ಸೋಮವಾರಪೇಟೆ, ಆ. 15: ಕೊಡಗು ಪ್ಯಾಕೇಜ್‍ನಡಿ ನಿರ್ವಹಿಸಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕಳೆದೆರಡು ದಿನಗಳಿಂದ ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿ ಎದುರು ಗುತ್ತಿಗೆದಾರರು ನಡೆಸುತ್ತಿದ್ದ ಮುಷ್ಕರ ತಾತ್ಕಾಲಿಕ ಸ್ಥಗಿತಗೊಂಡಿದೆ.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೆ.ಎ. ಇಬ್ರಾಹಿಂ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದ್ದು, ಮುಷ್ಕರ ಸ್ಥಗಿತಗೊಳಿಸಿ ತುರ್ತು ಕಾಮಗಾರಿಗಳನ್ನು ನಿರ್ವಹಿಸುವಂತೆ ಮನವಿ ಮಾಡಿದರು.
ಇದಕ್ಕೆ ಒಪ್ಪದ ಪ್ರತಿಭಟನಾಕಾರರು ತಾವು ಈಗಾಗಲೇ ನಿರ್ವಹಿಸಿರುವ ಕಾಮಗಾರಿಗೆ ಹಣ ಪಾವತಿಸುವಂತೆ ಪಟ್ಟು ಹಿಡಿದರು. ಕೊಡಗು ಜಿಲ್ಲಾ ಮುಖ್ಯರಸ್ತೆ ನಿರ್ವಹಣೆ ಅಡಿಯಲ್ಲಿ ಜಿಲ್ಲೆಗೆ 2.90 ಕೋಟಿ ಅನುದಾನ ಮಂಜೂರಾಗಿದ್ದು, ಈ ಅನುದಾನದಲ್ಲಿ ಆದ್ಯತೆಯ ಮೇರೆಗೆ ಬಿಲ್ ಪಾವತಿಸಲಾಗುವದು. ಇನ್ನೂ 30 ಕೋಟಿ ಹಣ ಬಿಡುಗಡೆಗೆ ಬಾಕಿಯಿದ್ದು, ಸರ್ಕಾರದಿಂದ ಬಿಡುಗಡೆಯಾದ ತಕ್ಷಣ ಬಿಲ್ ಒದಗಿಸಲಾಗುವದು ಎಂದು ಇಬ್ರಾಹಿಂ ನುಡಿದರು.
ಇದೀಗ ಬಿಡುಗಡೆಯಾಗಿರುವ ರೂ. 2.90 ಕೋಟಿ ಹಣವನ್ನು ವಿಶೇಷ ಪ್ಯಾಕೇಜ್ ಕಾಮಗಾರಿಗಳಿಗೆ ಮೀಸಲಿಡಬೇಕು. ತಕ್ಷಣ ಬಿಲ್ ಪಾವತಿಸಬೇಕು. ನಂತರವಷ್ಟೇ ಕಾಮಗಾರಿಗಳನ್ನು ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ಕಾಮಗಾರಿಯನ್ನು ಕೈಗೊಳ್ಳುವದಿಲ್ಲ ಎಂದು ತಿಳಿಸಿ, ಮುಷ್ಕರವನ್ನು ಸ್ಥಗಿತಗೊಳಿಸಿದರು.
ಈ ಸಂದರ್ಭ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್, ಅಭಿಯಂತರ ಪೀಟರ್, ಗುತ್ತಿಗೆದಾರರ ಸಂಘದ ಟೆಂಡರ್ ಕಮಿಟಿ ಅಧ್ಯಕ್ಷ ವಿ.ಎ. ಲಾರೆನ್ಸ್, ಗುತ್ತಿಗೆದಾರರಾದ ಆರ್.ಸಿ. ವಿಜಯ, ಉದಯ್, ಬಷೀರ್, ಆರ್.ಸಿ. ಗಣೇಶ್, ಶ್ರೀನಿವಾಸ್, ಗುರು, ಶಿವಕುಮಾರ್, ಮಾದಪ್ಪ, ಮಹೇಶ್ ತಿಮ್ಮಯ್ಯ, ದೇಶ್‍ರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.