*ಗೋಣಿಕೊಪ್ಪಲು, ಆ. 20: ಮಳೆಹಾನಿಯಿಂದ ಮನೆ ಹಾಗೂ ಆಸ್ತಿಪಾಸ್ತಿ ಕಳದುಕೊಂಡ ಹತ್ತಾರು ಕುಟುಂಬಗಳು ತಿತಿಮತಿ ಸಮೀಪದ ದೇವರಪುರ ಹಾಗೂ ಅಂಬುಕೋಟೆಯಲ್ಲಿ ಆಸರೆ ಪಡೆದಿವೆ.

ಅಂಬುಕೋಟೆಯ ವಿವೇಕ್ ಅವರ ಮನೆಯಲ್ಲಿ ಮುಕ್ಕೋಡ್ಲು, ಹೆಬ್ಬೆಟ್ಟಗೇರಿಯ 50 ಜನರು ಆಸರೆ ಪಡೆದಿದ್ದರೆ ದೇವರಪುರದ ನಿವೃತ್ತ ಸೈನಿಕ ಬೋಪಯ್ಯ ಅವರ ಮನೆಯಲ್ಲಿ ಮದೆ ಜೋಡುಪಾಲದ 10 ಜನರು ನೆಲೆಸಿದ್ದಾರೆ. ಇವರಿಗೆಲ್ಲ ಸ್ಥಳೀಯ ಸಂಘಸಂಸ್ಥೆಗಳ ಜನತೆ ಹಾಗೂ ಸಾರ್ವಜನಿಕರು ಎಲ್ಲ ರೀತಿಯ ಸಹಾಯ ಮಾಡುತ್ತಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಆರ್. ಗೋವಿಂದರಾಜು ಸಬ್ ಇನ್ಸ್‍ಪೆಕ್ಟರ್ ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು. ಜನತೆಗೆ ಸಂತ್ರಸ್ತರಿಗೆ ಬೇಕಾದ ಆಹಾರ ಸಾಮಗ್ರಿಗಳು ಹಾಗೂ ಇತರ ಅವಶ್ಯಕತೆಗಳನ್ನು ಒದಗಿಸಿಕೊಡಲು ಸೂಚಿಸಿದರು.

ಮುಕ್ಕೋಡ್ಲು ಹೆಬ್ಬೆಟ್ಟಗೇರಿಯ ಜನತೆ ತಮ್ಮ ಮಕ್ಕಳನ್ನು ಕರೆದುಕೊಂಡು ಮನೆ ಮಠ, ದನಕರುಗಳನ್ನು ಬಿಟ್ಟು ಮೂರುದಿನದ ಹಿಂದೆಯೇ ಅಂಬುಕೋಟೆಯ ತಮ್ಮ ಸಂಬಂಧಿಕರ ಮನೆಗೆ ಬಂದು ಸೇರಿದ್ದಾರೆ. ಇವರ ಜತೆಯಲ್ಲಿ ಅಕ್ಕಪಕ್ಕದ ಮನೆಯವರು ಬಂದಿದ್ದಾರೆ.

ಶೌಚಾಲಯದ ಕೊರತೆ: ಸಂತ್ರಸ್ತರಿಗೆ ನೆಲೆ ಒದಗಿಸಿರುವ ವಿವೇಕ್ ಅವರ ಮನೆ ಕಾಫಿ ತೋಟದ ಒಳಗಿದೆ. ಇಲ್ಲಿ ರಸೆ ಬಹಳ ಕಿರಿದಾಗಿದ್ದು ಕೆಸರಿನಿಂದ ಕೂಡಿದೆ. ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳು ಮತ್ತಿತರ ವಸ್ತುಗಳನ್ನು ಒದಗಿಸಲು ಕಷ್ಟವಾಗುತ್ತಿದೆ. ಜತೆಗೆ 50 ಜನರಿಗೆ ಕೇವಲ ಒಂದು ಶೌಚಾಲಯ ಮಾತ್ರ ಇದೆ. ಮಲಗಲು ವಿವಿಧ ಸಂಘಸಂಸ್ಥೆಗಳು ಕಂಬಳಿ, ಹಾಸಿಗೆ ಒದಗಿಸಿದ್ದರೂ ಕಿರಿದಾದ ಮನೆಯಲ್ಲಿ ಇಷ್ಟು ಜನ ಮಲಗಲು ಕಷ್ಟವಾಗುತ್ತಿದೆ. ಈ ಕಾರಣ ತಹಶೀಲ್ದಾರ್ ಅವರು ಪರಿಹಾರ ಕೇಂದ್ರಕ್ಕೆ ಬರುವಂತೆ ಸಂತ್ರಸ್ತರಿಗೆ ಮನವಿ ಮಾಡಿಕೊಂಡಿ ದ್ದಾರೆ. ಆದರೆ ಸಂಬಂಧಿಕರ ಮನೆಯಲ್ಲಿಯೇ ಸ್ವಲ್ಪ ಸಮಯ ಇರುವದಾಗಿ ಹೇಳುತ್ತಿದ್ದಾರೆ.

ಇವರ ಆರೋಗ್ಯವನ್ನು ನೋಡಿಕೊಳ್ಳಲು ತಿತಿಮತಿ ಆಸ್ಪತ್ರೆಯ ದಾದಿಯರು ಜತೆಯಲ್ಲಿದ್ದಾರೆ. ವಿವಿಧ ಸಂಘಸಂಸ್ಥೆಗಳು, ಸರಕಾರಕ್ಕೆ ಅಗತ್ಯವಿರುವ ಔಷಧಿಗಳನ್ನು ಒದಗಿಸಿವೆ.

ದೇವರಪುರದ ಬೋಪಯ್ಯ ಅವರ ಮನೆಯಲ್ಲಿ ಇರುವ ಸಂತ್ರಸ್ತರಲ್ಲಿ 2 ತಿಂಗಳ ಮಗು ಹಾಗೂ ತಾಯಿ ಸೇರಿದ್ದಾರೆ. ಜೋಡುಪಾಲದ ಮನೆ ಕಣ್ಣೆದುರೇ ಕುಸಿದು ಬಿದ್ದಾಗ ಮಗುವನ್ನು ಬಾಚಿಕೊಂಡು ಹೊರ ಬಂದು ಮಳೆಯಲ್ಲಿಯೇ ನೆನೆಯುತ್ತಾ ಪಕ್ಕದ ಮನೆಗೆ ತೆರಳಿದ್ದಾರೆ. ಆ ಮನೆಯೂ ಕುಸಿಯತೊಡಗಿದಾಗ ಉಟ್ಟಬಟ್ಟೆಯಲ್ಲಿಯೇ ಬೆಟ್ಟ ಹತ್ತಿ ಜೀವ ಉಳಿಸಿಕೊಂಡಿದ್ದಾರೆ. ಬಳಿಕ ಮಳೆಯಲ್ಲಿಯೇ ನೆನೆಯುತ್ತಾ ರಸ್ತೆಗೆ ಬಂದು ಸಿಕ್ಕಿದ ವಾಹನದಲ್ಲಿ ಚೇರಂಬಾಣೆಗೆ ಬಂದಿದ್ದಾರೆ. ಸಂತ್ರಸ್ತರ ಕೇಂದ್ರದಲ್ಲಿದ್ದು ಶನಿವಾರ ಸಂಜೆ ದೇವರಪುರಕ್ಕೆ ಬಂದಿದ್ದಾರೆ.

ಮನೆ ಏನಾಗಿದೆ ಎಂಬದರ ಬಗ್ಗೆ ಯಾರಿಗೂ ಅರಿವಿಲ್ಲ. ನಿರಂತರವಾಗಿ ಕುಸಿಯುತ್ತಿರುವ ಬೆಟ್ಟದ ನಡುವೆ ತಾವಿದ್ದ ಸ್ಥಳಕ್ಕೂ ಹೋಗಲು ಭಯಪಡುತ್ತಿದ್ದಾರೆ. ಆದರೂ ಕೆಲವು ಪುರುಷರು ತಡೆಯಲಾಗದೆ ಸೋಮವಾರ ತಾವಿದ್ದ ಮನೆಯತ್ತ ತೆರಳಿದ್ದಾರೆ.

ಮತ್ತೆ ಆ ಸ್ಥಳಕ್ಕೆ ಹೋಗಲಾರೆವು. ಅಲ್ಲಿ ಏನೂ ಉಳಿದಿಲ್ಲ. ಸರಕಾರ ಎಲ್ಲಿ ನಮಗೆ ನೆಲ ಒದಗಿಸುತ್ತದೆಯೇ ಅಲ್ಲಿಗೆ ಹೋಗುತ್ತೇವೆ ಎಂಬದಾಗಿ ಸಂತ್ರಸ್ತರು ಹೇಳಿದರು. ಸ್ಥಳದಲ್ಲಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್, ಮಂಜು, ಕಿರಣ್ ಮತ್ತಿತರರು ಹಾಜರಿದ್ದರು.

ಇತ್ತ ಬೆಂಗಳೂರಿನಿಂದ ಸ್ಟಾರ್ ಕಂಪೆನಿಯವರು ಸಂತ್ರಸ್ತರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರ ಮನವಿಯಂತೆ ಔಷಧಿಗಳನ್ನು ಹೆಲಿಕಾಪ್ಟರ್ ಮೂಲಕ ಗೋಣಿಕೊಪ್ಪಲಿಗೆ ತಂದು ಅಲ್ಲಿಂದ ಪರಿಹಾರ ಕೇಂದ್ರಗಳಿಗೆ ತಲಪಿಸುವದಾಗಿ ಹೇಳಿದ್ದರು. ಅದರಂತೆ ಬಿಜೆಪಿ ಮುಖಂಡರಾದ ಗಿರೀಶ್ ಗಣಪತಿ, ಮಧು ದೇವಯ್ಯ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಗಾಂಧಿ ಲಯನ್ಸ್ ಕ್ಲಬ್‍ನ ಬೋಸ್ ಪೆಮ್ಮಯ್ಯ, ಮೋಹನ್ ಮುಂತಾದವರು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಮೈದಾನದಲ್ಲಿ ಕಾದುಕೊಂಡಿದ್ದರು. ಆದರೆ ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟ್ಟರ್ ಬರಲು ಸಾಧ್ಯವಾಗದೆ ಮೈಸೂರಿನಲ್ಲಿಯೇ ಇಳಿಯಿತು. ಅಲ್ಲಿಂದಲೇ ವಾಹನದ ಮೂಲಕ ಔಷಧಿಗಳನ್ನು ತರಲಾಗುವದು ಎಂದು ಗಿರೀಶ್ ಗಣಪತಿ ತಿಳಿಸಿದರು.

- ಎನ್.ಎನ್. ದಿನೇಶ್