ಮಡಿಕೇರಿ, ಆ. 15: ಭಾರೀ ಮಳೆ - ಗಾಳಿಯ ನಡುವೆ ವಿದ್ಯುತ್ ಅವಘಡಕ್ಕೆ ಸಿಲುಕಿ ವೃದ್ಧೆ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಡೋತ್‍ಮೊಟ್ಟೆಯಲ್ಲಿ ನಡೆದಿದೆ.ಅಲ್ಲಿನ ನಿವಾಸಿ ಉಮ್ಮವ್ವ (76) ಎಂಬವರು ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಗಾಳಿಯ ಪರಿಣಾಮ ಸಿಲ್ವರ್ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು ತಂತಿಗಳು ನೆಕಚ್ಚಿದ್ದವು. ಈ ಬಗ್ಗೆ ಅರಿವು ಇಲ್ಲದೆ ಮನೆ ಸನಿಹದ ತೋಟಕ್ಕೆ ತೆರಳಿದ್ದ ಉಮ್ಮವ್ವ ವಿದ್ಯುತ್ ತಂತಿಯನ್ನು ತುಳಿದಿದ್ದಾರೆ. ಕಂಬ ತೋಟದೊಳಗೆ ಮುರಿದು ಬಿದ್ದ ಬಗ್ಗೆ ಇಲಾಖೆಗೂ ಮಾಹಿತಿ ಇಲ್ಲದ ಕಾರಣ ತಂತಿಯಲ್ಲಿ ವಿದ್ಯುತ್ ಪ್ರವಹಿಸುತಿತ್ತೆನ್ನಲಾಗಿದೆ. ಘಟನೆ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಈ ಕುರಿತು ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.