ಮಡಿಕೇರಿ, ಆ. 15: ಕೊಡವ ಮಕ್ಕಡ ಕೂಟದ ವತಿಯಿಂದ ‘ಕೊಡವ ಕ್ರೀಡಾ ಕಲಿಗಳು’, ‘ಕೊಡವ ಭಾಗವತ’ ಹಾಗೂ ‘ವಾಲ್ಮೀಕಿ ರಾಮಾಯಣ’ ಎಂಬ ಮೂರು ಪುಸ್ತಕಗಳನ್ನು ಬಿಡಗಡೆ ಮಾಡಲಾಗುವದು ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಸ್ತಕ ಬಿಡುಗಡೆ ಕಾರ್ಯಕ್ರಮ ತಾ. 17 ರಂದು ಮಧ್ಯಾಹ್ನ 2.30ಕ್ಕೆ ಕೊಡಗು ಪ್ರೆಸ್‍ಕ್ಲಬ್‍ನ ಜಂಟಿ ಆಶ್ರಯದಲ್ಲಿ ನಗರದ ಪತ್ರಿಕಾಭವನದಲ್ಲಿ ನಡೆಯಲಿದೆ ಎಂದರು. ಕೊಡವ ಭಾಷೆಯನ್ನು ಬೆಳೆಸುವದು, ಕೊಡವ ಸಾಧಕರನ್ನು ಪರಿಚಯಿಸುವದು ಹಾಗೂ ಹಲವು ಅಧ್ಯಯನ ಕೃತಿಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕೊಡವ ಮಕ್ಕಡ ಕೂಟ ಶ್ರಮಿಸುತ್ತ ಹೊಸ ಲೇಖಕರಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದು, ಇಲ್ಲಿಯವರೆಗೆ 13 ಪುಸ್ತಕಗಳನ್ನು ಪ್ರಕಟ ಮಾಡಲಾಗಿದೆ ಎಂದರು.
ಪ್ರೆಸ್‍ಕ್ಲಬ್ ಉಪಾಧ್ಯಕ್ಷ ಹಾಗೂ ಪತ್ರಕರ್ತ ವಿಘ್ನೇಶ್ ಎಂ. ಭೂತನಕಾಡು ಅವರು ಬರೆದಿರುವ ಕೊಡವ ಕ್ರೀಡಾ ಸಾಧಕರ ಮಾಹಿತಿಯನ್ನು ಒಳಗೊಂಡ ‘ಕೊಡವ ಕ್ರೀಡಾ ಕಲಿಗಳು’ ಪುಸ್ತಕವನ್ನು ಹಾಕಿ ವಿಶ್ವಕಪ್ ಆಟಗಾರ ಪೈಕೆರ ಈ. ಕಾಳಯ್ಯ ಬಿಡುಗಡೆ ಮಾಡಲಿದ್ದಾರೆ. ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಬರೆದಿರುವ ‘ಕೊಡವ ಭಾಗವತ’ ಪುಸ್ತಕವನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಬಿಡುಗಡೆ ಮಾಡಲಿದ್ದಾರೆ. ಬರಹಗಾರರಾಗಿರುವ ಕೂಪದಿರ ಸುಂದರಿ ಮಾಚಯ್ಯ ಅವರು ಬರೆದಿರುವ ‘ವಾಲ್ಮೀಕಿ ರಾಮಾಯಣ’ ಪುಸ್ತಕವನ್ನು ಸಾಹಿತಿ ನಾಗೇಶ್ ಕಾಲೂರು ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಅಯ್ಯಪ್ಪ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ, ನಿರ್ದೇಶಕ ಎಸ್.ಎಂ. ಮುಬಾರಕ್ ಭಾಗವಹಿಸಲಿದ್ದಾರೆ ಎಂದರು.
ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ, ತಾನು ಬರೆದ ‘ಕೊಡವ ಭಾಗವತ’ ಪುಸ್ತಕದಲ್ಲಿ ಶ್ರೀಕೃಷ್ಣನಲ್ಲಿ ಐಕ್ಯವಾದ ಕಥೆಗಳನ್ನು ಕೊಡವ ಭಾಷೆಯಲ್ಲಿ ಬರೆಯಲಾಗಿದೆ. ಭಾಷೆ ತಿಳಿದಿಲ್ಲವೆಂಬ ನೆಪ ಹೇಳಿಕೊಂಡು ಭಾಷಾ ಪ್ರೇಮಿಗಳಿಂದ ದೂರಾಗಬಾರದು. ಹೀಗಾಗಿ ಕೊಡವ ಭಾಷೆಯ ಅಭಿವೃದ್ಧಿಗೆ ಸಣ್ಣದೊಂದು ಕಾಣಿಕೆ ನೀಡಿದ್ದೇನೆ ಎಂದರು.
ಪತ್ರಕರ್ತ ವಿಘ್ನೇಶ್ ಭೂತನಕಾಡು ಮಾತನಾಡಿ ‘ಕೊಡವ ಕ್ರೀಡಾ ಕಲಿಗಳು’ ತನ್ನ ಮೊದಲ ಪುಸ್ತಕವಾಗಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ಸುಮಾರು 50ಕ್ಕೂ ಅಧಿಕ ಕೊಡವ ಕ್ರೀಡಾ ಸಾಧಕರನ್ನು ಪುಸ್ತಕ ಒಳಗೊಂಡಿದೆ. ಸಮಯದ ಕೊರತೆಯಿಂದಾಗಿ ಎಲ್ಲಾ ಕ್ರೀಡಾ ಸಾಧಕರ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಕೊಡವ ಕ್ರೀಡಾ ಕಲಿಗಳು ಎರಡನೇ ಮುದ್ರಣದ ಸಂದರ್ಭ ಮತ್ತಷ್ಟು ಕ್ರೀಡಾಪಟುಗಳ ಸಾಧನೆಯ ಮಾಹಿತಿಯನ್ನು ಪ್ರಕಟಿಸಲಾಗುವದು ಎಂದು ತಿಳಿಸಿದರು.
ಲೇಖಕಿ ಕೂಪದಿರ ಸುಂದರಿ ಮಾಚಯ್ಯ ಮಾತನಾಡಿ, ‘ವಾಲ್ಮೀಕಿ ರಾಮಾಯಣ’ ತನ್ನ 6ನೇ ಪುಸ್ತಕವಾಗಿದೆ. 2001ರಿಂದ ವಾರಪತ್ರಿಕೆಯೊಂದರಲ್ಲಿ ‘ವಾಲ್ಮೀಕಿ ರಾಮಾಯಣ’ದ ಬಗ್ಗೆ ಕೊಡವ ಭಾಷೆಯಲ್ಲಿ ಲೇಖನ ಪ್ರಕಟ ಮಾಡುತ್ತಿದ್ದೆ. ಕೊಡವ ಮಕ್ಕಡ ಕೂಟ ಅದನ್ನು ಪುಸ್ತಕ ರೂಪದಲ್ಲಿ ಹೊರ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಉಪಸ್ಥಿತರಿದ್ದರು.