ಸೋಮವಾರಪೇಟೆ,ಆ.21: ಮನೆಯಿಂದ ಸಾಮಗ್ರಿ ತರಲೆಂದು ತೆರಳಿದವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಟ್ಟಿಹೊಳೆ ನಿವಾಸಿ ಫ್ರಾನ್ಸಿಸ್(ಅಪ್ಪು-47) ಎಂಬವರು ತಾ. 17ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆಯ ಹಿಂಭಾಗದಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ಬರುವದಾಗಿ ತೆರಳಿದವರು ನಂತರ ವಾಪಸ್ ಬಂದಿಲ್ಲ ಎಂದು ಅವರ ಪತ್ನಿ ಫ್ಲೇವಿಯಾ ಜ್ಯೋತಿ ಅವರು ದೂರು ನೀಡಿದ್ದಾರೆ.

ಮಣ್ಣಿನಡಿ ಶೋಧ: ಕಳೆದ ತಾ. 16ರಂದು ಸಂಜೆ 4.30ಕ್ಕೆ ಉಂಟಾದ ಭಾರೀ ಭೂಕುಸಿತದಿಂದ ನಾಪತ್ತೆಯಾಗಿರುವ ಮೂವತ್ತೊಕ್ಲು ಗ್ರಾಮದ ಉತ್ತಪ್ಪ (ಸಾಬು-62) ಅವರನ್ನು ಮಣ್ಣಿನಡಿ ಹುಡುಕುವ ಕಾರ್ಯ ಆರಂಭವಾಗಿದೆ.

ಶಾಸಕ ಅಪ್ಪಚ್ಚು ರಂಜನ್, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಣ್ಣ ಅವರ ಉಪಸ್ಥಿತಿಯಲ್ಲಿ, ಸ್ಥಳೀಯರ ನೆರವಿನೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ಶೋಧ ಕಾರ್ಯ ಆರಂಭವಾಗಿದೆ.

ತಾ. 16ರಂದು ಉಂಟಾದ ಭಾರೀ ಭೂ ಕುಸಿತದಿಂದ ಮನೆ ಸಂಪೂರ್ಣ ಮಣ್ಣಿನಡಿ ಮುಚ್ಚಿ ಹೋಗಿದ್ದು, ಮನೆಯೊಳಗೆ ಮಲಗಿದ್ದ ಉತ್ತಪ್ಪ ಅವರು ಮಣ್ಣಿನಡಿ ಸಿಲುಕಿರುವ ಸಂಶಯದ ಹಿನ್ನೆಲೆ ಶೋಧ ಕಾರ್ಯಾಚರಣೆ ಆರಂಭವಾಗಿದೆ.