ಹೆಬ್ಬೆಟ್ಟಗೇರಿ, ಆ. 15: ಮಡಿಕೇರಿ ಸಮೀಪದ ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯಲ್ಲಿ ನಿನ್ನೆ ಬರೆಕುಸಿತವಾಗಿ ಒಂದು ಕುಟುಂಬ ಸಂಪೂರ್ಣವಾಗಿ ಬೀದಿಗೆ ಬಂದಿತ್ತು. ಇದೀಗ ಮತ್ತೆ ಕೆ.ನಿಡುಗಣೆಯ ಹೆಬ್ಬೆಟ್ಟಗೇರಿ ಗ್ರಾಮದ ಕುಮಾರಸ್ವಾಮಿ ಕಾಲೋನಿಯಲ್ಲಿ 30 ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿದೆ.
ಆ ಕಾಲೋನಿಗೆ ಸಂಪರ್ಕ ಕಲ್ಪಿಸಲು ಇದ್ದದ್ದು ಅದೊಂದೇ ರಸ್ತೆ. ಅದೂ ಬೆಳಗಾಗುವಷ್ಟರಲ್ಲಿ ಕುಸಿದು ಬಿದ್ದಿದೆ.
ಕಾಲೋನಿಯಲ್ಲಿ ವಾಸವಿದ್ದ 30 ಕುಟುಂಬಗಳು ಮನೆಯಿಂದ ಹೊರ ಬಂದು ಪಕ್ಕದ ನೆಂಟರಿಷ್ಟರ ಮನೆಗೆ ಹಾಗೂ ಬೇರೆಡೆಗೆ ಸಾಕುಪ್ರಾಣಿಗಳ ಸಹಿತ ಸ್ಥಳಾಂತರಗೊಳ್ಳುತ್ತಿದ್ದಾರೆ.
ಗದ್ದೆಗಳು ಹೊಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇಲ್ಲಿನ ಪರಿಸ್ಥಿತಿ ನೋಡಿದರೆ ಭೂಕಂಪ ಆಗಿರಬಹುದು ಅನಿಸುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ ಗ್ರಾ.ಪಂ ಸದಸ್ಯ ಕೊಕ್ಕಲೇರ ಅಯ್ಯಪ್ಪ 30 ಕುಟುಂಬಗಳಿಗೆ ಪಕ್ಕದ ಶಾಲೆಯಲ್ಲಿ ಗಂಜೀ ಕೇಂದ್ರದ ವ್ಯವಸ್ಥೆ ಮಾಡಿ ಸದ್ಯಕ್ಕೆ ಅವಶ್ಯಕವಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವದಾಗಿ ಭರವಸೆ ನೀಡಿದ್ದಾರೆ.