ವೀರಾಜಪೇಟೆ, ಆ. 22: ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರು ನಿನ್ನೆ ದಿನ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡಿದ್ದು ಮಳೆ ಇಳಿಮುಖಗೊಂಡಿದ್ದು ಜಲಾವೃತ್ತಗೊಂಡಿದ್ದ ನಾಟಿ ಗದ್ದೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಹಾನಿಗೊಳಗಾದ ಪ್ರದೇಶದ ನಷ್ಟವನ್ನು ರೆವಿನ್ಯೂ ಸಿಬ್ಬಂದಿಗಳು ಮಹಜರು ಹಾಗೂ ಖುದ್ದು ಸಮೀಕ್ಷೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ವೀರಾಜಪೇಟೆ ತಾಲೂಕಿ ನಾದ್ಯಂತ ಈವರೆಗೆ ಬಿದ್ದ ಮಳೆಗೆ ಒಟ್ಟು 223 ಮನೆಗಳು ಜಖಂಗೊಂಡಿದ್ದು ಈತನಕ ಒಟ್ಟು ರೂ ಒಂದು ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಭಾರೀ ಮಳೆಗೆ 11ಹಸುಗಳು 2 ಆಡುಗಳು ಸಾವನ್ನಪ್ಪಿರುವದಾಗಿ ಇಲ್ಲಿನ ತಾಲೂಕು ಕಚೇರಿಯ ಪರಿಹಾರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕಿನಲ್ಲಿ ಭಾರೀ ಮಳೆಗೆ ಮನೆ ಜಖಂಗೊಂಡ ಸುಮಾರು 107 ಸಂತ್ರಸ್ತರಿಗೆ ಈಗಾಗಲೇ ರೂ 15,82,269 ಪರಿಹಾರ ನೀಡಲಾಗಿದೆ. ಇನ್ನು 116 ಮಂದಿಗೆ ಸಧ್ಯದಲ್ಲಿಯೇ ಪರಿಹಾರ ವಿತರಣೆ ಮಾಡಲಾಗುವದು ಎಂದು ಪರಿಹಾರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.