ಮಡಿಕೇರಿ, ಆ. 15: ಅಬ್ಬಬ್ಬಾ... ಏನಿದು ಪರಿಸ್ಥಿತಿ... ಪ್ರಸಕ್ತ ವರ್ಷ ಕಂಡುಬರುತ್ತಿರುವ ಜಲಪ್ರಳಯದ ರೀತಿಯ ಸನ್ನಿವೇಶ ಪ್ರತಿಯೊಬ್ಬರಲ್ಲೂ ಭಯ ಹುಟ್ಟಿಸುವಂತಿದೆ. ದೇಶದ ಹಲವೆಡೆಗಳಲ್ಲಿ ಸೇರಿದಂತೆ ನೆರೆಯ ಕೇರಳ ರಾಜ್ಯದಲ್ಲಿನ ಭೀಭತ್ಸ ವಾತಾವರಣವೂ ಜನತೆ ಯನ್ನು ಕಂಗೆಡಿಸುತ್ತಿದೆ. ಇದರ ನಡುವೆ ಹೆಚ್ಚು ಮಳೆಯ ಅನುಭವವಿರುವ ಕೊಡಗು ಜಿಲ್ಲೆಯೂ ಕೂಡ ಈ ಬಾರಿ ಪ್ರಕೃತಿಯ ವಿಕೋಪಕ್ಕೆ ನಲುಗುತ್ತಿದೆ. ರಾಜ್ಯ ನೆರೆರಾಜ್ಯ ದೇಶದ ಇತರೆಡೆಗಳಲ್ಲಿ ಕಂಡು ಬರುತ್ತಿರುವ ವಾತಾವರಣದ ಅಸಹಜತೆ ಅಪರೂಪ ದ್ದಾದರೂ ಕೊಡಗು ಜಿಲ್ಲೆಯಲ್ಲಿ ಸಹಜವಾಗಿ ಜೂನ್ ತಿಂಗಳಿನಿಂದ ಆಗಸ್ಟ್ ಅಂತ್ಯದವರೆಗೆ ಮಳೆಗಾಲ ಇರುತ್ತದೆ. ಆದರೆ, ಪ್ರಸಕ್ತ ವರ್ಷ ಕೊಡಗು ಜಿಲ್ಲೆಯ ಪರಿಸ್ಥಿತಿಯೂ ಅಲ್ಲೋಲ ಕಲ್ಲೋಲವಾಗಿದೆ.

ಇತರೆಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ವಾಯು-ವರುಣ ಅಬ್ಬರಿಸುತ್ತಿದ್ದರೆ, ಜಿಲ್ಲೆಯಲ್ಲಿ ಜೂನ್ ಆರಂಭದಿಂದಲೇ ಮಳೆಗಾಲದ ಆರ್ಭಟ ಕಂಡು ಬಂದಿದೆ. ಬಹುಶ: ಜೂನ್ ತಿಂಗಳಿನಿಂದ ಈ ತನಕವೂ ಜಿಲ್ಲೆಯಲ್ಲಿನ ಜನರು ಬಿಸಿಲನ್ನೇ ಕಂಡಿಲ್ಲ. ಈತನಕ ನೀರು ಕಾಣದ ಸ್ಥಳಗಳಲ್ಲಿಯೂ ಜಲದ ಬುಗ್ಗೆಗಳು ಪುಟಿದೇಳುತ್ತಿದ್ದು ಬೆಟ್ಟಗುಡ್ಡಗಳು, ರಸ್ತೆಗಳು ಕುಸಿಯಲಾರಂಭಿಸಿವೆ.

ಮರಗಳು ಧರೆಗುರುಳುತ್ತಿವೆ. ಆಗಸದಿಂದಲೂ ಧೋ ಎಂದು ಸುರಿಯುತ್ತಿರುವ ನಿರಂತರ ಮಳೆ ಒಂದೆಡೆಯಾದರೆ, ಇತ್ತ ಭೂಗರ್ಭದಿಂದಲೂ ಜಲ ಉಕ್ಕಿ ಬರುತ್ತಿರುವದರಿಂದ ಎಲ್ಲೆಲ್ಲೂ ಜಲ... ಜಲ... ಜಲ... ಎಂಬಂತಾಗಿದ್ದು, ಜನತೆ ತೀರಾ ಆತಂಕಗೊಳ್ಳುವಂತಾಗಿದೆ.

ಜಿಲ್ಲೆಯ ಪರಿಸ್ಥಿತಿ ಹೇಗಿದೆ ಎಂದರೆ 2018ರ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನೂ ಆಚರಿಸಲಾಗದಂತಹ ಸನ್ನಿವೇಶ ಎದುರಾಗಿದೆ. ಶಾಲಾ-ಕಾಲೇಜುಗಳಿಗೆ ಇತ್ತೀಚಿನ ವರ್ಷಗಳಿಂದ ಕಂಡು ಕೇಳರಿಯದ ಮಾದರಿಯಲ್ಲಿ ಈತನಕ ಹದಿನೈದಕ್ಕೂ ಹೆಚ್ಚು ದಿನಗಳ ರಜೆಯನ್ನು ನೀಡಬೇಕಾದ ಅನಿವಾರ್ಯತೆ ಬಂದೊದಗಿದೆ.

ತಲಕಾವೇರಿಯಂತಹ ಪ್ರದೇಶದಲ್ಲಿ ಪೂಜೆ-ಪುನಸ್ಕಾರಗಳನ್ನು ನೆರವೇರಿಸಲಾಗದ ದಾರುಣ ಸ್ಥಿತಿ, ದಿನವೊಂದಕ್ಕೆ ಒಂದು ತಿಂಗಳಿನಲ್ಲಿ ಬೀಳುವ ಮಳೆ, ತಿಂಗಳಲ್ಲಿ ಇಡೀ ವರ್ಷದಲ್ಲಿ ಸುರಿಯುವ ಮಳೆ. ಇದರೊಂದಿಗೆ ತೀರಾ ಚಳಿ-ಭಾರೀ ಗಾಳಿಯ ವಾತಾವರಣ ಬಹುತೇಕ ಕಡೆಗಳಲ್ಲಿ ಪರಸ್ಪರ ಸಂಪರ್ಕಗಳೇ ಇಲ್ಲದಂತಾಗಿದೆ.

ಕೃಷಿ ಪ್ರಧಾನವಾಗಿರುವ ಜಿಲ್ಲೆಯಲ್ಲಿನ ಬದುಕೇ ಕೃಷಿ ಫಸಲುಗಳ ಆಧಾರಿತವಾದದ್ದು. ಜನರ ಬದುಕಿನ ಜೀವನಾಧಾರವಾಗಿರುವ ಕಾಫಿ, ಕರಿಮೆಣಸು, ಏಲಕ್ಕಿ, ಭತ್ತ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಜನರು ಕಂಡುಕೊಂಡಿದ್ದ ಕಿತ್ತಳೆ, ಅಡಿಕೆ, ಬಾಳೆ, ಶುಂಠಿ, ತರಕಾರಿ ಮತ್ತಿತರ ಉಪಬೆಳೆಗಳೆಲ್ಲವೂ ನೆಲಕಚ್ಚಿವೆ. ಅದೆಷ್ಟೋ ಜನರ ಮನೆಗಳು ಜರ್ಜರಿತಗೊಂಡಿವೆ.

ವಾಸಕ್ಕೆ ಮನೆ ಇಲ್ಲದ ಪರಿಸ್ಥಿತಿ... ಮುಂದಿನ ಬದುಕಿಗೆ ಅನಿವಾರ್ಯವಾಗಿದ್ದ ಕೃಷಿ ಫಸಲುಗಳು ಈಗಾಗಲೇ ಕೈಬಿಟ್ಟು ಹೋಗಿರುವ ದರಿಂದ ಮುಂದೇನು? ಎಂಬ ಆತಂಕದೊಂದಿಗೆ ಕೊಡಗಿನಲ್ಲಿ ಜನರು ಬದುಕು ಸಾಗಿಸುವಂತಾಗಿದೆ. ಪ್ರಕೃತಿ ವಿಕೋಪದಂತಹ ಅನಾಹುತಗಳು ಎಲ್ಲಾ ಕಡೆಗಳಲ್ಲಿ ಆತಂಕಕಾರಿ ಯಾದರೂ ಗುಡ್ಡಗಾಡು ಪ್ರದೇಶವಾಗಿದ್ದು, ಕೃಷಿಯೇ ಜೀವಾಳವಾಗಿರುವ ಕೊಡಗಿನಲ್ಲಿ ಬೇರೆಡೆಗಳಿಗಿಂತ ವಿಭಿನ್ನವಾದುದು.

ವಾತಾವರಣದ ಅಸಹಜತೆ ಇಲ್ಲದಿದ್ದರೆ ಪ್ರಕೃತಿದತ್ತವಾಗಿ ಹಚ್ಚಹಸಿರಿನೊಂದಿಗೆ ಕಾಣುವ ಕೊಡಗು ಜಿಲ್ಲೆ ಸುಂದರವಾದದ್ದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವರ್ಷಂಪ್ರತಿ ಒಂದಲ್ಲಾ ಒಂದು ಕಾರಣದಿಂದ ಜಿಲ್ಲೆಯ ಶಾಶ್ವತ ನಿವಾಸಿಗಳು ಪರಿತಪಿಸುವಂತಾಗಿದೆ. ಈ ಹಿಂದೆ ಇಂತಹ ಜಿಲ್ಲೆಯಲ್ಲಿ ಬರಗಾಲದಂತಹ ಪರಿಸ್ಥಿತಿಯಿಂದ ಬರಪೀಡಿತ ಜಿಲ್ಲೆ ಎಂದು ಪರಿಗಣಿಸಲ್ಪಟ್ಟಿದ್ದ ಕೊಡಗು ಕಾಡಾನೆಗಳ ಕಾಟ, ಹುಲಿ-ಚಿರತೆಯಂತಹ ವನ್ಯ ಪ್ರಾಣಿಗಳ ಉಪಟಳದಿಂದಲೂ ಕಂಗೆಟ್ಟಿತ್ತು. ಇದೀಗ ಜೂನ್ ತಿಂಗಳಿನಿಂದ ನಿರಂತರ ಮಳೆಯಿಂದಾಗಿ ಅತಿವೃಷ್ಟಿ ಪೀಡಿತ ಜಿಲ್ಲೆಯಾಗಿ ಪರಿಣಮಿಸಿದೆ. ಈ ವರ್ಷವಂತೂ ಹಿಂದಿನ 15-20 ವರ್ಷಕ್ಕಿಂತ ಹೆಚ್ಚಿನ ನಷ್ಟ-ಕಷ್ಟ-ದುರಂತಗಳು ನಡೆದುಹೋಗಿವೆ. ಮಾತ್ರವಲ್ಲ, ಈ ದುರಂತಗಳ ಸರಮಾಲೆ ಮತ್ತಷ್ಟು ಮುಂದುವರಿ ಯುತ್ತಲೇ ಇದೆ. ಜಿಲ್ಲೆಯಲ್ಲಿ ಕೃಷಿ ಇಲ್ಲದಿದ್ದರೆ, ಇದು ಎಲ್ಲಾ ವಹಿವಾಟಿನ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡಲಿದೆ. ರಾಜ್ಯ-ಕೇಂದ್ರ ಸರಕಾರಗಳು ಕೇವಲ ಒಂದು ವರ್ಷದ ಚಿತ್ರಣವನ್ನು ಮಾತ್ರ ಗಮನಿಸದೆ, ಈ ಹಿಂದಿನ ಐದಾರು ವರ್ಷಗಳಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಅವ ಲೋಕಿಸಬೇಕು. ಬೇರೆ ಸಂದರ್ಭ ಗಳಲ್ಲಿ ಇತರೆಡೆಗಳಿಗೆ ಕೊಡಗು ನೀರುಣಿಸುವ ಜಿಲ್ಲೆ ಎಂಬ ದನ್ನು ಅರಿಯಬೇಕು. ಮಾತ್ರವಲ್ಲದೆ, ಹಲವಾರು ರೀತಿಯಲ್ಲಿ ಜಿಲ್ಲೆ ರಾಜ್ಯದ ಬೊಕ್ಕಸಕ್ಕೆ ಹೆಚ್ಚು ತೆರಿಗೆ ನೀಡುತ್ತದೆ ಎಂಬದನ್ನು ಗಂಭೀರವಾಗಿ ಅರಿತು, ಕೊಡಗಿನ ಪುನಶ್ಚೇತನಕ್ಕೆ ವಿಶೇಷ ಯೋಜನೆಗಳು ಅಧಿಕ ಮೊತ್ತದ ಪರಿಹಾರವನ್ನು ವಿತರಿಸು ವಂತಾಗ ಬೇಕಿದೆ. ಹೀಗಾದಲ್ಲಿ ಮಾತ್ರ ಜರ್ಜ ರಿತವಾದಂತಿರುವ ಈ ಪುಟ್ಟ ಜಿಲ್ಲೆ ಹಾಗೂ ಇಲ್ಲಿನ ನಿವಾಸಿಗಳು ಒಂದಷ್ಟು ಚೇತರಿಸಿಕೊಳ್ಳಬಹುದೇನೋ....?

- ಶಶಿ ಸೋಮಯ್ಯ