ಕುಶಾಲನಗರ, ಆ. 15: ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಪ್ರವಾಹ ಏರಿಕೆಯಾಗಿದ್ದು ಕೆಲವು ತಗ್ಗು ಪ್ರದೇಶಗಳ ನಿವಾಸಿಗಳ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಕಾವೇರಿ ನದಿ ಎರಡೂ ಭಾಗಗಳಲ್ಲಿ ಉಕ್ಕಿ ಹರಿಯುತ್ತಿದ್ದು ನದಿ ತಟದ ವ್ಯಾಪ್ತಿಯ ಬಡಾವಣೆಗಳ ಬಹುತೇಕ ಮನೆಗಳು ನೀರಿನಿಂದ ಅವೃತಗೊಂಡ ಹಿನ್ನಲೆಯಲ್ಲಿ ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಇಂದಿರಾ ಬಡಾವಣೆಯ ತಗ್ಗು ಪ್ರದೇಶಗಳಿಗೆ ಮಂಗಳವಾರ ಮಧ್ಯಾಹ್ನದಿಂದ ನೀರು ನುಗ್ಗಿದ್ದು ಈ ವ್ಯಾಪ್ತಿಯಲ್ಲಿ ಮನೆಗಳು ಸಂಪೂರ್ಣ ಜಲಮಯವಾಗಿವೆ.

ಬೆಂಗಳೂರಿನ ನಾಗರಿಕ ರಕ್ಷಣಾ ಪಡೆಯ ತಂಡ ಕುಶಾಲನಗರಕ್ಕೆ ಆಗಮಿಸಿದ್ದು ಚೇತನ್ ಎಂಬವರ ನೇತೃತ್ವದಲ್ಲಿ 30 ಕ್ಕೂ ಅಧಿಕ ಸದಸ್ಯರು ಮೂರು ಬೋಟ್‍ಗಳನ್ನು ಬಳಸಿ ಮುಳುಗಡೆಯಾಗಿರುವ ಸಂತ್ರಸ್ಥರಿಗೆ ಸಹಾಯಹಸ್ತ ಚಾಚಿದರು. ಇದರೊಂದಿಗೆ ದುಬಾರೆ ಮತ್ತು ತೆಪ್ಪದಕಂಡಿ ಬಳಿಯ ರ್ಯಾಫ್ಟಿಂಗ್ ಮಾಲೀಕರು, ಸಿಬ್ಬಂದಿಗಳು ತಮ್ಮ ರ್ಯಾಫ್ಟ್‍ಗಳ ಮೂಲಕ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ, ಇಂದಿರಾ ಬಡಾವಣೆ ಮತ್ತಿತರ ಪ್ರದೇಶಗಳ ಮನೆಗಳಿಂದ ಹೊರಬರಲು ಸಹಕಾರ ನೀಡುತ್ತಿದ್ದ ದೃಶ್ಯ ಕಂಡುಬಂತು. ಕುಶಾಲನಗರ ಕನ್ನಡ ಭಾರತಿ ಪಿಯು ಕಾಲೇಜು ಸಂಪೂರ್ಣ ನೀರಿನಿಂದ ಅವೃತಗೊಂಡ ದೃಶ್ಯ ಗೋಚರಿಸಿದೆ.