ಶ್ರೀಮಂಗಲ, ಆ. 22: ಜಿಲ್ಲೆಯ ಅರಣ್ಯ ಇಲಾಖೆಯ ದಿನಗೂಲಿ ವಾಹನ ಚಾಲಕರ ಸಂಘ ಅಸ್ಥಿತ್ವಕ್ಕೆ ಬಂದಿದೆ. ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ (ಪಿಸಿಪಿ) ವಾಹನ ಚಾಲಕರ ಸಂಘದ ಅಧ್ಯಕ್ಷ ಎ.ಎಂ.ನಾಗರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಜಿಲ್ಲಾ ಅರಣ್ಯ ಇಲಾಖೆಯ ದಿನಗೂಲಿ ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿ ಶ್ರೀಮಂಗಲ ಅರಣ್ಯ ವಲಯದ ಎಸ್.ಎಸ್. ಹರೀಶ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭ ಮಾತನಾಡಿದ ರಾಜ್ಯ ಸಂಘದ ಅಧ್ಯಕ್ಷ ಎ. ಎಂ. ನಾಗರಾಜು ಕೊಡಗು ವೃತ್ತದ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ದಿನಗೂಲಿ (ಪಿಸಿಪಿ) ನೌಕರರಾಗಿ ಕಳೆದ 5ರಿಂದ 15 ವರ್ಷಗಳಿಗೂ ಹೆಚ್ಚಿನ ಅವಧಿಯ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ವಾಹನ ಚಾಲಕರಿಗೆ ಸೇವಾ ಸೌಲಭ್ಯಗಳ ಹಾಗೂ ಸೇವಾ ಭದ್ರತೆಯ ಬಗ್ಗೆ ಅನುಕೂಲವಾಗಲು ಸಂಘವನ್ನು ರಚನೆ ಮಾಡಲು ನಿರ್ಧರಿಸುವದಾಗಿ ಹೇಳಿದರು. ದಿನಗೂಲಿ (ಪಿಸಿಪಿ) ನೌಕರರು ಒಗ್ಗೂಡಿ ಸಂಘಟಿತ ಹೋರಾಟ ಮಾಡಬೇಕು. ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಾಹನ ಚಾಲಕರಿಗೆ ಯಾವದೇ ಸೇವಾ ಭದ್ರತೆ ಇಲ್ಲದಿರುವದರಿಂದ ಹಾಗೂ ನೌಕರರು ಇತರ ವರ್ಗದ ನೌಕರರಿಗಿಂತ ಹೆಚ್ಚಿನ ಸೇವೆ ಸಲ್ಲಿಸಿದ್ದರೂ ಇವರಿಗೆ ಉತ್ತಮ ವೇತನ, ಭತ್ಯೆಗಳು ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವದು ಎಂದು ಹೇಳಿದರು. ನೂತನ ಅಧ್ಯಕ್ಷ ಎಸ್.ಎಸ್. ಹರೀಶ್ ಮಾತನಾಡಿ ಚಾಲಕರು ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತಾರೆ. ನಮಗೆ ಸಿಗುತ್ತಿರುವ ವೇತನ ಯಾವದಕ್ಕೂ ಸಾಕಾಗುವದಿಲ್ಲ. ಸೇವೆ ಖಾಯಂ ಗೊಳಿಸಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು. ಸಭೆಯಲ್ಲಿ ಕೊಡಗು ವೃತ್ತದ ಅರಣ್ಯ ಇಲಾಖೆಯ ವಾಹನ ಚಾಲಕರ ಸಂಘಕ್ಕೆ ಆಯ್ಕೆ ನಡೆಯಿತು. ಇದರಲ್ಲಿ ಉಪಾಧ್ಯಕ್ಷರಾಗಿ ಶಿವರಾಜ್ ಕಾರ್ಯದರ್ಶಿ ಮಹೇಶ್ ಪಿ. ಖಜಾಂಚಿ ಬಿ.ಎಲ್. ಹರೀಶ್ ನಿರ್ದೇಶಕರುಗಳಾಗಿ 14 ಮಂದಿ ಯನ್ನು ಆಯ್ಕೆ ಮಾಡಲಾಯಿತು.