ಮಡಿಕೇರಿ,ಆ.15 : ಗಂಟೆ 8.20 ಸ್ವಾತಂತ್ರ್ಯೋತ್ಸವಕ್ಕೆ ಕೊನೆಯ ಸಿದ್ಧತೆ ನಡೆಯುತ್ತಿತ್ತು. ಅಧಿಕಾರಿಗಳು ವೇದಿಕೆಯಲ್ಲಿ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು. ಜಿಲ್ಲಾ ಸಶಸ್ತ್ರದಳ, ವಿವಿಧ ಕಾಲೇಜುಗಳ ಎನ್.ಸಿ.ಸಿ ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್.... ಹೀಗೆ ಹಲವು ತಂಡಗಳು ತಾಲೀಮು ಮುಗಿಸಿ ಮುಂದಿನ ಪಥಸಂಚಲನಕ್ಕೆ ಸಜ್ಜಾಗಿದ್ದವು. ಸಮಾರಂಭ ನಡೆಯಬೇಕಿದ್ದ ಮೈದಾನದಲ್ಲಿ ತುಂಬಿದ್ದ ನೀರನ್ನು ಅಧಿಕಾರಿ ರಮೇಶ್ ನೇತೃತ್ವದಲ್ಲಿ ನಗರಸಭಾ ಯಂತ್ರ ಗಾಳಿ ಹಾಯಿಸಿ ಚರಂಡಿಗೆ ಬಿಡುತ್ತಿತ್ತು. ಕಡಿಮೆ ಸಂಖ್ಯೆಯಲ್ಲಿ ಇದ್ದ ಸಾರ್ವಜನಿಕರು ಶಾಮಿಯಾನದಡಿ ಆಸರೆ ಪಡೆದಿದ್ದರು. ದೇಶ ಭಕ್ತಿಯ ಕುರಿತಾದ ಕಾರ್ಯಕ್ರಮ ನೀಡಲು ವೇಷಧಾರಿಗಳಾಗಿ ಬಂದಿದ್ದ ಮಕ್ಕಳು ಮಳೆ ರಕ್ಷಣೆಗಾಗಿ ಅತ್ತಿಂದಿತ್ತ ಓಡಾಡುತ್ತಿದ್ದವು. ಹನಿಯುತ್ತಿದ್ದ ಮಳೆ ದಿಢೀರನೆ ನಿಂತಿತು
ಆಗಸದಲ್ಲಿ ಪ್ರತ್ಯಕ್ಷನಾದ ಸೂರ್ಯ ಎಲ್ಲರಲ್ಲೂ ಭರವಸೆಯನ್ನು ಮೂಡಿಸಿದನಾದರೂ ಮತ್ತೆ ಮೊಡಗಳೇ ಮೇಲುಗೈ ಸಾಧಿಸಿದವು. ಮಳೆ ತನ್ನ ಬದಲು ಮಂಜನ್ನು ಕಳುಹಿಸಿ ಮಡಿಕೇರಿ ಕೋಟೆ ಆವರಣವನ್ನು ಸುಂದರವನ್ನಾಗಿಸಿತು.
8.30ಕ್ಕೆ ತಲೆ ಮೇಲೆ ಸೆರಗು ಹೊದ್ದು ಕಾರಿನಿಂದ ಇಳಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ನಸುನಗುತ್ತ ಹೆಜ್ಜೆ ಹಾಕಿ ವೇದಿಕೆ ಏರಿದರು. ಅವರನ್ನು ಕಂಡು ವೇದಿಕೆ ಏರಿದ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಳೆಯಲ್ಲಿ ಸಂಜೆ ಸಾಂಸ್ಕøತಿಕ ಕಾರ್ಯಕ್ರಮವನ್ನು ಕೈ ಬಿಡುವಂತೆ ಕೋರಿದರು. ಇತರರೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿ ಕಾರ್ಯಕ್ರಮವನ್ನು ರದ್ದುಪಡಿಸಿ ನಿರೂಪಕರ ಮೂಲಕ ಧ್ವನಿವರ್ಧಕದಲ್ಲಿ ಅದನ್ನು ಘೋಷಿಸಿದರು. ಕೆಲ ಸಮಯದಲ್ಲೇ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಣ್ಣೇಕರ್ ಅವರ ಆಗಮನ ವಾಯಿತು. ಜಿಲ್ಲಾ ಪಂಚಾಯತ್ ಕಚೇರಿಯೆದುರು ಧ್ವಜಾರೋಹಣ ಮುಗಿಸಿದ
(ಮೊದಲ ಪುಟದಿಂದ) ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರು ವೇದಿಕೆ ಏರಿದರು. ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ ಮತ್ತು ಸುನಿಲ್ ಸುಬ್ರಮಣಿ ಇವರುಗಳು ಅತಿಥಿಗಳಾಗಿ ಬಂದರು. ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ಉಪವಿಭಾಗಾಧಿಕಾರಿ ನಂಜುಂಡೇಗೌಡ, ಎಡಿಸಿ ಪ್ರವೀಣ್‍ಕುಮಾರ್, ಡಿವೈಎಸ್‍ಪಿ ಸುಂದರ್‍ರಾಜ್ ಆಸೀನರಾದರು.
9 ಗಂಟೆ ಸರಿ ಸಮಯಕ್ಕೆ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರ ಆಗಮನವಾಯಿತು. ತುಂತುರು ಮಳೆಯು ಹನಿಯ ತೊಡಗಿತ್ತು. ನಿರೂಪಕರು ಸೂಚಿಸಿದಂತೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. “ಈಗ ರೈತ ಗೀತೆ” ಎನ್ನುತ್ತಿದ್ದಂತೆ ಕೆಲಹೊತ್ತು ಮೌನ ಆವರಿಸಿತು. ಅದಿಲ್ಲ ಎನ್ನುವದು ಅರಿವಾಗುವ ಮುನ್ನವೇ ಸಚಿವರಿಂದ ಧ್ವಜಾರೋಹಣ ಘೋಷಿಸಲಾಯಿತು. ವೇದಿಕೆಯ ಎರಡೂ ಬದಿಯಲ್ಲಿ ಸಮವಸ್ತ್ರ ಧರಿಸಿ ಪಥ ಸಂಚಲನಕ್ಕೆ ಅಣಿಯಾಗಿದ್ದ ತಂಡಗಳಿಗೆ ಅವರ ಕಾರ್ಯಕ್ರಮ ರದ್ದಾಗಿರುವದು ತಿಳಿದದ್ದು ಕೇವಲ ಸಶಸ್ತ್ರದಳದ ತಂಡ ಮಾತ್ರ ಸಚಿವರ ಎದುರು ಬಂದು ನಿಂತಾಗ !. ಧ್ವಜಾರೋಹಣ ಬಳಿಕ ರಾಷ್ಟ್ರ ಗೀತೆಯ ವಾದ್ಯಗೋಷ್ಠಿ ಇನ್ಸ್‍ಪೆಕ್ಟರ್ ತಿಮ್ಮಪ್ಪ ಗೌಡ ಅವರ ನೇತೃತ್ವದಲ್ಲಿ ನಡೆಯಿತು. ಕೂಡಲೇ ಸಚಿವರ ಭಾಷಣದ ಆರಂಭ. ಜಿಲ್ಲೆಯ ಇತರೆಡೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಜಾರಿಯಾಗಿರುವ ನೀತಿ ಸಂಹಿತೆಯನ್ನು ಇಲ್ಲಿಯೂ ಪಾಲಿಸಲಾಗಿತ್ತು.
ಹಾಗಾಗಿ ಸಾ.ರಾ. ಮಹೇಶ್‍ರವರ ಭಾಷಣದಲ್ಲಿ 1857ರ ಸಿಪಾಯಿದಂಗೆ, 1934ರ ಮಹಾತ್ಮಗಾಂಧಿಯವರ ಜಿಲ್ಲೆ ಭೇಟಿ, ಬ್ರಿಟೀಷರ ಆಗಮನ, ಜಿಲ್ಲೆಯಲ್ಲಿ ಸೇನೆಗೆ ಸೇವೆ ಸಲ್ಲಿಸಿದವರ ಸ್ಮರಣೆ ಇದೇ ತುಂಬಿದ್ದವು. ಬರಹದ ಐದು ಪುಟಗಳಲ್ಲಿ ಕೊನೆಯ ಪುಟದ ಒಂದು ಸಾಲು ಮಾತ್ರ ಜಿಲ್ಲೆಯ ಮಳೆಯಿಂದ ರೈತಾಪಿ ವರ್ಗ ಧೃತಿಗೆಡಬಾರದು. ಪರಿಹಾರವನ್ನು ನೀಡಲಾಗುವದು ಎಂಬ ಒಕ್ಕಣೆ ಇತ್ತು. ಇಂದಿನಿಂದ 18ರ ವರೆಗೆ ಎಲ್ಲೆಡೆ ಸಸಿ ನೆಡುವ ಮೂಲಕ ಮುಖ್ಯಮಂತ್ರಿಗಳ ಹಸಿರು ಕರ್ನಾಟಕವನ್ನು ನನಸಾಗಿಸುವ ಎಂದು ಸಚಿವರು ಕರೆ ನೀಡಿದರು. ಸಚಿವರ ಭಾಷಣದ ನಂತರ ಹಸಿರು ಕೈಪಿಡಿ ಬಿಡುಗಡೆ, ಪರಿಸರ ರಕ್ಷಣೆಯ ಪ್ರತಿಜ್ಞಾವಿಧಿ, ಸಾಧನಾ ಸಲಕರಣೆ ವಿತರಣೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು. ನಿರೂಪಕರೇ ಕೃತಜ್ಞತೆ ಸಲ್ಲಿಸಿದಾಗ ಗಂಟೆ 9.30.
ಕೇವಲ 30 ನಿಮಿಷಗಳ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಕ್ತಾಯವಾಗುವದರೊಂದಿಗೆ ಮಳೆಯಲ್ಲಿ ನಿಲ್ಲಬೇಕಾದ ಸಂದರ್ಭವನ್ನು ಮಕ್ಕಳಿಗೆ ಒದಗಿಸದ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತಕ್ಕೆ ಪೋಷಕರು ಮನದಲ್ಲೇ ಕೃತಜ್ಞತೆ ಸಲ್ಲಿಸಿದರು.