*ಸಿದ್ದಾಪುರ, ಆ. 15: ಕಳೆದ ಮೂರು ದಿನಗಳಿಂದ ಬೋರ್ಗರೆದು ಸುರಿಯುತ್ತಿರುವ ಮಳೆಗೆ ಇಲ್ಲಿಯ ಸುತ್ತಮುತ್ತಲ ಗ್ರಾಮಗಳು ಹಾಗೂ ಕಾವೇರಿ ನದಿ ಪಾತ್ರದ ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ವೀರಾಜಪೇಟೆ ತಾಲೂಕಿನ ಕರಡಿಗೋಡು ಮತ್ತು ಗುಹ್ಯ ಕೂಡುಗದ್ದೆ, ಕಕ್ಕಟಕಾಡು ಗ್ರಾಮಗಳಿಗೆ ತೆರಳುವ ರಸ್ತೆಗಳು ಸೋಮವಾರಪೇಟೆ ತಾಲೂಕಿನ ಬೆಟ್ಟದಕಾಡು ಹಾಗೂ ಬರಡಿ ಗ್ರಾಮಗಳಿಗೆ ತೆರಳುವ ರಸ್ತೆಗಳು ಜಲಾವೃತವಾಗಿದೆ. ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರಡಿ ಮತ್ತು ಬೆಟ್ಟದಕಾಡು ಗ್ರಾಮಗಳಿಗೆ ಕಂದಾಯ ಅಧಿಕಾರಿ ಮಧುಸೂಧನ್ ಹಾಗೂ ಗ್ರಾಮ ಲೆಕ್ಕಿಗರಾದ ಅನೂಷ ಹಾಗೂ ಸಿಬ್ಬಂದಿಗಳಾದ ಸ್ವಾಮಿ ಮತ್ತು ಜನಪ್ರತಿನಿಧಿಗಳ ತಂಡ ಮಂಗಳವಾರದಂದು ಬೆಳಗ್ಗಿನಿಂದಲೇ ಬೆಟ್ಟದಕಾಡು ಗ್ರಾಮದಲ್ಲಿ ಇದ್ದು ಪ್ರವಾಹದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ ಕಾವೇರಿ ನದಿ ತಟದ ನಿವಾಸಿಗಳಾದ ಜೋಸೆಫ್, ಮ್ಯಾಥ್ಯೂ, ಜಾನ್ಸನ್ ಸೇರಿದಂತೆ 27 ಮಂದಿಯನ್ನು ಸಮೀಪದ ನೆಲ್ಲಿಹುದಿಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಲಾಗಿರುವ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಬರಡಿ ಗ್ರಾಮದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಹುತೇಕ ಗಿರಿಜನರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಬೆಟ್ಟದಕಾಡು ಗ್ರಾಮದಲ್ಲಿ ಬೆಳಿಗ್ಗೆ 12 ಗಂಟೆಯವರೆಗೂ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದ್ದು, ಅಪರಾಹ್ನ 2ರ ವೇಳೆಗೆ ರಸ್ತೆಗಳಲ್ಲಿ 4 ಅಡಿಗಳಷ್ಟು ನೀರು ಶೇಖರಣೆಗೊಂಡಿದ್ದು, ಸಮೀಪದ ನಿವಾಸಿಗಳು ನದಿ ನೀರಿನ ಏರಿಕೆಯ ಮಟ್ಟವನ್ನು ನೋಡಿ ಭಯಭೀತರಾಗಿದ್ದಾರೆ. ಬೆಟ್ಟಡಕಾಡು ಪ್ರದೇಶದ ನದಿ ತಟದ ನಿವಾಸಿಗಳಲ್ಲಿ ಬಹುತೇಕ ಮಂದಿ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯಲು ನಿರಾಕರಿಸಿದ್ದು, ನೀರಿನ ಮಟ್ಟ ಹೆಚ್ಚುತ್ತಿದ್ದರೆ ಸಮೀಪದಲ್ಲಿಯೇ ಇರುವ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳುವದಾಗಿ ಸೂಚಿಸಿದ್ದಾರೆ.

ಕಾರಿನ ಮೇಲೆ ಬಿದ್ದ ಮರ

ಕೂಡುಗದ್ದೆ ಗ್ರಾಮದ ನಿವಾಸಿ ಸುನಿಲ್ ಎಂಬವರ ಮನೆಯ ಮುಂದೆ ನಿಲ್ಲಿಸಿದ ಮಾರುತಿ ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದು, ಮನೆಯ ಮೇಲ್ಛಾವಣಿ ಸೇರಿದಂತೆ ಕಾರು ಮತ್ತು ಸಮೀಪದಲ್ಲಿಯೇ ನಿಲ್ಲಿಸಿದ್ದ ಸ್ಕೂಟರ್ ಸಂಪೂರ್ಣವಾಗಿ ಜಖಂಗೊಂಡಿವೆ. ಸ್ಥಳಕ್ಕೆ ಅಮ್ಮತ್ತಿ ಕಂದಾಯ ಅಧಿಕಾರಿ ವಿನು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮನೆ ಮೇಲೆ ಬಿದ್ದ ಮರ

ಅಭ್ಯತ್‍ಮಂಗಲ ಪೈಸಾರಿ ನಿವಾಸಿ ಸೀನ ಎಂಬವರ ಮನೆಯ ಮೇಲೆ ರಾತ್ರಿ ವೇಳೆಯಲ್ಲಿ ಸಿಲ್ವರ್ ಮರ ಬಿದ್ದು ಮನೆಯಲ್ಲಿ ಇದ್ದವರು ಅಧೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಮೇಲ್ಛಾವಣಿ ಭಾಗಶಃ ಕುಸಿದಿದೆ. ಅಭ್ಯತ್‍ಮಂಗಲ ಗ್ರಾಮದ ಜಾನಕಿ ಎಂಬವರ ಮನೆಯ ಗೋಡೆ ಕುಸಿದಿದ್ದು ಸ್ಥಳಕ್ಕೆ ಗ್ರಾಮ ಲೆಕ್ಕಿಗರಾದ ಅನುಷ, ಪಿಡಿಓ ನಂಜುಂಡಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಅಂಚೆಮನೆ ಸುಧಿ ಕುಮಾರ್, ಬಿ.ಕೆ. ಯಶೋಧ ಬೇಟಿ ನೀಡಿದರು. ಒಂಟಿಯಂಗಡಿ ಎಂಬಲ್ಲಿ ವಾಸು ಮತ್ತು ಕುಮಾರಿ ಎಂಬವರ ಮನೆ ಜಲಾವೃತವಾಗೊಂಡಿದ್ದು ಅರಣ್ಯ ಅಧಿಕಾರಿ ಅಲೆಕ್ಸಾಂಡರ್ ಎಂಬವರಿಗೆ ಸೇರಿದ ಅಡಿಕೆ ತೋಟ ಸಂಪೂರ್ಣವಾಗಿ ಜಲಾವೃತಗೊಂಡಿದ್ದು ಅಪಾರ ನಷ್ಟಕ್ಕೆ ಕಾರಣವಾಗಿದೆ.

67 ಇಂಚು ಮಳೆ ದಾಖಲು

ಸಿದ್ದಾಪುರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಳೆದ ಜನವರಿ ತಿಂಗಳಿನಿಂದ ಮಂಗಳವಾರದವರೆಗೆ 67 ಇಂಚು ಮಳೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು 20 ಇಂಚು ಹೆಚ್ಚು ಎಂದು ಕಾಫಿ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರದಂದು ರಾತ್ರಿ ವೇಳೆ ಈ ವ್ಯಾಪ್ತಿಯಲ್ಲಿ 4 ಇಂಚು ಮಳೆ ದಾಖಲಾಗಿದೆ. -ಅಂಚೆಮನೆ ಸುಧಿ