ಸೋಮವಾರಪೇಟೆ, ಆ.23: ‘ಇನ್ನು ಇಲ್ಲಿ ಇರೋಕೆ ನಮಗೆ ಆಗಲ್ಲ. ಕಣ್ಣೆದುರೇ ಕುಸಿದ ಬೆಟ್ಟದ ದೃಶ್ಯ ಮನಸ್ಸಿಂದ ಹೋಗಿಲ್ಲ. ಮನೆ ಮಠ ಇದ್ದರೂ ಜೀವಿಸೋಕೆ ಆಗಲ್ಲ, ತೋಟ ಗದ್ದೆಗಳಂತೂ ನಮಗೆ ದಕ್ಕುವದಿಲ್ಲ. ನಮ್ಮನ್ನು ಬೇರೆಲ್ಲಿಗಾದರೂ ಸ್ಥಳಾಂತರಿಸಿ ಅಲ್ಲೇ ಸೌಕರ್ಯ ಕಲ್ಪಿಸಿ’
ಇದು ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂವತ್ತೊಕ್ಲು ಗ್ರಾಮದಲ್ಲಿರುವ ಮುಕ್ಕಾಟಿ ಮತ್ತು ಮಂಡೀರ ಕುಟುಂಬಗಳ ಅಳಲು. ಕಣ್ಣೆದುರೇ ಮುಕ್ಕಾಟಿರ ಉತ್ತಪ್ಪ ಅವರು ಮನೆ ಸಹಿತ ಮಣ್ಣಿನಡಿ ಮುಚ್ಚಿಹೋದ ದೃಶ್ಯವನ್ನು ಕಂಡ ಮಂದಿ ಅಕ್ಷರಶಃ ನಲುಗಿ ಹೋಗಿದ್ದಾರೆ.
ಇದ್ದ ಒಂದಿಷ್ಟು ಗದ್ದೆ ತೋಟದಲ್ಲಿ ಕೃಷಿ ಮಾಡಿಕೊಂಡು ಇದ್ದುದರಲ್ಲೇ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ಈ ಮಂದಿಯ ಬದುಕು ಇಂದು ಮೂರಾಬಟ್ಟೆಯಾಗಿದೆ. ಮುಕ್ಕಾಟಿ-ಮಂಡೀರ ಕುಟುಂಬಗಳು ಗ್ರಾಮವನ್ನೇ ತೊರೆದು ಹೊರಹೋಗಿವೆ. ಕೆಲ ಮನೆಗಳಿಗೆ ಬೀಗ ಜಡಿದಿದ್ದರೆ, ಒಂದಿಷ್ಟು ಮಂದಿ ಮಾತ್ರ ಈ 7 ದಿನದಲ್ಲಿ ಕೆಲವೊಮ್ಮೆ ಬಂದು ಹೋಗಿದ್ದಾರೆ.
ಮುಕ್ಕಾಟಿ ಮತ್ತು ಮಂಡೀರ ಗುಂಪಿನಲ್ಲಿ 32 ಕುಟುಂಬಗಳಿದ್ದು, ಎಲ್ಲರೂ ತುಂಡು ಭೂಮಿಯಲ್ಲಿ ಕೃಷಿಯನ್ನೇ ನಂಬಿ ಜೀವಿಸುತ್ತಿದ್ದವರು. ಪ್ರಕೃತಿಯ ಆರಾಧಕರೂ ಇವರಾಗಿದ್ದು, ಗ್ರಾಮಕ್ಕೆ ಪ್ರವೇಶಿಸುವಲ್ಲಿರುವ ದೇವರ ಕಾಡನ್ನು ಉಳಿಸಿಕೊಂಡವರು. ಹಚ್ಚಹಸಿರಿನ ವನಸೌಂದರ್ಯವನ್ನು ಉಳಿಸಿಕೊಂಡು ಬಂದಿರುವ ಈ ಮಂದಿಗೆ ಇದೀಗ ಊರು ಬಿಡುವ ಮನಸ್ಸಾಗಿದೆ. ಈ ಮನಸ್ಥಿತಿಗೆ ಪ್ರಕೃತಿ ಮಾತೆಯ ಮುನಿಸೇ ಕಾರಣವಾಗಿದೆ.
ಬೆಟ್ಟದ ತಳಭಾಗದಲ್ಲಿ ಒಂದಿಷ್ಟು ಜಾಗವನ್ನು ಸಮತಟ್ಟುಗೊಳಿಸಿ ಮನೆ ನಿರ್ಮಿಸಿಕೊಂಡಿದ್ದ ಈ ಮಂದಿಗೆ ಇಂದು ಏನೂ ಇಲ್ಲದ ಸ್ಥಿತಿ. ಪ್ರಕೃತಿಯ ಕೋಪಕ್ಕೆ ತುತ್ತಾಗಿರುವ ಮೂವತ್ತೊಕ್ಲಿನ ಈ ಕುಟುಂಬಗಳು ‘ನಮಗೆ ಬೇರೆಡೆ ವ್ಯವಸ್ಥೆ ಕಲ್ಪಿಸಿದರೆ ಬದುಕಿಕೊಳ್ತೇವೆ’ ಎನ್ನುತ್ತಿವೆ.
ಗ್ರಾಮದ ಉತ್ತಪ್ಪ ಸಹಿತ ಅವರ ಮನೆ ಕಣ್ಮರೆಯಾದ ನಂತರ ಇಲ್ಲಿ ಬದುಕುವ ಯೋಚನೆ ಹೊರಟು ಹೋಗಿದೆ. ಮುಕ್ಕಾಟೀರ-ಮಂಡೀರ ಮಂದಿ ಜೀವನ ಮಾಡೋಕೆ ಆಗಲ್ಲ. ತೋಟ ಗದ್ದೆ ಸಂಪೂರ್ಣ ಹಾಳಾಗಿದೆ. ನಮಗೆ ಎಲ್ಲಾದರೂ ಬೇರೆಡೆ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾಡಳಿತ ಮತ್ತು ಸರ್ಕಾರ ಈ ಬಗ್ಗೆ ಮನಸ್ಸು ಮಾಡಬೇಕು ಎಂದು ಈ ಭಾಗದ ಗ್ರಾ.ಪಂ. ಸದಸ್ಯ ಎಂ.ಎಂ. ಬೆಳ್ಳಿಯಪ್ಪ ಅವರು ಮನವಿ ಮಾಡಿದ್ದಾರೆ.
ಗ್ರಾಮದವರೆಲ್ಲರೂ ಮನೆ ಬಿಟ್ಟು ಹೊರಗಿರುವ ನೆಂಟರಿಷ್ಟರು, ಪರಿಹಾರ ಕೇಂದ್ರಕ್ಕೆ ತೆರಳಿದ್ದೇವೆ. ಅಲ್ಲಿ ಎಷ್ಟು ದಿನ ಇರೋಕೆ ಆಗುತ್ತೆ. ನಮಗೆ ಬೇರೆಡೆಯಲ್ಲಿ ಪುನರ್ವಸತಿ ಕಲ್ಪಿಸಿಕೊಟ್ಟರೆ ಸಾಕು. ಹೇಗಾದರೂ ಬದುಕಿಕೊಳ್ತೀವಿ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.