ಸೋಮವಾರಪೇಟೆ,ಆ.21: ಈವರೆಗೆ ಕಂಡೂ ಕೇಳರಿಯದ ರೀತಿಯಲ್ಲಿ ಉಂಟಾಗಿರುವ ಜಲ ಪ್ರಳಯಕ್ಕೆ ಪುಷ್ಪಗಿರಿ ಬೆಟ್ಟತಪ್ಪಲು ಪ್ರದೇಶದಲ್ಲಿ ಲೆಕ್ಕಕ್ಕೆ ಸಿಗದಷ್ಟು ಹಾನಿ ಸಂಭವಿಸಿದೆ. ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತದ ಎಡಭಾಗದಲ್ಲಿರುವ ಬೆಟ್ಟದಲ್ಲಿ ಕುಸಿತ ಉಂಟಾಗಿದ್ದರೆ, ಮೇರನಕೋಟೆ ಬೆಟ್ಟದಲ್ಲೂ ಆತಂಕ ಮನೆ ಮಾಡಿದೆ.
ಮಲ್ಲಳ್ಳಿ ಜಲಪಾತದ ಸೌಂದರ್ಯಕ್ಕೆ ಇಂಬು ನೀಡಿದ್ದ ಎಡಭಾಗದ ಬೆಟ್ಟದಲ್ಲಿ ಹತ್ತಾರು ಏಕರೆಯಷ್ಟು ಕುಸಿತ ಸಂಭವಿಸಿದೆ. ಇದರೊಂದಿಗೆ ಜಲಪಾತಕ್ಕೆ ನಿರ್ಮಿಸಿರುವ ಮೆಟ್ಟಿಲುಗಳಲ್ಲಿ ಹತ್ತಾರು ಮೆಟ್ಟಿಲು, ರೈಲಿಂಗ್ಸ್ ಕಂಬಿಗಳು ಕಿತ್ತು ಹೋಗಿವೆ.
ಕುಮಾರಳ್ಳಿ ಬಾಚಳ್ಳಿ ಗ್ರಾಮದಲ್ಲಿರುವ ಮೇರನಕೋಟೆ ಬೆಟ್ಟ ಎರಡೂ ಭಾಗಕ್ಕೆ ಕುಸಿಯುತ್ತಿದೆ. ಬೆಟ್ಟದ ಆಚೆ ಬದಿಯಲ್ಲಿ ಸಕಲೇಶಪುರಕ್ಕೆ ಸೇರಿದ ಪಟ್ಲ, ಬಾಣಗೇರಿ ಗ್ರಾಮಗಳಿದ್ದು, ಈಚೆ ಬದಿಯಲ್ಲಿ ಮಲ್ಲಳ್ಳಿ ಗ್ರಾಮವಿದೆ. ಎತ್ತರದ ಬೆಟ್ಟವಾದ ಮೇರನಕೋಟೆ ಬೆಟ್ಟದ ಎರಡೂ ಭಾಗಗಳಲ್ಲಿ ಕುಸಿತ ಉಂಟಾಗಿದ್ದು, ಮಲ್ಲಳ್ಳಿ, ಹಂಚನಳ್ಳಿ ಮತ್ತು ಬಾಣಗೇರಿಗೆ ಆತಂಕ ಎದುರಾಗಿದೆ.
ತಾಲೂಕಿನ ಪುಷ್ಪಗಿರಿ ಬೆಟ್ಟದ ತಪ್ಪಲು ಪ್ರದೇಶದ ಜನಜೀವನ ಪ್ರಕೃತಿಯ ಮುನಿಸಿಗೆ ಸಿಲುಕಿ ನಲುಗಿ ಹೋಗಿದೆ. ಅಲ್ಲಲ್ಲಿ ಹತ್ತಾರು ಏಕರೆ ಪ್ರದೇಶ ಕುಸಿಯುತ್ತಿದ್ದು, ಬೆಟ್ಟಗಳೇ ಜರುಗಿ ಜನರನ್ನು ಬೀದಿ ಪಾಲನ್ನಾಗಿಸಿದೆ.
ಶಾಂತಳ್ಳಿ ಹೋಬಳಿಯ ಕುಮಾರಳ್ಳಿ, ಕೊತ್ತನಳ್ಳಿ, ಬಾಚಳ್ಳಿ, ಮಲ್ಲಳ್ಳಿ, ಬೀದಳ್ಳಿ, ಬೆಂಕಳ್ಳಿ, ಹೆಗ್ಗಡಮನೆ ಸೇರಿದಂತೆ ಇತರ ಗ್ರಾಮಗಳ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕುಮಾರಳ್ಳಿ ಬಾಚಳ್ಳಿ ಗ್ರಾಮದಲ್ಲಿ 50 ಏಕರೆಯಷ್ಟು ಮಣ್ಣು ಕುಸಿದಿದ್ದು, ಗ್ರಾಮದ ರುದ್ರಪ್ಪ, ಮಾದಪ್ಪ, ಗೋಪಾಲ, ಮಾಚಯ್ಯ, ಸುಬ್ಬಯ್ಯ, ಚಿನ್ನಪ್ಪ, ಗಿರೀಶ, ಈರಪ್ಪ ಮತ್ತು ಕೋಡಳ್ಳಿ ಗ್ರಾಮದ ದೇವಯ್ಯ, ಗಣೇಶ, ಶಾಂತಮ್ಮ, ಚಂಗಪ್ಪರವರುಗಳ ಮನೆ ಇಂದೋ ನಾಳೆಯೋ ಕುಸಿಯುವ ಭೀತಿ ಎದುರಾಗಿದೆ. ಈ ಕುಟುಂಬಗಳನ್ನು ಕುಮಾರಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಭಾರೀ ಭೂ ಕುಸಿತದಿಂದ ಕೋಡಳ್ಳಿ ಗ್ರಾಮ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾನಿಗೀಡಾಗಿ ನದಿ ಪಾಲಾಗಿದೆ. ಮಾದಯ್ಯ, ಸುರೇಶ, ಹರೀಶ, ದೇವಕ್ಕಿ, ಮಾಚಮ್ಮ ಅವರುಗಳಿಗೆ ಸೇರಿದ ಸುಮಾರು 50 ಏಕರೆ ತೋಟ ಹಾಗೂ ಗದ್ದೆ ಭೂ ಕುಸಿತಕ್ಕೊಳಗಾಗಿದೆ. ಈ ಭಾಗದ ಜನರು ತೀರಾ ನಿರಾಶ್ರಿತರಂತಾಗಿದ್ದು, ಮಕ್ಕಳು, ವಯೋವೃದ್ದರ ಸ್ಥಿತಿ ಚಿಂತಾಜನಕವಾಗಿದೆ.
ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಇಳಿಮುಖವಾಗದಿದ್ದರೆ ಸಂಪೂರ್ಣ ಗ್ರಾಮ ಕುಸಿಯುವ ಸಂಭವವನ್ನು ಅಲ್ಲಗಳೆಯುವಂತಿಲ್ಲ ಎಂದು ಗ್ರಾಮಾಧ್ಯಕ್ಷ ಚಂಗಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರದಲ್ಲಿ ಶಾಂತಳ್ಳಿ ನಾಡ ಕಚೇರಿಯ ಕಂದಾಯ ನಿರೀಕ್ಷಕ ನಾಗೇಂದ್ರ, ಗ್ರಾಮ ಲೆಕ್ಕಿಗ ಉಮೇಶ್ ಅವರುಗಳು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದು, ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಉದ್ಯಮಿ ಹರಪಳ್ಳಿ ರವೀಂದ್ರ ಅವರು ಬೆಡ್‍ಶೀಟ್, ಸ್ವೆಟ್ಟರ್, ಉಲ್ಲನ್ ಟೋಪಿ, ಶಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.
ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ತಾಪಂ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಒಕ್ಕಲಿಗ ಯುವ ಬ್ರಿಗೇಡ್‍ನ ಅಧ್ಯಕ್ಷ ಗಿರೀಶ್ ಮಲ್ಲಪ್ಪ ಅವರುಗಳು ಭೇಟಿ ನೀಡಿ ನಿರಾಶ್ರಿತರುಗಳಿಗೆ ನೆರವು ಒದಗಿಸಿದ್ದಾರೆ.
ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಭಾರೀ ನಷ್ಟ ಸಂಭವಿಸಿದ್ದು, ಕೂಲಿಕಾರ್ಮಿಕ ಕುಟುಂಬಗಳೊಂದಿಗೆ ಕೃಷಿಕರೂ ಸಹ ನಿರಾಶ್ರಿತರಾಗಿದ್ದಾರೆ. ನೂರಾರು ಏಕರೆ ಕೃಷಿ ಭೂಮಿ ಕುಸಿದಿದ್ದರೆ, ಭಾರೀ ಮಳೆಗೆ ಕಾಫಿ ತೋಟ, ಕೃಷಿ ಗದ್ದೆಗಳು ಸಂಪೂರ್ಣ ನಷ್ಟವಾಗಿದೆ. ಈ ಹಿನ್ನೆಲೆ ಸರ್ಕಾರ ಕೃಷಿಕರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಮುಂದೆ ಕೃಷಿಕಾರ್ಯ ಕೈಗೊಳ್ಳಲು ಅಗತ್ಯ ನೆರವು ಒದಗಿಸುವಂತಾಗಬೇಕು ಎಂದು ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಂದಳ್ಳಿ ದಿನೇಶ್ ಒತ್ತಾಯಿಸಿದ್ದಾರೆ.
ಕೂಲಿಕಾರ್ಮಿಕ ಕುಟುಂಬಗಳೊಂದಿಗೆ ಕೃಷಿಕರೂ ಸಹ ನಿರಾಶ್ರಿತರಾಗಿದ್ದಾರೆ. ನೂರಾರು ಏಕರೆ ಕೃಷಿ ಭೂಮಿ ಕುಸಿದಿದ್ದರೆ, ಭಾರೀ ಮಳೆಗೆ ಕಾಫಿ ತೋಟ, ಕೃಷಿ ಗದ್ದೆಗಳು ಸಂಪೂರ್ಣ ನಷ್ಟವಾಗಿದೆ. ಈ ಹಿನ್ನೆಲೆ ಸರ್ಕಾರ ಕೃಷಿಕರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಮುಂದೆ ಕೃಷಿಕಾರ್ಯ ಕೈಗೊಳ್ಳಲು ಅಗತ್ಯ ನೆರವು ಒದಗಿಸುವಂತಾಗಬೇಕು ಎಂದು ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಂದಳ್ಳಿ ದಿನೇಶ್ ಒತ್ತಾಯಿಸಿದ್ದಾರೆ.