದುರಂತಗಳೇ ಸಂಭವಿಸಿ ಹೋಗಿದೆ. ಈ ಹಿನ್ನೆಲೆಯಲ್ಲಿ ಆ. 20 ಹಾಗೂ 21 ರಂದು ಸೂರ್ಲಬ್ಬಿನಾಡ್‍ಗೆ ಸೇರುವ ಸೂರ್ಲಬ್ಬಿ, ಮುಟ್ಲು, ಹಮ್ಮಿಯಾಲ, ಕುಂಬಾರಗಡಿಗೆ, ಮಂಕ್ಯ, ಕಿಕ್ಕರಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೊಡಗಿನ ಆಯುಧ ಪೂಜೆ ಎಂದು ಪರಿಗಣಿತವಾಗಿರುವ ಈ ಕೈಲುಮುಹೂರ್ತ ಹಬ್ಬವನ್ನು ಯಾರೂ ಈ ಬಾರಿ ಆಚರಣೆ ಮಾಡಿಲ್ಲ. ಮೇಘಸ್ಫೋಟ, ಜಲಸ್ಫೋಟದಿಂದಾಗಿ ಈ ವಿಭಾಗದಲ್ಲಿನ ಜನತೆ ತೀವ್ರ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಹಬ್ಬಾಚರಣೆ ಮಾಡಿಲ್ಲವೆಂದು ಹಲವರು ತಿಳಿಸಿದ್ದಾರೆ.