ವೀರಾಜಪೇಟೆ, ಆ. 24 : ಇತ್ತೀಚಿನ ಭಾರೀ ಮಳೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕುಟುಂಬಗಳಿಗೆ ತಾಲೂಕಿನಾದ್ಯಂತ ಸುಮಾರು 11ಗಂಜಿ ಪರಿಹಾರ ಕೇಂದ್ರಗಳನ್ನು

ಈ ಹಿಂದೆಯೇ ಪ್ರಾರಂಭಿಸ ಲಾಗಿತ್ತು. ಪರಿಹಾರ ಕೇಂದ್ರದಲ್ಲಿದ್ದ ಸಂತ್ರಸ್ತರು ಕೆಲವರು ಮನೆಗೆ ತೆರಳಿರುವದರಿಂದ ತಾಲೂಕಿನ ಕೊಂಡಂಗೇರಿ, ಕರಡಿಗೋಡು ಸೇರಿದಂತೆ ಆರು ಗಂಜಿ ಕೇಂದ್ರಗಳನ್ನು ತೆರವುಗೊಳಿಸಲಾಗಿದ್ದು ಗಂಜಿ ಪರಿಹಾರ ಕೇಂದ್ರದಲ್ಲಿದ್ದ ನೋಂದಣಿಯಾದ 196 ಸಂತ್ರಸ್ತರಿಗೆ ಸರಕಾರದ ಆದೇಶದಂತೆ ತಲಾ ರೂ. 3800 ರ ಚೆಕ್ ವಿತರಿಸಲು ಇಂದಿನಿಂದ ಕ್ರಮ ಕೈಗೊಂಡಿರು ವದಾಗಿ ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜು ತಿಳಿಸಿದ್ದಾರೆ.

ಪರಿಹಾರ ಕೇಂದ್ರದಿಂದ ಮನೆಗೆ ತೆರಳಿದವರಿಗೂ ಅವರ ವಿಳಾಸ ಪತ್ತೆ ಮಾಡಿ ಮನೆಯಲ್ಲಿಯೇ ಪರಿಹಾರದ ಚೆಕ್‍ನ್ನು ವಿತರಿಸಲಾಗುವುದು. ಪರಿಹಾರ ವಿತರಣೆ ಕುರಿತು ಯಾವದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿರುವ ಗೋವಿಂದರಾಜು ಅವರು ವೀರಾಜಪೇಟೆ ವಿಭಾಗದಲ್ಲಿ ಐದು ಕೇಂದ್ರಗಳು ಚಾಲನೆಯಲ್ಲಿವೆ. ತಾಲೂಕಿನಾದ್ಯಂತ ಮನೆ ಜಖಂ ಗೊಂಡು ಪರಿಹಾರಕ್ಕೆ ಬಂದಿರುವ 88ಅರ್ಜಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳಿಸಿಕೊಡ ಲಾಗಿದೆ. ತಾಲೂಕಿ ನಾದ್ಯಂತ ಮಳೆ ಇಳಿಮುಖ ಗೊಂಡಿದೆ. ಸಿದ್ದಾಪುರ ಬಳಿಯ ಕರಡಿಗೋಡಿನ ಕಾವೇರಿ ನದಿಯಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ‘ಶಕ್ತಿ’ ಗೆ ತಿಳಿಸಿದ್ದಾರೆ.