ಸುಂಟಿಕೊಪ್ಪ, ಆ. 15: ಸುಂಟಿಕೊಪ್ಪ ಹೋಬಳಿಯಲ್ಲಿ ಮತ್ತೆ ಮಳೆಯ ಆರ್ಭಟದಿಂದ ಮನೆಗಳಿಗೆ ನೀರು ನುಗ್ಗಿ ಗದ್ದೆಯಲ್ಲಿ ನಾಟಿ ಮಾಡಿದ ಪೈರುಗಳು ಜಲಾವೃತವಾಗಿ ಹಾನಿ ಸಂಭವಿಸಿದೆ.

ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ಮಾರುತಿ ನಗರದ ಕಾವೇರಿ ಬಡಾವಣೆಯ ಪ್ರೇಮ, ಸುಶೀಲ, ಪ್ರಭಾಕರ ಎಂಬವರ ಮನೆಗಳಿಗೆ ಸುತ್ತ ಮುತ್ತಲಿನ ತೋಟಗಳ ಕೆರೆಕಟ್ಟೆಯು ಒಡೆದು ನೀರು ಹರಿದು ಬಂದು ವಾಸದ ಮನೆಗಳಿಗೆ ನುಗ್ಗಿದ ಪರಿಣಾಮ ಮನೆಯ ಗೃಹೋಪಯೋಗಿ ಸಾಮಗ್ರಿಗಳೆಲ್ಲಾ ಹಾನಿಗೊಂಡಿದೆ ಮನೆಗಳಿಗೂ ಹಾನಿಗೊಳಿಸಿದೆ.

ಸುಂಟಿಕೊಪ್ಪ 2ನೇ ವಿಭಾಗ ನಿವಾಸಿ ಇಬ್ರಾಹಿಂ, ದಿವಂಗತ. ಡಿ.ಎನ್ ಪದ್ಮರಾಜ್ (ಅಯ್ಯಣಿ) ಹಾಗೂ 1ನೇ ವಿಭಾಗದ ನಿವಾಸಿ ಭಾಷ ಎಂಬವರ ಮನೆಯ ಗೋಡೆ ಕುಸಿತಗೊಂಡು ಸಾವಿರಾರು ರೂ. ನಷ್ಟ ಉಂಟಾಗಿದೆ.

ಗದ್ದೆಹಳ್ಳ ಗಿರಿಯಪ್ಪ ಮನೆ ಬಡಾವಣೆಯಲ್ಲಿ ನಿರ್ಮಿಸಿ ನೆಲೆಸಿರುವ ವಾಸದ ಮನೆಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದ್ದು ನಾಟಿ ಮಾಡಿದ ಗದ್ದೆಗಳು ಪ್ರವಾಹದಿಂದ ತುಂಬಿ ತುಳುಕುತ್ತಿದೆ. -ರಾಜುರೈ