ಕುಶಾಲನಗರ, ಆ. 22: ಕುಶಾಲನಗರ ವ್ಯಾಪ್ತಿಯ ಬಡಾವಣೆಗಳ ಮನೆಗಳಲ್ಲಿ ನದಿ ನೀರು ತುಂಬಿ 7 ದಿನಗಳ ನಂತರ ಖಾಲಿಯಾಗಿದ್ದು, ಇದೀಗ ಇಡೀ ಪ್ರದೇಶ ಕೆಸರು ಮಯವಾಗುವದ ರೊಂದಿಗೆ ವಾಸನೆಯಿಂದ ಕೂಡಿರುವದು ಕಂಡುಬಂದಿದೆ. ನೀರಿನಲ್ಲಿ ಗಿಡಗಂಟಿಗಳು, ಸತ್ತು ಹೋಗಿರುವ ಸಣ್ಣ ಸಣ್ಣ ಪ್ರಾಣಿಗಳು ಕೊಳೆತು ನಿಂತಿದ್ದು ಸಾಂಕ್ರಾಮಿಕ ರೋಗ ಹಬ್ಬುವ ಭೀತಿ ಎದುರಾಗಿದೆ.

ಕುಶಾಲನಗರ, ಕೊಪ್ಪ ಮತ್ತಿತರ ವ್ಯಾಪ್ತಿಯಲ್ಲಿ ಇಡೀ ಪ್ರದೇಶವೇ ರಣರಂಗದಂತೆ ಕಂಡುಬರುತ್ತಿದ್ದು ತಕ್ಷಣ ಸ್ವಚ್ಛತೆ ಕಾಪಾಡದಿದ್ದಲ್ಲಿ ಅನಾಹುತ ಎದುರಾಗಲಿದೆ ಎಂದು ನಾಗರೀಕರು ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಆರೋಗ್ಯ ಇಲಾಖೆಯ ತಂಡ ಕುಶಾಲನಗರಕ್ಕೆ ಭೇಟಿ ನೀಡಿದ್ದು ಈ ನಿಟ್ಟಿನಲ್ಲಿ ಸ್ವಚ್ಛತೆಗಾಗಿ ಕಾರ್ಯಕ್ರಮಗಳನ್ನು ಕೈಗೊಂಡಿರುವದು ಕಂಡುಬಂದಿದೆ. ನದಿ ತಟದ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ವಸ್ತುಗಳು ರಾಶಿ ರಾಶಿಯಾಗಿ ಬಿದ್ದಿದ್ದು ಅವುಗಳನ್ನು ತೆರವುಗೊಳಿಸುವ ಕಾರ್ಯ ತಕ್ಷಣ ಆಗಬೇಕಾಗಿದೆ. ಹಾವುಗಳು, ಚೇಳು, ಹುಳ ಹುಪ್ಪಟೆಗಳು ಅಲ್ಲಲ್ಲಿ ಸತ್ತು ಬಿದ್ದಿರುವ ದೃಶ್ಯ ಕಾಣಬಹುದು. ಮನೆಯ ಸುತ್ತಮುತ್ತಲೂ ಡಿಡಿಟಿ ಪೌಡರ್, ಬ್ಲೀಚಿಂಗ್ ಪೌಡರ್, ಡೆಟಾಲ್, ಫಿನಾಯಿಲ್ ಸಿಂಪಡಿಸಿ ಸ್ವಚ್ಛತೆ ಕಾಪಾಡಲು ಸ್ಥಳೀಯ ಆಡಳಿತ ಕೆಲಸ ನಿರ್ವಹಿಸುತ್ತಿದೆ.

ಮನೆಯ ಚರಂಡಿ ಸಂಪೂರ್ಣ ತ್ಯಾಜ್ಯಮಯವಾಗಿದ್ದು ಇನ್ನೊಂದೆಡೆ ಶೌಚಾಲಯ ಗುಂಡಿಗಳಲ್ಲಿ ನೀರು ತುಂಬಿದೆ. ಕುಡಿವ ನೀರಿನ ಸಂಪ್‍ಗಳಲ್ಲಿ ತ್ಯಾಜ್ಯ ಮಿಶ್ರಿತ ಕಲುಷಿತ ನೀರು ಸೇರಿದೆ. ಕೊಳವೆ ಬಾವಿಗಳಲ್ಲಿ ಕಲುಷಿತ ನೀರು ತುಂಬಿದ್ದು ಒಂದೆಡೆಯಾದರೆ ಕೆಲವೆಡೆ ಕೊಳವೆ ಬಾವಿಗಳಿಂದ ನೀರು ಉಕ್ಕಿ ಹರಿಯುತ್ತಿರುವ ದೃಶ್ಯಗಳು ಕಾಣಬಹುದು. ಕುಡಿಯುವ ಶುದ್ದ ನೀರಿಗಾಗಿ ಜನತೆ ಹಾಹಾಕಾರ ಎದುರಿಸುತ್ತಿರುವದು ಸಾಮಾನ್ಯ ದೃಶ್ಯವಾಗಿದೆ. ಇದೀಗ ಬೆಂಗಳೂರಿನಿಂದ ಮತ್ತಿತರ ಕಡೆಯಿಂದ ಪರಿಹಾರವಾಗಿ ಸರಬರಾಜಾಗಿರುವ ಬಾಟಲ್ ನೀರು ಎಲ್ಲರ ದಾಹವನ್ನು ತೀರಿಸುತ್ತಿದೆ ಎಂದರೆ ತಪ್ಪಾಗಲಾರದು.

-ಸಿಂಚು