ಶ್ರೀಮಂಗಲ, ಆ. 22: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಯ ಅಬ್ಬರ ದ.ಕೊಡಗಿನ ವ್ಯಾಪ್ತಿಯಲ್ಲಿ ಕಡಿಮೆಯಾಗಿದೆ. ಆದರೆ, ಮತ್ತೆ ಯಾವ ಗಳಿಗೆಯಲ್ಲಿ ಮಳೆಯ ಆರ್ಭಟ ಮುಂದುವರೆಯುತ್ತದೆ ಎಂಬ ಬಗ್ಗೆ ಜನರು ಆತಂಕಗೊಳಗಾಗಿದ್ದಾರೆ.

ದ.ಕೊಡಗಿನ ಘಟ್ಟ ಪ್ರದೇಶ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ತೀವ್ರ ಆತಂಕಗೊಂಡಿದ್ದು, ಈಗಾಗಲೇ ಉತ್ತರ ಕೊಡಗಿನ ಹಲವು ಭಾಗದಲ್ಲಿ ಉಂಟಾಗಿರುವ ಭೂಕುಸಿತವನ್ನು ನೆನಸಿಕೊಂಡು ತೀವ್ರ ಭೀತಿಯಲ್ಲಿದ್ದಾರೆ.

ಗುಡ್ಡಗಾಡು ಪ್ರದೇಶದ ಜನರಿಗೆ ಮಳೆಯಿಂದ ಗುಡ್ಡ ಕುಸಿದು ಭೂ ಕುಸಿತವಾಗುವ ಆತಂಕ ಉಂಟಾದರೆ ಸಮ ಭೂಪ್ರದೇಶದಲ್ಲಿ ವಾಸಿಸುತ್ತಿರುವ ಜನರು ನದಿ ನೀರು ಉಕ್ಕಿ ಹರಿಯುವ ಹಾಗೂ ಪ್ರವಾಹದಿಂದ ಮುಳುಗಡೆಯಾಗುವ ಆತಂಕ ಎದುರಿಸುತ್ತಿದ್ದಾರೆ.

ಕಳೆದ ಎರಡು ದಿನದಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದು, ಈಗಾಗಲೇ ದ. ಕೊಡಗಿನ ಗೋಣಿಕೊಪ್ಪದಿಂದ ಹುದಿಕೇರಿ-ಕುಟ್ಟ ಮೂಲಕ ಕೇರಳಕ್ಕೆ ಸಂಪರ್ಕ ಬೆಸೆಯುವ ಅಂತರಾಜ್ಯ ಹೆದ್ದಾರಿ ಪೋಕಳತೋಡು ಎಂಬಲ್ಲಿ ಭೂಕುಸಿತದಿಂದ ಸಂಪರ್ಕ ಕಡಿತವಾಗಿದೆ.

ಇನ್ನೊಂದು ಅಂತರಾಜ್ಯ ಹೆದ್ದಾರಿ ಕಾನೂರು-ಕುಟ್ಟ ಮೂಲಕ ಕೇರಳಕ್ಕೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಕಾನೂರು ಲಕ್ಷ್ಮಣತೀರ್ಥ ನದಿಯ ಸೇತುವೆಯ ಒಂದು ಭಾಗಕ್ಕೆ ಹಾನಿಯಾಗಿದ್ದು ಬೃಹತ್ ವಾಹನ ಆತಂಕದಿಂದಲೇ ಸಂಚರಿಸುವಂತಾಗಿದೆ.

ಬಿರುನಾಣಿ-ಹುದಿಕೇರಿ ನಡುವೆ ಪೊರಾಡು ಗ್ರಾಮದ ಮೂಲಕ ಸಂಪರ್ಕ ಕಲ್ಪಿಸುವ ನೂತನ ರಸ್ತೆಯಲ್ಲಿಯೂ ಹಲವು ಕಡೆ ಭೂಕುಸಿತ ಉಂಟಾಗಿದ್ದು, ಪೊರಾಡು ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತ ಉಂಟಾಗಿರುವದು ಗೋಚರಿಸಿದೆ.

ಲಕ್ಷ್ಮಣ ತೀರ್ಥ ನದಿಯ ಪ್ರವಾಹದಿಂದ ನಾಲ್ಕೇರಿ, ಬಲ್ಯಮುಂಡೂರು, ಕಾನೂರು, ಕೋತೂರು, ನಿಟ್ಟೂರು, ಕೊಟ್ಟಗೇರಿ, ನಲ್ಲೂರು, ಬಾಳೆಲೆ ಗ್ರಾಮಗಳಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿದ್ದು, ಮಳೆ ಇಳಿಮುಖವಾಗಿರುವದರಿಂದ ಪ್ರವಾಹ ತಗ್ಗಿದೆ.

ನಿರಂತರ ಮಳೆಯಿಂದ ದ.ಕೊಡಗಿನ ಘಟ್ಟ ಪ್ರದೇಶಗಳಾದ ಕುಟ್ಟ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ಬಿರುನಾಣಿ, ಹುದಿಕೇರಿ, ಬಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಾರೀ ಪ್ರಮಾಣದಲ್ಲಿ ಕಾಫಿ, ಕರಿಮೆಣಸು, ಅಡಿಕೆ, ಮತ್ತು ಭತ್ತದ ಬೆಳೆಗಳಿಗೆ ಹಾನಿಯಾಗಿದೆ.