ಸೋಮವಾರಪೇಟೆ, ಆ. 23: ಶಾಂತಳ್ಳಿ ಹೋಬಳಿ ಹರಗ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಶಿಥಿಲಾವಸ್ಥೆಗೆ ತಲಪಿದ್ದು, ಇದಕ್ಕೆ ಕಾಯಕಲ್ಪ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬೆಟ್ಟದಳ್ಳಿ-ಹರಗ ಸಂಪರ್ಕ ರಸ್ತೆಯ ತಿರುವಿನ ಸೇತುವೆ ಶಿಥಿಲಾವಸ್ಥೆಗೆ ತಲಪಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಭೀತಿ ಎದುರಾಗಿದೆ. ಶಿಥಿಲಾವಸ್ಥೆಗೆ ತಲಪಿರುವ ಸೇತುವೆಯ ಬದಲಿಗೆ ನೂತನ ಸೇತುವೆ ನಿರ್ಮಿಸುವಂತೆ ಅನೇಕ ಬಾರಿ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದರೂ ಪರಿಹಾರ ಶೂನ್ಯವಾಗಿದೆ. ಜನಪ್ರತಿನಿಧಿಗಳ ಗಮನ ಸೆಳೆದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ಶರಣ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಮತ್ತು ಸೆಕ್ಷನ್ ಇಂಜಿನಿಯರ್ ವೆಂಕಟೇಶ್ ನಾಯಕ್ ಅವರುಗಳು ಪ್ರತಿಕ್ರಿಯಿಸಿದ್ದು, ನೂತನ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಟೆಂಡರ್ ಅನುಮೋದನೆ ಬಾಕಿ ಇದ್ದು, ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.