ಸುಂಟಿಕೊಪ್ಪ, ಆ. 20: ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಬಹಳಷ್ಟು ಕುಟುಂಬಸ್ಥರು ಮನೆ ಆಸ್ತಿ ಜೀವಗಳನ್ನು ಕಳೆದುಕೊಂಡಿದ್ದಾರೆ. ಉಟ್ಟ ಬಟ್ಟೆಯಲ್ಲೇ ಬಂದು ಪರಿಹಾರ ಕೇಂದ್ರದಲ್ಲಿ ಇರುವದು ಮನಕಲಕುವಂತದ್ದು, ಇವರಿಗೆ ಶಾಶ್ವತವಾದ ಪರಿಹಾರ ಕಲ್ಪಿಸಿ ಕೊಡಲು ರಾಜ್ಯ ಸರಕಾರ ಹಾಗೂ ಕೇಂದ್ರದ ನೆರÀವಿನೊಂದಿಗೆ ಮುಂದಾಗುತ್ತೇನೆ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ನುಡಿಯಾಡಿದರು.

ಸುಂಟಿಕೊಪ್ಪದ ಮೀನಾಕ್ಷಮ್ಮ ಕಲ್ಯಾಣ ಮಂಟಪ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆ, ಸಂತಮೇರಿ ಆಂಗ್ಲ ಮಾಧ್ಯಮ ಶಾಲೆ, ಖತೀಜ ಉಮ್ಮ ಮದ್ರಾಸಾದಲ್ಲಿ ಹಾಲೇರಿ, ಕಾಂಡನಕೊಲ್ಲಿ, ಬಪ್ಪಕುಚ್ಚಿ, ಬೋಯಿಕೇರಿ, ಉಪ್ಪುತೋಡು, ಪನ್ಯ, ಸೇರಿದಂತೆ ಹಟ್ಟಿಹೊಳೆ, ಸೂರ್ಲಬ್ಬಿ, ಮುಕ್ಕೋಡ್ಲು, ವಿಭಾಗದ 1,670 ಮಂದಿ ನಿರಾಶ್ರಿತರು ಮನೆ ಮಠ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ನೆಲೆ ನಿಂತಿದ್ದನ್ನು ವೀಕ್ಷಿಸಿದ ಸಂಸದ್ ಸದಸ್ಯೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಿ.ಎಂ. ಯಡಿಯೂರಪ್ಪ ಅವರು ಪ್ರಕೃತಿ ವಿಕೋಪದಿಂದ ಕೊಡಗಿನ ಜನತೆ ಎಲ್ಲವನ್ನೂ ಕಳೆದುಕೊಂಡು ಉಟ್ಟ ಬಟ್ಟೆಯಲ್ಲಿಯೇ ಬಂದು ಇಲ್ಲಿ ನೆಲೆಸಿರುವದಕ್ಕೆ ಸಾಂತ್ವನ ವ್ಯಕ್ತಪಡಿಸಿ, ಕೇಂದ್ರ ಸರಕಾರ ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಶಾಶ್ವತವಾಗಿ ಮನೆ ನಿರ್ಮಿಸಿಕೊಡಲಿದ್ದು, 3 ತಿಂಗಳಿನಲ್ಲಿ ರಾಜ್ಯ ಸರಕಾರ ನಿರಾಶ್ರಿತರಿಗೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಇಂದು ಚರ್ಚಿಸಲಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಿ.ಎಂ. ಯಡಿಯೂರಪ್ಪ ಅವರೊಂದಿಗೆ ಸಂಸದ್ ಸದಸ್ಯೆ ಶೋಭಾ ಕರಂದ್ಲಾಜೆ, ಸಂಸದ್ ಸದಸ್ಯ ಪ್ರತಾಪ್‍ಸಿಂಹ, ಎಂಎಲ್‍ಸಿ ಎಂ.ಪಿ. ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಪಿ.ಆರ್. ಸುನೀಲ್‍ಕುಮಾರ್, ಗ್ರಾ.ಪಂ. ಮಾಜಿ. ಅಧ್ಯಕ್ಷ ಡಾ. ಶಶಿಕಾಂತ ರೈ, ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಎಸ್.ಜಿ. ಶ್ರೀನಿವಾಸ್, ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ ಹಾಜರಿದ್ದರು.