ಸಿದ್ದಾಪುರ, ಆ. 23: ಕರಡಿಗೋಡು ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ ಕುಟುಂಬಗಳು ಕರಡಿಗೋಡು ಗ್ರಾಮದ 3 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ಆದರೆ ಇದೀಗ ನೀರು ಇಳಿಮುಖಗೊಂಡ ಹಿನ್ನೆಲೆಯಲ್ಲಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದ ಎಲ್ಲ ಕುಟುಂಬಗಳು ತಮ್ಮ ಮನೆಗೆ ತೆರಳಿದ್ದಾರೆ. ಕರಡಿಗೋಡು ಗ್ರಾಮದ ನದಿ ದಡದಲ್ಲಿ 126ಕ್ಕೂ ಅಧಿಕ ಕುಟುಂಬ ವಾಸ ಮಾಡಿಕೊಂಡಿದ್ದು, ಆದರೆ ಕಾವೇರಿ ನದಿಯಲ್ಲಿ 4 ಬಾರಿ ಪ್ರವಾಹದ ನೀರು ಏರಿಕೆಯಾಗಿತ್ತು. ಆದರೆ ಕಳೆದ ವಾರ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಕಾವೇರಿ ನದಿಯಲ್ಲಿ ಪ್ರವಾಹ ನೀರು ಅಪಾಯ ಮಟ್ಟದಲ್ಲಿ ಹರಿದು ಕರಡಿಗೋಡುವಿನಲ್ಲಿ ನೂರಾರು ಮನೆಗಳು ಜಲಾವೃತಗೊಂಡಿದ್ದವು. ಈ ಹಿನ್ನಲೆಯಲ್ಲಿ ನದಿ ದಡದ ಎಲ್ಲ ಕುಟುಂಬಗಳನ್ನು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜು ಅವರ ಮಾರ್ಗದರ್ಶನದಲ್ಲಿ ಕಂದಾಯ ಪರಿವೀಕ್ಷಕ ವಿನು, ಗ್ರಾಮ ಲೆಕ್ಕಿಗರಾದ ಅನಿಲ್ ಕುಮಾರ್, ಮಂಜುನಾಥ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಪರಿಹಾರ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಿದರು. ಅಲ್ಲದೆ ಗುಹ್ಯ ಗ್ರಾಮದಲ್ಲಿ ಕೂಡ ಪರಿಹಾರ ಕೇಂದ್ರ ತೆರೆದು ಅಲ್ಲಿನ ನಿವಾಸಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸಿದರು. ಇದೀಗ ಎಲ್ಲಾ ಪರಿಹಾರ ಕೇಂದ್ರಗಳಿಂದ ನಿರಾಶ್ರಿತರು ತಮ್ಮ ಮನೆಗಳಿಗೆ ತೆರಳಿದ್ದಾರೆ. ಆದರೆ ಜಲಾವೃತ ಗೊಂಡು ಸಂಪೂರ್ಣ ಹಾನಿಗೊಳಗಾದ ಕುಟುಂಬಗಳು ಬಾಡಿಗೆ ಮನೆಗಳಿಗೆ, ಸಂಬಂಧಿಕರ ಮನೆಗಳಿಗೆ ತೆರಳಿ ವಾಸ ಮಾಡು ತ್ತಿದ್ದಾರೆ. ಆದರೂ ಜಲಾವೃತಗೊಂಡು ಶಿಥಿಲ ಗೊಂಡಿರುವ ಮನೆಗಳಲ್ಲಿ ಕೆಲವರು ವಾಸಕ್ಕೆ ಸಿದ್ಧತೆ ಮಾಡಿಕೊಂಡಿರುವದು ಆತಂಕಕಾರಿ ಯಾಗಿದೆ.

ನದಿ ದಡದ ನಿವಾಸಿಗಳು ಈ ಹಿಂದೆ ಬೇರೆ ನಿವೇಶನ ನೀಡುವದಾಗಿ ತಿಳಿಸಿದ್ದರೂ ತೆರಳುತ್ತಿರಲಿಲ್ಲ. ಆದರೇ ಇದೀಗ ಈ ವರ್ಷದ ಪ್ರವಾಹದ ಅಬ್ಬರದ ಬಳಿಕ ಪರಿವರ್ತನೆ ಗೊಂಡಿದ್ದು, ಸೂಕ್ತ ನಿವೇಶನ ದೊರೆತಲ್ಲಿ ತೆರಳುವ ಬಗ್ಗೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ಜಿಲ್ಲಾಡಳಿತ ಸೂಕ್ತ ನಿವೇಶನವನ್ನು ಒದಗಿಸುವ ಮೂಲಕ ವರ್ಷಗಳ ಸಮಸ್ಯೆಗೆ ನಾಂದಿ ಹಾಡಬೇಕಿದೆ.

- ಎ.ಎನ್ ವಾಸು