ಮಡಿಕೇರಿ, ಆ. 22: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ತೀವ್ರ ಹಾನಿಗೀಡಾಗಿರುವ ಪ್ರದೇಶಗಳ 61 ಶಾಲೆಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲಾ ಶಾಲಾ-ಕಾಲೇಜುಗಳನ್ನು ತಾ. 23 ರಿಂದ (ಇಂದು) ಪುನರ್ ಆರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶಾಸಕ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್, ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ನಂತರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರು ಮಾತನಾಡಿ, ಅತಿವೃಷ್ಟಿಯಿಂದಾಗಿ ಸಂತ್ರಸ್ತರು ಸಂಕಷ್ಟಕ್ಕೆ ತುತ್ತಾಗಿದ್ದು, ಸಂತ್ರಸ್ತರ ಮಕ್ಕಳ ಶಿಕ್ಷಣಕ್ಕಾಗಿ ಐದು ಸಾವಿರ ಶಾಲಾ ಪುಸ್ತಕ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಮಕ್ಕಳಿಗೆ ಶಾಲಾ ಪಠ್ಯ ಚಟುವಟಿಕೆ ಆರಂಭಿಸಲಾಗಿದೆ.

ಈಗಾಗಲೇ ಸಂತ್ರಸ್ತರಿಗೆ ರಾಜ್ಯದ ವಿವಿಧ ಭಾಗಗಳಿಂದ ಆಹಾರ ಹಾಗೂ ಇತರ ಸಾಮಾಗ್ರಿಗಳು ಪೂರೈಕೆಯಾಗಿದ್ದು ಜಿಲ್ಲೆಯಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರಗಳ ಸಂತ್ರಸ್ತರಿಗೆ ವ್ಯವಸ್ಥಿತವಾಗಿ ಮತ್ತು ಉತ್ತಮ ಆಹಾರ ಪೂರೈಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಪರಿಹಾರ ಕೇಂದ್ರಗಳಲ್ಲಿ ಯಾವದೇ ರೀತಿಯ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಲೋಪಗಳು ಕಂಡುಬಂದರೆ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚರಿಕೆ ನೀಡಿದರು.

(ಮೊದಲ ಪುಟದಿಂದ)

ಪರಿಹಾರ ಕೇಂದ್ರಗಳಲ್ಲಿ ಶಾಲೆ ಆರಂಭಿಸಿ

ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಪರಿಹಾರ ಕೇಂದ್ರಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಗುರುವಾರದಿಂದ ಶಾಲೆಗಳನ್ನು ಪ್ರಾರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪರಿಹಾರ ಕಾರ್ಯದ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ರಸ್ತೆ ಸಂಪರ್ಕ ಸುಸ್ಥಿತಿಯಲ್ಲಿರುವ ಕಡೆಗಳಲ್ಲಿ ಶಾಲೆಗಳನ್ನು ಪ್ರಾರಂಭಿಸುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಇದೇ ಭಾನುವಾರ ನಡೆಯಲಿ ರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿವಿಧ ಹುದ್ದೆಗಳಿಗೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕೊಡಗು ಭಾಗದ ಅಭ್ಯರ್ಥಿಗಳಿಗೆ ಮುಂದೂಡಲಾಗಿದೆ ಎಂದು ಸಚಿವರು ತಿಳಿಸಿದರು.