ಮಡಿಕೇರಿ, ಆ. 21: ಭಾರತದ ಎಪ್ಪತ್ತೆರಡನೇ ಸ್ವಾತಂತ್ರ್ಯ ದಿನಾಚರಣೆ ಕೊಡಗಿನ ಪಾಲಿಗೆ ಈ ಬಾರಿ ವರುಣನಿಂದ ಹರಣವಾಗಿ ಹೋಯಿತು. ಪ್ರತಿ ವರ್ಷದಂತೆ ಎಲ್ಲೆಡೆ ಧ್ವಜಾರೋಹಣಕ್ಕೂ ಅವಕಾಶ ವಾಗದಷ್ಟು ಮಳೆ ಸುರಿಯಲಾ ರಂಭಿಸಿತು. ಆ ಬೆನ್ನಲ್ಲೇ ಮಡಿಕೇರಿ ತಾಲೂಕಿನ ಗಾಳಿಬೀಡು ಹಾಗೂ ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಣಿ ಭೂಕುಸಿತದಿಂದ ಅನಾಹುತಗಳ ಸರಮಾಲೆ ಗೋಚರಿಸಿತು.ಪರಿಣಾಮ ಮೂವತ್ತೊಕ್ಲು ನಿವಾಸಿ ಮುಕ್ಕಾಟಿರ ಸಾಬು ಉತ್ತಪ್ಪ, ಹೆಬ್ಬೆಟ್ಟಗೇರಿ ನಿವಾಸಿ ಮಿನ್ನಂಡ ಉಮ್ಮವ್ವ ಬಿದ್ದಪ್ಪ, ಕಾಟಕೇರಿ ಗ್ರಾಮದ ಅಚ್ಚಲ್ಪಾಡಿ ಪವನ್, ಉದಯಗಿರಿ ಬಾಬಣ್ಣ, ಜೋಡುಪಾಲ ನಿವಾಸಿ ಬಸಪ್ಪ ಹಾಗೂ ಅವರ ಪುತ್ರಿ ಮೋನಿಷಾ ಈ ಆರು ಮಂದಿ ಜೀವಂತ ಮಣ್ಣಿನಡಿ ಸಮಾಧಿಗೊಂಡಿರುವದಾಗಿ ಮೃತರ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಸೇನಾ ಕಾರ್ಯಪಡೆ ಮೀಸಲು ಪೊಲೀಸ್ ಹಾಗೂ ಜಿಲ್ಲಾ ಪೊಲೀಸ್ ಸಹಿತ ಪ್ರಕೃತಿ ವಿಕೋಪ ತಡೆ ಘಟಕಗಳಿಂದ ಜಂಟಿ ಕಾರ್ಯಾಚರಣೆ ಮುಂದುವರಿದಿದ್ದು, ಕಣ್ಮರೆಯಾದವರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

ಈ ಆರು ಮಂದಿಗಾಗಿ ಕುಟುಂಬಸ್ಥರು ಕಣ್ಣೀರಿನೊಂದಿಗೆ ಅಂತಿಮ ದರ್ಶನಕ್ಕೆ ಹಾತೊರೆಯುತ್ತಿದ್ದಾರೆ.

ಮಾತ್ರವಲ್ಲದೆ ಕಾರ್ಕಳದಲ್ಲಿ ನಕ್ಸಲ್ ನಿಗ್ರಹ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಾಟಕೇರಿಯ ಮನೆಗೆ ಬಂದಿದ್ದ ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ ಸಿಬ್ಬಂದಿ ಯಶವಂತ್ (42), ವೆಂಕಟರಮಣ (46), ಜೋಡುಪಾಲದ ಮಂಜುಳ, ಗೌರಮ್ಮ, ಹೆಬ್ಬೆಟ್ಟಗೇರಿ ಮುತ್ತು ಹಾಗೂ ಸರಸ್ವತಿ ಎಂಬವರ 3 ವಾರದ ಹಸುಗೂಸು ಪ್ರಕೃತಿ ವಿಕೋಪಕ್ಕೆ ಸಿಲುಕಿ ಮೃತರಾಗಿದ್ದಾರೆ.

ದುರಂತವೆಂದರೆ ಮೃತ ಪೊಲೀಸ್ ಯಶವಂತ್ ಪತ್ನಿ ಕಳೆದ ವರ್ಷ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಪುಟ್ಟ ಗಂಡು ಮಗು ಅನಾಥನಾಗಿದ್ದಾನೆ. ಈ ಮಗುವನ್ನು ಬಂಧುಗಳು ನೋಡಿಕೊಳ್ಳುತ್ತಿದ್ದಾರೆ.