ಕುಶಾಲನಗರ, ಆ. 23: ಹಲವು ದಶಕಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ನಿವೃತಿಯಾದರೂ ಕನಿಷ್ಟ ಸೂರು ಪಡೆಯುವಲ್ಲಿ ಮಾತ್ರ ಆನೆ ಮಾವುತ, ಕಾವಾಡಿಗರು ವಂಚಿತರಾಗಿರುವ ಪ್ರಕರಣ ಕುಶಾಲನಗರ ಸಮೀಪದ ಆನೆಕಾಡು ಸಾಕಾನೆ ಶಿಬಿರದಲ್ಲಿ ಕಾಣಬಹುದು. ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಒತ್ತಿನಲ್ಲಿರುವ ಆನೆಕಾಡು ಅರಣ್ಯ ವಸತಿಗೃಹ ಸಮೀಪದಲ್ಲಿ ದುಬಾರೆಯಿಂದ ಮೂರು ಸಾಕಾನೆಗಳನ್ನು ಸಲಹಲಾಗುತ್ತಿದ್ದು ಇದನ್ನು ನಿರ್ವಹಿಸಲು 15 ಕ್ಕೂ ಅಧಿಕ ನೌಕರರು ಸಿಬ್ಬಂದಿಗಳು ಹಾಗೂ ದಿನಗೂಲಿ ನೌಕರರು ದುಡಿಯುತ್ತಿದ್ದಾರೆ. ಆದರೆ ಆನೆಗಳನ್ನು ಸಲಹುವ ಮಾವುತ ಕಾವಾಡಿಗರಿಗೆ ಮಾತ್ರ ಇಲ್ಲಿ ಶಾಶ್ವತ ಸೂರುಗಳಿಲ್ಲದೆ ಮುರುಕಲು ಗುಡಿಸಲುಗಳಲ್ಲಿ ಚಳಿ, ಮಳೆ ನೀರಿಗೆ ಮೈಯೊಡ್ಡಿ ಬದುಕುವ ದುಸ್ಥಿತಿ ಎದುರಾಗಿದೆ.

ಆನೆಕಾಡು ಹಾಗೂ ಅತ್ತೂರು ಅರಣ್ಯ ವಲಯದ ವ್ಯಾಪ್ತಿಯ ಈ ಶಿಬಿರದಲ್ಲಿ ಹರ್ಷ, ವಿಜಯ, ವಿಕ್ರಂ ಆನೆಗಳನ್ನು ಸಲಹಲಾಗುತ್ತಿದ್ದು, ಮಾವುತ-ಕಾವಾಡಿಗರು ಕೆಲಸ ನಿರ್ವಹಿಸುತ್ತಿದ್ದಾರೆ. ವಿಶೇಷ ಅಂಶವೆಂದರೆ ಈ ಶಿಬಿರದಲ್ಲಿರುವ ಹರ್ಷ ಸಾಕಾನೆಗೆ ಚಿಕ್ಕ ಎಂಬ ಮಾವುತ ಮಾತ್ರ ಪ್ರೀತಿ ಪಾತ್ರನಾಗಿದ್ದು ಉಳಿದಂತೆ ಇತರ ಸಿಬ್ಬಂದಿಗಳ ಹತೋಟಿಗೂ ಹರ್ಷ ಬಗ್ಗುವದಿಲ್ಲ ಎನ್ನುವ ಖಚಿತ ಮಾಹಿತಿ ಹೊರಬಿದ್ದಿದೆ. ಮಾವುತ ಚಿಕ್ಕ ಕಳೆದ ಕೆಲವು ವರ್ಷಗಳ ಹಿಂದೆ ವಯೋನಿವೃತ್ತಿ ಹೊಂದಿದ್ದರೂ ಪ್ರಸಕ್ತ ಹರ್ಷನ ಮಾವುತನಾಗಿ ಕೆಲಸ ಮುಂದುವರೆಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಚಿಕ್ಕ ನಿವೃತ್ತಿ ಹೊಂದಿದರೂ ಈತನಿಗೆ ಶಾಶ್ವತ ಸೂರು ಕಲ್ಪಿಸುವಲ್ಲಿ ಇಲಾಖೆ ವಿಫಲವಾಗಿದೆ ಎಂದರೆ ತಪ್ಪಾಗಲಾರದು. ಈ ಶಿಬಿರದಲ್ಲಿರುವ ಐದಾರು ಸಿಬ್ಬಂದಿಗಳ ಕುಟುಂಬಗಳಿಗೆ ಯಾವದೇ ರೀತಿಯ ಶಾಶ್ವತ ಸೂರುಗಳಿಲ್ಲದೆ ವೃದ್ದರು, ಮಕ್ಕಳು ಮಳೆಯಲ್ಲಿಯೇ ತೊಯ್ದುಕೊಂಡು ಜೀವನ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ. ಒಂದೆಡೆ ನಿರಂತರ ಮಳೆ, ಆನೆಗಳ ಓಡಾಟದಿಂದ ಕೆಸರುಮಯವಾಗಿರುವ ರಸ್ತೆ,

ಇನ್ನೊಂದೆಡೆ ಮೀಸಲು ಅರಣ್ಯದಿಂದ ಕಾಡಾನೆಗಳ ಲಗ್ಗೆ ಈ ಭಯಾನಕ ವ್ಯವಸ್ಥೆ ನಡುವೆ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಕಡಿತ. ಇಷ್ಟೊಂದು ಸಮಸ್ಯೆಗಳ ಆಗರದಲ್ಲಿ ವಿಶ್ವವಿಖ್ಯಾತ ದಸರಾಗೆ ತೆರಳುವ ಮೂರು ಆನೆಗಳನ್ನು ದಿನದ 24 ಗಂಟೆಗಳ ಕಾಲ ಕಣ್ಣಿಗೆ ಕಣ್ಣಿಟ್ಟು ಗಮನಹರಿಸಬೇಕಾಗಿದೆ.

ಕೇವಲ ದಸರಾ ಸಂದರ್ಭದಲ್ಲಿ ಮಾತ್ರ ಮಾವುತ ಕಾವಾಡಿಗರನ್ನು ಗಮನಿಸುವ ಅರಣ್ಯ ಇಲಾಖೆ ಮತ್ತು ಸರಕಾರ ಉಳಿದ ದಿನಗಳಲ್ಲಿ ಇವರ ಬಗ್ಗೆ ಯಾವದೇ ಕಾಳಜಿ ವಹಿಸದಿರುವದು ವಿಷಾದನೀಯ ಎನ್ನಬಹುದು. ಕಳೆದ 17 ವರ್ಷಗಳಿಂದ ಸತತವಾಗಿ ದಸರಾದಲ್ಲಿ ತನ್ನ ಆನೆ ಹರ್ಷನೊಂದಿಗೆ ಪಾಲ್ಗೊಳ್ಳುವ ಚಿಕ್ಕ ಇದೀಗ 65 ವರ್ಷ ವಯೋಮಾನದಲ್ಲಿ ಕೂಡ ತನ್ನ ಮುದ್ದಿನ ಹರ್ಷ ಆನೆಯನ್ನು ಚಟುವಟಿಕೆಯಿಂದ ಸಲಹುತ್ತಿರುವದು ನಿಜಕ್ಕೂ ಶ್ಲಾಘನೀಯ ಅಂಶ.

ಚಿಕ್ಕನ ಪುತ್ರ ಅಶೋಕ ಕೂಡ ಕಳೆದ ಹಲವು ವರ್ಷಗಳಿಂದ ಸಾಕಾನೆ ಕಾವಾಡಿಗನಾಗಿ ಸೇವೆ ಸಲ್ಲಿಸುತ್ತಿದ್ದು ಉಳಿದಂತೆ ಕುಟುಂಬ ಸದಸ್ಯರಿಗೆ ಯಾವದೇ ಸಮರ್ಪಕವಾದ ಮೂಲಭೂತ ಸೌಲಭ್ಯವನ್ನು ಅರಣ್ಯ ಇಲಾಖೆ ಕಲ್ಪಿಸಲು ಮುಂದಾಗದಿರುವದು ಮಾತ್ರ ಕಂಡುಬರುತ್ತಿದೆ. ಇದೀಗ ಕಾಡಿನಿಂದ ಗಾಯಗೊಂಡು ಆನೆಕಾಡು ಶಿಬಿರದಲ್ಲಿ ಆರೈಕೆಯಲ್ಲಿರುವ ಕುಂಟಾನೆಯನ್ನು ಕೂಡ ಚಿಕ್ಕ ಮತ್ತು ಆತನ ಕುಟುಂಬ ಸದಸ್ಯರೇ ಸಲಹುತ್ತಿದ್ದಾರೆ.

ಆದರೆ ಈ ಕುಟುಂಬ ಸದಸ್ಯರಿಗೆ ಸಲ್ಲಬೇಕಾದ ದಿನಗೂಲಿ ಆಧಾರದ ಮಾಸಿಕ ವೇತನ ಮಾತ್ರ ಕಳೆದ 5 ತಿಂಗಳಿನಿಂದ ನೀಡದಿರುವದು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಆನೆಕಾಡು ಸಾಕಾನೆ ಶಿಬಿರದ ಸಿಬ್ಬಂದಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಕೂಡಲೇ ಯೋಜನೆ ರೂಪಿಸಿ ಇಲ್ಲಿನ ಜನರ ಬದುಕಿಗೆ ಕಾಯಕಲ್ಪ ಕಲ್ಪಿಸಬೇಕಾಗಿದೆ. - ಚಂದ್ರಮೋಹನ್