ಗೋಣಿಕೊಪ್ಪ ವರದಿ, ಆ. 24 : ಭೂಕುಸಿತಕ್ಕೆ ಬದುಕು ಕಳೆದುಕೊಂಡಿರುವ ಕುಟುಂಬಕ್ಕೆ ಜಾಗದಾನ ಮಾಡುವ ಮೂಲಕ ಸ್ಪಂದಿಸಲು ಸಣ್ಣ ಕಾಫಿ ಬೆಳೆಗಾರ ರೊಬ್ಬರು ನಿರ್ಧಾರ ಪ್ರಕಟಿಸಿದ್ದಾರೆ.

ಕೊಳ್ತೋಡು-ಬೈಗೋಡು ಗ್ರಾಮದ ಕೇಳಪಂಡ ಮಹೇಶ್ ಎಂಬವರು ಈ ಬಗ್ಗೆ ತನ್ನ ನಿಲುವು ಪ್ರಕಟಿಸಿದ್ದು, ಭೂಕುಸಿತಕ್ಕೆ ಮನೆ, ತೋಟ ಎಲ್ಲಾವನ್ನೂ ಕಳೆದುಕೊಂಡಿರುವ ಒಂದು ಕುಟುಂಬಕ್ಕೆ ತನ್ನ ಆಸ್ತಿಯಲ್ಲಿನ 3 ಸೆಂಟ್ ಜಾಗ ಮನೆ ನಿರ್ಮಾಣಕ್ಕೆ ನೀಡಲಾಗುವದು ಎಂದು ತಿಳಿಸಿದ್ದಾರೆ.

ಬದುಕು ಕಳೆದುಕೊಂಡಿರುವ ಜನರ ಸ್ಥಿತಿ ಮನಕಲಕಿದೆ. ಇದರಂತೆ ಮನೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇನೆ. ಕೊಳ್ತೋಡು-ಬೈಗೋಡು ಗ್ರಾಮದಲ್ಲಿರುವ ತೋಟದ ಆಸ್ತಿಯಲ್ಲಿ ಜಾಗ ನೀಡಲಾಗುವದು. ಮನೆಯನ್ನು ಅವರೇ ನಿರ್ಮಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.