ಮಡಿಕೇರಿ, ಆ. 22: ಮಳೆ- ಗಾಳಿಯ ತೀವ್ರತೆಯಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಸಂತ್ರಸ್ತರನ್ನು ರಕ್ಷಿಸಲು ಸ್ಥಳೀಯರು, ವಿವಿಧ ರಕ್ಷಣಾ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಮನುಷ್ಯರಂತೆ ಸಂಕಷ್ಟದಲ್ಲಿ ಸಿಲುಕಿರುವ ಪ್ರಾಣಿಗಳನ್ನು ರಕ್ಷಿಸುವವರ್ಯಾರು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ...

‘ಕ್ಯೂಪಾ’ ಎಂಬ ಅಂತರ್ರಾಷ್ಟ್ರ ಮಟ್ಟದ ಖಾಸಗಿ ಸಂಸ್ಥೆಯೊಂದು ಕೊಡಗಿನಲ್ಲಿ ನೆರೆಹಾವಳಿಯಿಂದ ತೊಂದರೆಗೀಡಾಗಿರುವ ಪ್ರಾಣಿಗಳ ರಕ್ಷಣೆಗೆ ಮುಂದಾಗಿದೆ. ‘ಕ್ಯೂಪಾ’ ಸಂಸ್ಥೆಯ ಬೆಂಗಳೂರು ಘಟಕದ ಮುಖ್ಯ ಸ್ವಯಂ ಸೇವಕಿ ಶಿಲ್ಪ ಎಂಬವರ ನೇತೃತ್ವದಲ್ಲಿ 20 ಮಂದಿಯ ತಂಡ ಕೊಡಗಿಗೆ ಆಗಮಿಸಿದ್ದು, ಬೈಲುಕುಪ್ಪೆಯ ರೈತ ಅಶ್ರಫ್ ಎಂಬವರ ನಿವೇಶನದಲ್ಲಿ ನೆಲೆಸಿದೆ. ಈ ತಂಡವು ಪ್ರವಾಹ ಪೀಡಿತ ಮನೆಗಳಲ್ಲಿ ಸಿಲುಕಿಕೊಂಡಿ ರುವ ಹಸು, ದನ, ಕರು, ನಾಯಿಗಳನ್ನು ಪತ್ತೆ ಹಚ್ಚಿ ರಕ್ಷಣೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳಲಿದೆ. ಈಗಾಗಲೇ ಈ ತಂಡ 2 ಹಸು, 2 ನಾಯಿ ಹಾಗೂ 1 ಬೆಕ್ಕಿನ ಮರಿಯನ್ನು ರಕ್ಷಣೆ ಮಾಡಿ ಸಲಹುತ್ತಿದೆ.

‘ಶಕ್ತಿ’ಯೊಂದಿಗೆ ಮಾತನಾಡಿದ ಶಿಲ್ಪಾ ಅವರು ಪ್ರಸ್ತುತ ಕೊಡಗು ಭೂಕುಸಿತ ಹಾಗೂ ನೆರೆ ಹಾವಳಿಯಿಂದ ದ್ವೀಪದಂತಾಗಿದ್ದು, ಇಂತಹ ಸನ್ನಿವೇಶದಲ್ಲಿ ಪ್ರಾಣಿಗಳ ರಕ್ಷಣಾ ಕಾರ್ಯಾಚರಣೆ ಕಷ್ಟಸಾಧ್ಯ ವಾಗಲಿದೆ. ಆದರೂ ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ಮಾಡಲು ತೀರ್ಮಾನಿಸಿದ್ದೇವೆ. ಕೇವಲ ಸಾಕುಪ್ರಾಣಿಗಳನ್ನು ಮಾತ್ರವಲ್ಲದೆ ತೊಂದರೆಯಲ್ಲಿರುವ ವನ್ಯ ಪ್ರಾಣಿಗಳನ್ನು ಕೂಡ ರಕ್ಷಣೆ ಮಾಡಲಾಗುತ್ತದೆ.

ನಮ್ಮ ತಂಡಕ್ಕೆ ತಲಪಲು ಸಾಧ್ಯವಾಗದ ಸ್ಥಳಗಳಿಗೆ ತೆರಳಿ ಕಾರ್ಯಾಚರಣೆ ಮಾಡಲು ಇಬ್ಬರು ನುರಿತ ಚಾರಣಿಗರನ್ನು ಕರೆಸಲಾಗುತ್ತಿದ್ದು, ಪ್ರಾಣಿಗಳನ್ನು ತೊಂದರೆಯಿಂದ ಕಾಪಾಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಾಚರಣೆ ಕೈಗೊಳ್ಳುವದಾಗಿ ಮಾಹಿತಿ ನೀಡಿದರು.