ಮಡಿಕೇರಿ, ಆ. 15: ಕೊಡಗು ಜಿಲ್ಲೆಯಲ್ಲಿ ಬಿಡುವು ನೀಡದೆ ಮಳೆಯಾಗುತ್ತಿದ್ದು, ಈ ಸಂಬಂಧ ಮುಖ್ಯಮಂತ್ರಿಯವರ ಬಳಿಗೆ ನಿಯೋಗ ತೆರಳಿ ಮಳೆ ಹಾನಿ ಬಗ್ಗೆ ಮಾಹಿತಿ ನೀಡಲಾಗುವದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ.

ನಗರದ ಜಿ.ಪಂ. ಸಿಇಒ ಅವರ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಮಳೆ ಹಾನಿ ಸಂಬಂಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಕೊಡಗು ಜಿಲ್ಲೆಗೆ ಆಗಮಿಸಿ 100 ಕೋಟಿ ರೂ. ಬಿಡುಗಡೆಗೆ ಘೋಷಿಸಿದ್ದಾರೆ. ಅದರಂತೆ ಪ್ರಥಮ ಹಂತದಲ್ಲಿ 20 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಹಣ ಖರ್ಚು ಮಾಡಿದ ನಂತರ ಇನ್ನಷ್ಟು ಹಣ ಬಿಡುಗಡೆ ಮಾಡಲಾಗುವದು ಎಂದು ಸಚಿವರು ವಿವರಿಸಿದರು.

ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದ ವ್ಯಾಪಕ ಮಳೆಗೆ ಭತ್ತ, ಕಾಫಿ, ಕರಿಮೆಣಸು ಹೀಗೆ ಹಲವು ಬೆಳೆಗಳು ಹಾನಿಯಾಗಿವೆ. ಹಾಗೆಯೇ ವಾಸದ ಮನೆಗಳು ಹಾನಿಯಾಗಿದ್ದು, ಸೂಕ್ತ ಪರಿಹಾರ ವಿತರಿಸಲಾಗುವದು. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆಗಳು ಹದಗೆಟ್ಟಿದ್ದು, ಸರಿಪಡಿಸುವ ಕಾರ್ಯ ಕೈಗೊಳ್ಳಲಾಗುವದು ಎಂದು ಅವರು ಹೇಳಿದರು.

ಸದ್ಯ ಪ.ಪಂ.ಗಳ ಚುನಾವಣಾ ನೀತಿ ಸಂಹಿತೆ ಇರುವದರಿಂದ ಮಳೆ ಹಾನಿ ಹೊರತುಪಡಿಸಿ ಬೇರೆ ಏನನ್ನೂ ಹೇಳಲು ಬರುವದಿಲ್ಲ, ಮುಂದಿನ ದಿನಗಳಲ್ಲಿ ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿ ಹಾಗೆಯೇ ಮಡಿಕೇರಿ ದಸರಾಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮತ್ತಿತರ ಬಗ್ಗೆ ಮಾಹಿತಿ ನೀಡಲಾಗುವದು ಎಂದು ಸಚಿವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಡಿಕೇರಿ-ಮಂಗಳೂರು ರಸ್ತೆ ಸಂಚಾರ ಬಂದ್ ಆಗಿದ್ದು, ಕಡಮಕಲ್ ರಸ್ತೆ ಮಾರ್ಗದಲ್ಲಿ ಜೀಪುಗಳ ಸಂಚಾರಕ್ಕಾದರೂ ಅವಕಾಶ ಮಾಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ಮಾಡಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯಲ್ಲಿ ಬಿಡುವು ನೀಡದೆ ಮಳೆಯಾಗುತ್ತಿರುವದರಿಂದ ಭತ್ತ, ಕಾಫಿ ಮತ್ತು ಏಲಕ್ಕಿ, ಬಾಳೆ ಬೆಳೆಗಳು ಅಪಾರ ನಷ್ಟ ಉಂಟಾಗಿದ್ದು, ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ ಜನಜೀವನ ಅಸ್ತವ್ಯಸ್ತ ಉಂಟಾಗಿದೆ. ಆದ್ದರಿಂದ ಕೂಡಲೇ ರಸ್ತೆ ಸರಿಪಡಿಸುವ ಕಾರ್ಯ ಕೈಗೊಳ್ಳಬೇಕು. ಹಾಗೆಯೇ ಬೆಳೆಗಳಿಗೆ ಪರಿಹಾರ ವಿತರಣೆ ಮಾಡಬೇಕು ಎಂದು ಸಚಿವರಲ್ಲಿ ಕೋರಿದರು. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಇತರರು ಇದ್ದರು.

ಕೋಟೆ ವೀಕ್ಷಣೆ

ಮಳೆಯಿಂದ ಸೋರುತ್ತಿರುವ ಕೋಟೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ವೀಕ್ಷಣೆ ಮಾಡಿದರು. ಈ ಸಂಬಂಧ ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದರು.

ನಗರದ ಕೋಟೆಯಲ್ಲಿ ಹಿಂದೆ ಜಿಲ್ಲಾಧಿಕಾರಿಯವರ ಕಚೇರಿ, ಜಿ.ಪಂ. ಕಚೇರಿ, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಜಿ.ಪಂ. ಅಧ್ಯಕ್ಷರ ಕಚೇರಿಗಳು ಇದ್ದವು, ಸದ್ಯ ಜಿಲ್ಲಾಧಿಕಾರಿ ಕಚೇರಿ, ಸಂಸದರ ಕಚೇರಿಗಳು ಜಿಲ್ಲಾಡಳಿತ ಭವನ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿವೆ. ಈಗ ಗಾಳಿಬೀಡು ರಸ್ತೆಯಲ್ಲಿ ಜಿ.ಪಂ. ಭವನ ನಿರ್ಮಾಣವಾಗುತ್ತಿದ್ದು ಶೀಘ್ರದಲ್ಲಿಯೇ ಈ ಕಚೇರಿಗಳು ಸಹ ಸ್ಥಳಾಂತರಗೊಳ್ಳಲಿವೆ ಎಂದು ಜಿ.ಪಂ. ಸಿಇಒ ಅವರು ಮಾಹಿತಿ ನೀಡಿದರು.

ಬಳಿಕ ಸಚಿವರು ನೂತವಾಗಿ ನಿರ್ಮಾಣಗೊಂಡಿರುವ ಖಾಸಗಿ ಬಸ್ ನಿಲ್ದಾಣ ವೀಕ್ಷಣೆ ಮಾಡಿದರು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ.ಸಿಇಒ ಇತರರು ಇದ್ದರು.