ಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ : ರೇವಣ್ಣ

ಬೆಂಗಳೂರು, ಆ. 21: ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪ್ಯಾಕೆಟ್‍ಗಳನ್ನು ಎಸೆದು ತೀವ್ರ ಟೀಕೆಗೆ ಗುರಿಯಾಗಿರುವ ಸಚಿವ ರೇವಣ್ಣ ಅವರು ಮಂಗಳವಾರ ಕ್ಷಮೆ ಕೇಳಿದ್ದು, ಒಳ್ಳೆ ಕೆಲಸ ಮಾಡುವಾಗ ಇದೆಲ್ಲಾ ಸಾಮಾನ್ಯ. ಜನತೆ ಕ್ಷಮೆ ಕೇಳಬೇಕು ಅಂದ್ರೆ ಕೇಳ್ತೀನಿ ಎಂದು ಹೇಳಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಹಸಿವಿನಿಂದ ಮಕ್ಕಳು ಹಾಗೂ ಮಹಿಳೆಯರು ಬಿಸ್ಕೆಟ್ ಕೇಳುತ್ತಿದ್ದರು. ಹೀಗಾಗಿ ದೂರದಲ್ಲಿ ಕುಳಿತವರಿಗೆ ಬಿಸ್ಕೆಟ್ ಎಸೆದಿರುವೆ. ಈ ಕುರಿತಾಗಿ ಜನತೆ ಕ್ಷಮೆ ಕೇಳಬೇಕು ಎಂದರೆ ಕೇಳುತ್ತೇನೆ ಎಂದು ಲೋಕೋಪಯೋಗಿ ಸಚಿವರು ತಿಳಿಸಿದ್ದಾರೆ. ನಾನು ದೇವರನ್ನು ನಂಬುವ ವ್ಯಕ್ತಿ. ಬೇಕು ಅಂತ ಬಿಸ್ಕೆಟ್ ಎಸೆದಿಲ್ಲ. ಆ ರೀತಿಯ ಮನೋಭಾವನೆಯೂ ನನ್ನಲ್ಲಿ ಇಲ್ಲ. ಘಟನೆಯಾದ ಮಾರನೇ ದಿನ ಸುದ್ದಿ ಮಾಡಲಾಗಿದೆ. ನನ್ನಿಂದ ತಪ್ಪಾಗಿದೆ ಬಿಡಿ ಎಂದರು. ಕೊಡಗಿನಲ್ಲಿ ಕಳೆದ 25 ವರ್ಷಗಳಿಂದ ಆಯ್ಕೆಯಾಗಿರುವ ನಾಯಕರು ಹಾಗೂ ಕೇಂದ್ರ ಸಚಿವರು ಸಂತ್ರಸ್ತರ ನೆರವಿಗೆ ಬರಲಿಲ್ಲ. ಇಂತಹ ಸಂದರ್ಭದಲ್ಲಿ ನಾನು ನೆರವಿಗೆ ನಿಂತಿದ್ದೆ. ಈಗ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ರೇವಣ್ಣ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು. ನಾನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವನಲ್ಲ. ಆದರೂ ಹಗಲು, ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದೇನೆ. ಮೂರು ಸಾವಿರ ಹಾಲಿನ ಪ್ಯಾಕೇಟ್ ವಿತರಿಸಿದ್ದೇನೆ ಎಂದು ರೇವಣ್ಣ ಹೇಳಿದರು.

ಸಿಧು ಶಾಂತಿ ರಾಯಭಾರಿ : ಇಮ್ರಾನ್ ಖಾನ್

ಇಸ್ಲಾಮಾಬಾದ್, ಆ. 21: ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ತೀವ್ರ ವಿವಾದಕ್ಕೆ ಕಾರಣವಾಗಿರುವ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಶಾಂತಿಯ ರಾಯಭಾರಿ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ನನ್ನ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಸಿಧು ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಒಬ್ಬ ಶಾಂತಿಯ ರಾಯಭಾರಿ ಮತ್ತು ಅವರಿಗೆ ಪಾಕಿಸ್ತಾನದ ಜನತೆ ಅದ್ಭುತ ಪ್ರೀತಿ ಮತ್ತು ವಿಶ್ವಾಸ ನೀಡಿದ್ದಾರೆ ಎಂದು ಇಮ್ರಾನ್ ಖಾನ್ ಅವರು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಬಂದ ಸಿಧು ಅವರನ್ನು ಭಾರತದಲ್ಲಿ ಟಾರ್ಗೆಟ್ ಮಾಡುತ್ತಿರುವವರು ಉಪ ಖಂಡದಲ್ಲಿ ಶಾಂತಿಯಿಂದ ದೂರವಾಗುತ್ತಿದ್ದಾರೆ. ಶಾಂತಿ ಇಲ್ಲದೆ ನಮ್ಮ ಜನ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಮಾತುಕತೆ ಮೂಲಕ ಕಾಶ್ಮೀರ ಸೇರಿದಂತೆ ಉಭಯ ದೇಶಗಳ ನಡುವಿನ ಎಲ್ಲಾ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮಾತುಕತೆಯ ಮೂಲಕ ನಮ್ಮ ಭಿನ್ನಾಭಿಪ್ರಾಯ ಪರಿಹರಿಸಿಕೊಂಡು ವ್ಯಾಪಾರ ಆರಂಭಿಸಬೇಕು. ಬಡತನ ನಿವಾರಿಸಲು ಮತ್ತು ಉಪಖಂಡದ ಜನರನ್ನು ಮೇಲಕ್ಕೆತ್ತಲು ಉತ್ತಮವಾದ ಮಾರ್ಗವೆಂದರೆ ಮಾತುಕತೆ ಎಂದು ಪಾಕ್ ನೂತನ ಪ್ರಧಾನಿ ಹೇಳಿದ್ದಾರೆ.

ಕೇರಳಕ್ಕೆ ಯುಎಇ ರೂ. 700 ಕೋಟಿ ನೆರವು

ನವದೆಹಲಿ, ಆ. 21: ಶತಮಾನದ ಮಹಾ ಪ್ರವಾಹಕ್ಕೆ ತುತ್ತಾಗಿರುವ ಕೇರಳ ರಾಜ್ಯಕ್ಕೆ ಯುಎಇ ರೂ. 700 ಕೋಟಿ ಹಣಕಾಸಿನ ನೆರವು ನೀಡುವದಾಗಿ ಹೇಳಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಮಧ್ಯಂತರ ಪರಿಹಾರವಾಗಿ ರೂ. 500 ಕೋಟಿ ನೀಡುವದಾಗಿ ಘೋಷಿಸಿದ್ದರು, ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಹಣ ಯಾವದಕ್ಕೂ ಸಾಕಾಗುವದಿಲ್ಲ, ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವದರಿಂದ ಮತ್ತಷ್ಟು ಹೆಚ್ಚಿನ ಪರಿಹಾರ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದರು. ಈ ಸಂಬಂಧ ಟ್ವೀಟ್ ಮಾಡಿದ್ದ ರಾಹುಲ್, ಮಾನ್ಯ ಪ್ರಧಾನಿಗಳೇ ಕೇರಳ ಜನರನ್ನು ಸಮಸ್ಯೆಯಲ್ಲಿ ಸಿಲುಕಲು ಬಿಡಬೇಡಿ ಎಂದು ಹೇಳಿದ್ದರು. ಸೇನಾ ಇಂಜಿನಿಯರ್‍ಗಳು ಪ್ರವಾಹ ಪರಿಹಾರಕ್ಕೆ ನಿಂತಿದ್ದು, ಕ್ಯಾಪ್ಟನ್ ಅಮನ್ ಠಾಕೂರ್ ಎರ್ನಾಕುಲಂ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ, ಈ ತಂಡ ಸುಮಾರು 2032 ನಾಗರಿಕರನ್ನು ಇದುವರೆಗೂ ರಕ್ಷಿಸಿದೆ, ಬಾರತೀಯ ಸೇನೆ ಇದುವರೆಗೂ 10629 ಮಂದಿಯನ್ನು ರಕ್ಷಿಸಿ, 49 ಸ್ಥಳಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ.

ವಾಟ್ಸ್ ಅಪ್ ಸಂದೇಶಗಳಿಗೆ ಕಡಿವಾಣ

ನವದೆಹಲಿ, ಆ. 21: ನಕಲಿ ಹಾಗೂ ಪ್ರಚೋದನಕಾರಿ ವಾಟ್ಸ್ ಅಪ್ ಸಂದೇಶಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ಸಂದೇಶ ಕಳುಹಿಸುವವರ ಸ್ಥಳೀಯ ಅಸ್ತಿತ್ವ ಸೆಟ್ ಮಾಡುವಂತೆ ಹಾಗೂ ನಕಲಿ ಸಂದೇಶಗಳ ಮೂಲ ಪತ್ತೆಹಚ್ಚಲು ತಾಂತ್ರಿಕ ಪರಿಹಾರ ಕಂಡುಕೊಳ್ಳಿ ಎಂದು ವಾಟ್ಸ್ ಅಪ್ ಸಂಸ್ಥೆಗೆ ಸೂಚಿಸಿದೆ. ವಾಟ್ಸ್ ಅಪ್ ಮುಖ್ಯಸ್ಥ ಕ್ರಿಸ್ ಡೇನಿಲ್ಸ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು, ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಅಪ್ ಭಾರತದ ಡಿಜಿಟಲ್ ವ್ಯವಸ್ಥೆಗೆ ಸಾಕಷ್ಟು ಕೊಡುಗೆ ನೀಡಿದೆ. ಆದರೆ ಗುಂಪು ಹತ್ಯೆಗೆ ಪ್ರಚೋದನೆ ಮತ್ತು ಸೇಡಿನ ಅಶ್ಲೀಲತೆಯಂತಹ ಕೆಟ್ಟ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು ಎಂದಿದ್ದಾರೆ. ಕ್ರಿಸ್ ಡೇನಿಲ್ಸ್ ಅವರೊಂದಿಗಿನ ಮಾತುಕತೆ ಫಲಪ್ರದವಾಗಿದೆ. ನಕಲಿ ಸಂದೇಶಗಳ ಮೂಲ ಪತ್ತೆಹಚ್ಚಲು ಪರಿಹಾರ ಕಂಡುಕೊಳ್ಳುವಂತೆ ವಾಟ್ಸ್ ಅಪ್ ಸಿಇಒಗೆ ಸೂಚಿಸಲಾಗಿದೆ ಎಂದರು. ಇತ್ತೀಚಿಗಷ್ಟೇ ಸುಳ್ಳು ಮತ್ತು ಪ್ರಚೋದನಾತ್ಮಕ ಮೆಸೇಜ್‍ಗಳಿಗೆ ಕಡಿವಾಣ ಹಾಕುತ್ತಿಲ್ಲ ಎಂದು ವಾಟ್ಸ್ ಅಪ್ ಬಗ್ಗೆ ಕೇಂದ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ವಾಟ್ಸ್ ಅಪ್ ಫಾರ್ವಡ್ ಮೆಸೇಜ್‍ಗೆ ಮಿತಿ ವಿಧಿಸಿತ್ತು.

ಬಕ್ರೀದ್ ಕುರ್ಬಾನಿ ಹಣ ದಾನಕ್ಕೆ ನಿರ್ಧಾರ

ಬೆಂಗಳೂರು, ಆ. 21: ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಕೇರಳ ಹಾಗೂ ಕರ್ನಾಟಕದ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಮುಸ್ಲಿಮರು ಸಹಾಯ ಹಸ್ತ ಚಾಚಿದ್ದು, ಈ ಬಾರಿಯ ಬಕ್ರೀದ್ ಹಬ್ಬದ ವೇಳೆ ಬಂದ ಕುರ್ಬಾನಿ ಹಣವನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಮುಸ್ಲಿಂ ಸಮುದಾಯದ ಕೆಲವು ಸದಸ್ಯರು 2 ದಿನಗಳ ಹಿಂದಷ್ಟೇ ಕುರ್ಬಾನಿ ಹಣವನ್ನು ನೆರೆ ಸಂತ್ರಸ್ತರಿಗೆ ದಾನ ಮಾಡುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೆÇೀಸ್ಟ್‍ಗಳನ್ನು ಹಾಕಿದ್ದರು. ಇದಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮಂಗಳೂರು ನಿವಾಸಿ ಅಯಾಝ್ ಅಫ್ರಿದಿ ಎಂಬುವವರು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಬಂದ ಪೆÇೀಸ್ಟ್‍ಗಳಿಗೂ ಮೊದಲೇ ಈ ಬಗ್ಗೆ ಕೆಲವರ ಬಳಿ ಮಾತುಕತೆ ನಡೆಸಿದ್ದೆ. ಸಂತ್ರಸ್ತರಿಗೆ ನೆರವು ನೀಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜಾತಿ ಮತ್ತು ನಂಬಿಕೆಗಳನ್ನು ಬದಿಗೊತ್ತಿ ಜನರು ಸಹಾಯ ಮಾಡಲು ಮುಂದಾಗಿದ್ದಾರೆ. ತಮ್ಮ ಬಳಿಯಿರುವ ಸಂಪನ್ಮೂಲಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಸಂತ್ರಸ್ತರಿಗೆ ಕುರ್ಬಾನಿ ಹಣವನ್ನು ನೀಡಲು ನಾವು ನಿರ್ಧರಿಸಿದ್ದೇವೆಂದು ತಿಳಿಸಿದ್ದಾರೆ. ಆರ್‍ಟಿ ನಗರ ನಿವಾರಿ ಇಮ್ತಿಯಾಜ್ ಅಹ್ಮದ್ ಎಂಬವರು ಮಾತನಾಡಿ, ಕುರ್ಬಾನಿ ಹಣವನ್ನು ನೀಡುವದರಿಂದ ಬಕ್ರೀದ್ ಹಬ್ಬದ ದಿನದಂದು ನಮ್ಮ ಧಾರ್ಮಿಕ ಕರ್ತವ್ಯವನ್ನೂ ನಿಭಾಯಿಸಿದಂತಾಗುತ್ತದೆ. ಪ್ರಾಣಿಗಳ ಬಲಿದಾನ ಮಾಡುವ ಉದ್ದೇಶ ಬಡವರಿಗೆ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ದಾನ ಮಾಡುವದಾಗಿದೆ. ಇದೀಗ ಕೊಡಗು ಹಾಗೂ ಕೇರಳ ಭೀಕರ ಪರಿಸ್ಥಿತಿ ಎದುರಿಸುತ್ತಿದ್ದು, ಸಂತ್ರಸ್ತರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆಂದು ತಿಳಿಸಿದ್ದಾರೆ.

ಏಷ್ಯನ್ ಗೇಮ್ಸ್ : ಭಾರತಕ್ಕೆ ಕಂಚು

ಪಾಲೆಂಬಂಗ್, ಆ. 21: ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೂರನೇ ದಿನ ಭಾರತದ ಪದಕ ಬೇಟೆ ಮುಂದುವರಿದಿದ್ದು, ಸೆಪಕ್ ಟಾಕ್ರಾ ವಿಭಾಗದಲ್ಲಿ ಪುರುಷರ ರೆಗು ತಂಡ ಕಂಚಿನ ಪದಕ ಜಯಿಸಿದೆ. ಸೆಮಿಫೈನಲ್ ಹಂತದಲ್ಲಿ ಥಾಯ್ ಲ್ಯಾಂಡ್ ವಿರುದ್ಧ 0-2 ಅಂತರದಲ್ಲಿ ಸೋಲುಂಡಿರುವ ಭಾರತ ತಂಡ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದೆ. ಇರಾನ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಜಯಿಸಿದ್ದ ಭಾರತ ಬಳಿಕ ಇಂಡೋನೇಷಿಯಾ ವಿರುದ್ಧ ಪರಾಜಯ ಅನುಭವಿಸಿತ್ತು. ಇಷ್ಟಾಗಿಯೂ ಸೆಮಿಫೈನಲ್ಸ್ ಪ್ರವೇಶಿಸುವ ಅವಕಾಶ ಪಡೆದ ತಂಡಕ್ಕೆ ಪದಕ ದೊರಕುವದು ನಿಶ್ಚಿತವಾಗಿತ್ತು.