ಸೋಮವಾರಪೇಟೆ, ಆ. 21: ಬೆಂಗಳೂರು ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ತಂಡದಿಂದ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಪರಿಹಾರ ಕೇಂದ್ರಗಳಿಗೆ ನೆರವು ಒದಗಿಸಲಾಯಿತು.
ಸುಮಾರು 6 ಟ್ರಕ್‍ಗಳಲ್ಲಿ ಅಕ್ಕಿ, ಬೇಳೆ, ಖಾರದ ಪುಡಿ, ಎಣ್ಣೆ ಸೇರಿದಂತೆ ದಿನ ಬಳಕೆಯ ವಸ್ತುಗಳ ಪ್ಯಾಕೇಟ್‍ಗಳನ್ನು ಸಂತ್ರಸ್ತರಿಗೆ ವಿತರಿಸಲಾಯಿತು. ಇವರೊಂದಿಗೆ ಕಾರ್ಪೋರೇಟರ್ ಎಂ. ನಾಗರಾಜು ಸೇರಿದಂತೆ ಬೆಂಗಳೂರಿನಿಂದ ಆಗಮಿಸಿದ್ದ ತಂಡ ತಾಲೂಕು ವ್ಯಾಪ್ತಿಯಲ್ಲಿ ಸಂಚರಿಸಿ ಪರಿಹಾರ ಕೇಂದ್ರಗಳಿಗೆ ನೆರವು ಒದಗಿಸಲಾಯಿತು. ಜಿಲ್ಲಾಧಿಕಾರಿಯಿಂದ ಪರಿಶೀಲನೆ: ಪ್ರವಾಹ ಪೀಡಿತ ಕೊಡಗಿಗೆ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿನ ಕೊಡವ ಸಮಾಜಕ್ಕೆ ಆಗಮಿಸಿದ ಸಂದರ್ಭ, ಕೇಂದ್ರಕ್ಕೆ ಪೊಲೀಸ್ ಭದ್ರತೆ ಒದಗಿಸುವಂತೆ ಕೊಡವ ಸಮಾಜದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮನವಿ ಮಾಡಿದರು.
ಸವಿತಾ ಸಮಾಜದಿಂದ ಉಚಿತ ಸೇವೆ: ಪ್ರವಾಹದ ಒತ್ತಡಕ್ಕೆ ಸಿಲುಕಿ ಸಂತ್ರಸ್ತರಾಗಿ ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವ ಮಂದಿಗೆ ಸವಿತಾ ಸಮಾಜದಿಂದ ಉಚಿತ ಸೇವೆ ಒದಗಿಸಲಾಯಿತು. ಕೇಂದ್ರದಲ್ಲಿರುವ ಪುರುಷರು, ಮಕ್ಕಳಿಗೆ ಉಚಿತವಾಗಿ ಕ್ಷೌರ ಮಾಡಲಾಯಿತು.