ಮಡಿಕೇರಿ, ಆ. 20: ಆರು ದಿನಗಳಿಂದ ಜಿಲ್ಲೆಯಲ್ಲಿ ಅಹರ್ನಿಶಿ ಸೇವೆ ಸಲ್ಲಿಸಿದ ಕರ್ನಾಟಕ ಪೌರ ರಕ್ಷಣಾ ಪಡೆ ಬೆಂಗಳೂರಿಗೆ ಮರಳುತ್ತಿದೆ. ಜಿಲ್ಲೆಯ ಪರಿಸ್ಥಿತಿ ಸುಧಾರಿಸುತ್ತಿದೆ ಎಂದರು.ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಕಮಾಂಡಿಂಗ್ ಆಫೀಸರ್ ಡಾ. ಸತ್ಯಪಾಲ್, ಆರು ದಿನಗಳಲ್ಲಿ ಜಿಲ್ಲೆ ವಿವಿಧೆಡೆ ಸಿಲುಕಿದ್ದ ಸುಮಾರು ಎಂಟುನೂರು ಮಂದಿಯನ್ನು ಇತರ ತಂಡಗಳೊಡನೆ ಸೇರಿ ರಕ್ಷಿಸಿದ ಹೆಮ್ಮೆಯಿದೆ ಎಂದರು.ಪೌರ ರಕ್ಷಣಾ ಪಡೆಯಲ್ಲಿ ವಿವಿಧ ರಂಗಗಳ ಪೌರ ಸೇವಾ ದೃಷ್ಟಿಯಿಂದ ಸೇವೆ ಸಲ್ಲಿಸಿದ್ದು, ಸಂಬಳಕ್ಕಿರುವ ಪಡೆ ಅದಲ್ಲ. ತಂಡದ ಸದಸ್ಯರಿಗೆ ಪ್ರವಾಹ, ಬೆಟ್ಟ ಕುಸಿತ ಹಾಗೂ ಇತರ ವಿಕೋಪ ಪರಿಸ್ಥಿತಿ ಎದುರಿಸಲು ತರಬೇತಿ ನೀಡಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಗೃಹ ಇಲಾಖೆಯಡಿ ಬರುವ ಈ ಪಡೆಗೆ ಸಾರ್ವಜನಿಕರೂ ಸೇರಬಹುದು, ತಂಡ ರಚಿಸಿಕೊಳ್ಳ ಬಹುದು ಎಂದು ಡಾ. ಸತ್ಯಪಾಲ್ ಹೇಳಿದರು. (ಮೊದಲ ಪುಟದಿಂದ) ಭಾರತೀಯ ಹ್ಯಾಮ್ ಶಿಕ್ಷಣ ನಿರ್ದೇಶಕರೂ ಆಗಿರುವ ಡಾ. ಸತ್ಯಪಾಲ್ ಜಿಲ್ಲೆಯಲ್ಲಿ ನಡೆದ ರಕ್ಷಣಾ ಕಾರ್ಯಗಳಲ್ಲಿ ಹ್ಯಾಮ್ ಸಂಪರ್ಕ ಒದಗಿಸಿರುವದಾಗಿ ಹೇಳಿದರು. ಕ್ಲಿಷ್ಟ ಸ್ಥಳಗಳಲ್ಲಿ ಕೇವಲ ಹ್ಯಾಮ್ ಮಾತ್ರ ಸಂಪರ್ಕ ಒದಗಿಸಲು ಸಾಧ್ಯವಾಗಿದ್ದು, ಪೊಲೀಸ್ ಹಾಗೂ ಅಗ್ನಿಶಾಮಕ ದಳಗಳಿಗೆ ಪೂರ್ಣ ಸಹಕಾರ ನೀಡಿರುವದಾಗಿ ಹೇಳಿದರು. ಅಗ್ನಿಶಾಮಕ ದಳದ ಬಳಿ ಸಂಪರ್ಕ ಸಲಕರಣೆಯೇ ಇಲ್ಲ ಎಂಬ ವಿಚಾರ ಬಹಿರಂಗಪಡಿಸಿದರು.

ಈ ಸಂದರ್ಭ ಮಾತನಾಡಿದ, ಮೂರನೇ ತಂಡದ ಮುಖ್ಯಸ್ಥ ಡಾ. ಮ್ಯಾಥೀವ್ ವರ್ಗೀಸ್, ತಾಜ್ ರೆಸಾಟ್ ಸೇರಿದಂತೆ ಬೆಟ್ಟಗಳ ಮೇಲೆ ನಿರ್ಮಾಣಗಳು ಹೆಚ್ಚಿದಷ್ಟು ಇಂತಹ ವಿಕೋಪ ಪರಿಸ್ಥಿತಿ ಹೆಚ್ಚುತ್ತದೆ ಎಂದರು.

ಈ ಸಂದರ್ಭ ಪಡೆಯ ಅಧಿಕಾರಿಗಳಾದ ಮಂಜುನಾಥ್ ಹಾಗೂ ವಿಜಯ ಕುಮಾರ್ ಇದ್ದರು.