ಮಡಿಕೇರಿ, ಆ. 15: ಹಿಂದೆಂದೂ ಕಂಡು - ಕೇಳರಿಯದ ವಾಯು - ವರುಣನ ರುದ್ರನರ್ತನ, ಹಸಿಯಾದ ಭೂಮಿ ಇಷ್ಟ ಬಂದಂತೆ ಜಾರುತ್ತಿದೆ, ವಾಸಕ್ಕೆಂದು ಕಟ್ಟಿದ ಮನೆಗಳು ಮಣ್ಣು ಪಾಲಾಗುತ್ತಿವೆ, ಎಲ್ಲೆಂದರಲ್ಲಿ ಕಾಲಿಟ್ಟಲೆಲ್ಲ ಬಿರುಕುಗಳು, ಹೆದರಿ ಮನೆ - ಮಠ ತೊರೆದ ನಿವಾಸಿಗಳು, ಇದು ಕುಗ್ರಾಮ ಕಾಲೂರುವಿನ ಪರಿಸ್ಥಿತಿಯಾಗಿದೆ. ಗ್ರಾಮಗಳು ದ್ವೀಪದಂತಾಗಿದ್ದು, ಹೊರ ಪ್ರಪಂಚದಿಂದ ದೂರವಾಗಿದೆ.ಮಡಿಕೇರಿಯಿಂದ 15 ಕಿ.ಮೀ. ವ್ಯಾಪ್ತಿಯೊಳಗಿರುವ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕಾಲೂರು ಗ್ರಾಮ ಹೆಸರೇ ಹೇಳುವಂತೆ ಕಾಲಿಟ್ಟಲೆಲ್ಲ ಸುಂದರ ಪ್ರಕೃತಿ, ಪರಿಸರದೊಂದಿಗೆ ಜಲಸಂಪತ್ಭರಿತವಾದ ಗ್ರಾಮವಾಗಿದೆ. ಕುಗ್ರಾಮವೆಂದೇ ಪರಿಗಣಿಸಲ್ಪಟ್ಟಿರುವ ಈ ಗ್ರಾಮದ ಪರಿಸ್ಥಿತಿ ಇದೀಗ ಭಯಾನಕವಾಗಿದೆ. ಜಿಲ್ಲೆಯ ಎಲ್ಲ ಕಡೆಗಳಲ್ಲೂ ಭಾರೀ ಮಳೆಯಾಗುತ್ತಿರುವದು ದಿಟವಾದರೂ ಇಲ್ಲಿಯ ಮಳೆ ಇನ್ನೂ ಭೀಕರವಾಗಿದೆ. ಮರ - ಮನೆಗಳು ಧರಾಶಾಹಿಯಾಗುತ್ತಿದ್ದರೆ, ಇತ್ತ ಇನ್ನೊಂದು ಕಡೆಯಲ್ಲಿ ಭೂಮಿ ತನ್ನಿಂತಾನೆ ಬಿರುಕು ಬಿಟ್ಟು ಜರಿಯುತ್ತಿವೆ. ವಾಸ ಮಾಡಲು ಭಯಭೀತರಾಗಿರುವ ಇಲ್ಲಿನ ಮಂದಿ ಮನೆಗಳನ್ನು ತೊರೆದು ಬೀದಿಗೆ ಬಂದಿದ್ದು, ಗಂಜಿ ಕೇಂದ್ರವನ್ನು ಆಶ್ರಯಿಸಿದ್ದಾರೆ.
ಮನೆಗಳು ನಾಶ
ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕಾಲೂರುವಿನಲ್ಲಿ ಸೀತಾರಾಮ ಪಾಟಿ ಎಂಬ ಉಪಗ್ರಾಮವಿದೆ. ಅನೇಕ ಕುಟುಂಬಗಳು ಇಲ್ಲಿ ನೆಲೆಕಂಡಿವೆ. ಮನೆ ಕಟ್ಟಿಕೊಂಡು ಕಾಫಿ ತೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸುರಿಯುವ ಮಳೆಗೆ ಅಲ್ಲಲ್ಲಿ ಸಣ್ಣ - ಪುಟ್ಟ ಭೂಕುಸಿತಗಳಾಗುತ್ತಿದ್ದರೂ ಅದನ್ನು ದುರಸ್ತಿಪಡಿಸಿಕೊಂಡು ಬರುತ್ತಿದ್ದರು. ಆದರೆ ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಈ ಗ್ರಾಮಕ್ಕೆ ಗಂಡಾಂತರ ಬಂದೆರಗಿದೆ. ಒಮ್ಮಿಂದೊಮ್ಮೆಲೆ ಭೂಕುಸಿದು ಮನೆಗಳು ಮಣ್ಣು ಪಾಲಾಗಿವೆ. ರಸ್ತೆಗಳು ಇಲ್ಲವಾಗಿವೆ. ಎಕರೆಗಟ್ಟಲೆ ಭೂಮಿ ಜರಿಯುತ್ತಲೇ ಇವೆ. ನಿನ್ನೆ ಸಂಜೆ 4.30 ಗಂಟೆಗೆ ಆರಂಭವಾದ ದುರಂತ ಸನ್ನಿವೇಶ ಮುಂದುವರಿಯುತ್ತಲೇ ಇದೆ.
ಅಲ್ಲಿನ ನಿವಾಸಿ, ಎಂ.ಎಲ್. ತಮ್ಮಯ್ಯ ಎಂಬವರ ಮನೆ ಹಿಂಭಾಗ ಭೂಕುಸಿದಿದ್ದು, ಮನೆಯೊಳಗೆ ನೀರು ತುಂಬಿಕೊಂಡಿದೆ. ಮನೆಯೊಳಗಿರುವ ಸಾಮಗ್ರಿಗಳೆಲ್ಲ ನೀರು ಪಾಲಾಗುತ್ತಿವೆ. ಉಮ್ಮಕ್ಕ ಅವರ ಪುತ್ರ ಪುರಂದರ ಎಂಬವರಿಗೆ ಸೇರಿದ ಮನೆ ಸಂಪೂರ್ಣ ನೆಲಸಮವಾಗಿದೆ. ಅನಾರೋಗ್ಯಪೀಡಿತರಾಗಿರುವ ಪುರಂದರ
(ಮೊದಲ ಪುಟದಿಂದ) ಅವರ ಪತ್ನಿ ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದ ಹಿನ್ನೆಲೆಯಲ್ಲಿ ಪುರಂದರ ಅವರು ಸನಿಹದಲ್ಲಿರುವ ತಮ್ಮ ತಾಯಿ ಹಾಗೂ ಸಹೋದರ ಬಿ.ಕೆ. ಸುರೇಶ್ ಅವರ ಮನೆಯಲ್ಲಿ ತಂಗಿದ್ದರು. ರಾತ್ರಿ ವೇಳೆ ಇದ್ದಕ್ಕಿದ್ದಂತೆ ಸುಮಾರು 50 ಅಡಿಗೂ ಅಧಿಕ ಎತ್ತರದಿಂದ ಭೂಮಿ ಜರಿದು ಬಂದು ಮನೆಯನ್ನು ಎಳೆದುಕೊಂಡು ಹೋಗಿದೆ. ಮನೆಯೊಳಗಿದ್ದ ಸಾಮಗ್ರಿಗಳು, ದಾಖಲೆ ಪತ್ರಗಳು ಮಣ್ಣು ಪಾಲಾಗಿವೆ. ಅದೃಷ್ಟವಶಾತ್ ಮಣ್ಣಿನ ರಾಶಿ ಮನೆಗೆ ಅಪ್ಪಳಿಸಿ ಬಲಕ್ಕೆ ತಿರುಗಿದ್ದರಿಂದ ಉಮ್ಮಕ್ಕ ಅವರ ಹಾಗೂ ಕೆಳಭಾಗದಲ್ಲಿರುವ ಭೀಮಯ್ಯ ಎಂಬವರು ವಾಸವಿರುವ ಮನೆಗಳು ಬಚಾವಾಗಿವೆ.
ಗಾಳಿಬೀಡು ಗ್ರಾ.ಪಂ. ಮಾಜಿ ಅಧ್ಯಕ್ಷೆ ನೀಲಮ್ಮ ಹಾಗೂ ಸಿ.ಕೆ. ಪೊನ್ನಪ್ಪ ಅವರಿಗೆ ಸೇರಿದ ಆರ್‍ಸಿಸಿ ಮನೆ ನಡುಭಾಗದಲ್ಲಿ ಹಾಗೂ ಮುಂಭಾಗದಲ್ಲಿ ಬಿರುಕು ಬಿಟ್ಟಿದೆ. ಬಿರುಕು ಅಂಗಳವನ್ನು ನುಂಗಿದ್ದು, ಕುಸಿಯುವ ಹಂತದಲ್ಲಿದೆ. ಬೇರೆ ವಿಧಿಯಿಲ್ಲದೆ ಮನೆಯೊಳಗಿನ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸಲು ಅಂಗಳದಲ್ಲಿ ಸಂಗ್ರಹಿಸಿಟ್ಟಿದ್ದ ದೃಶ್ಯ ‘ಶಕ್ತಿ’ ಸ್ಥಳಕ್ಕೆ ತೆರಳಿದಾಗ ಗೋಚರಿಸಿತು.
ಬಾಯ್ತೆರೆದ ಭೂಮಿ
ಮನೆಗಳಿಗೆ ಈ ರೀತಿಯ ಹಾನಿಯಾದರೆ ಇತ್ತ ಭೂಮಿ ತನ್ನಿಂತಾನೆ ಬಾಯ್ತೆರೆದು ಜರಿಯುತ್ತಿರು ವದು ಆತಂಕಕಾರಿ ಬೆಳೆವಣಿಗೆ ಯಾಗಿದೆ. ಉಮ್ಮಕ್ಕ ಅವರ ಜಾಗದಲ್ಲಿ ಮೇಲ್ಭಾಗದಲ್ಲಿ ಹಾದು ಹೋಗಿರುವ ಹಲವಾರು ವರ್ಷಗಳ ಹಳೆಯದಾದ ರಸ್ತೆ ಸೇರಿದಂತೆ ಜಾಗ ಸಂಪೂರ್ಣ ಜರಿದು ಹೋಗಿದೆ. ಇತ್ತ ಇನ್ನೊಂದು ಕಡೆ ಭೀಮಯ್ಯ (ಸುಂದರ) ಅವರಿಗೆ ಸೇರಿದ ಜಾಗದಲ್ಲಿನ ರಸ್ತೆ ಸಹಿತ ಕಾಫಿ ತೋಟ ಎಕರೆಗಟ್ಟಲೆ ಜರಿದು ಹೋಗಿದೆ. ಭೂಮಿ ಜರಿದಿರುವ ದೃಶ್ಯ ಭಯಾನಕವಾಗಿದ್ದು, ಕಣ್ಣು ಹಾಯಿಸಿದಷ್ಟು ಕಾಣಸಿಗದಂತೆ ಜರಿಯುತ್ತಲೇ ಇದೆ.
ಅಲ್ಲಲ್ಲೇ ಬಿರುಕು
ಹಳೆಯದಾದ ಕಚ್ಚಾರಸ್ತೆಗಳಾಗಿದ್ದು, ವಾಹನ ಸಂಚಾರ ಕೂಡ ವಿರಳವಾಗಿರುವ ಇಲ್ಲಿನ ರಸ್ತೆ ಹಾಗೂ ತೋಟಗಳಲ್ಲಿ ಎಲ್ಲೆಂದರಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಎತ್ತರದ ಜೌಗು ಪ್ರದೇಶವಲ್ಲವಾಗಿದ್ದರೂ ಇಲ್ಲಿನ ಮಣ್ಣು ಇದ್ದಕ್ಕಿದ್ದ ಹಾಗೆ ಕುಸಿಯುತ್ತಿದೆ.
ರಸ್ತೆ ಕುಸಿತ
ಘಟನಾ ಸ್ಥಳಕ್ಕೆ ಬೆಳಿಗ್ಗೆ ತೆರಳಿ ವಾಹನ ನಿಲ್ಲಿಸಿ ಗ್ರಾಮದೊಳಗಡೆ ಸುತ್ತಾಡಿ ಮತ್ತೆ ಅದೇ ಸ್ಥಳಕ್ಕೆ ಬಂದಾಗ ಅಲ್ಲಿ ಅಚ್ಚರಿ ಕಾದಿತ್ತು. ವಾಹನ ನಿಲ್ಲಿಸಿದ್ದ ಅನತಿ ದೂರದಲ್ಲಿ ಕಚ್ಚಾರಸ್ತೆ ಕುಸಿದಿದ್ದು, ಕಾಲು ಹಾಕಿದಲ್ಲೆಲ್ಲ ಹುದುಗಿಕೊಳ್ಳುತ್ತಿತ್ತು. ಜೀಪೊಂದರ ಚಕ್ರ ಸಂಪೂರ್ಣ ಹುದುಗಿಹೋಗಿ ಮತ್ತೊಂದು ಜೀಪಿನ ಸಹಾಯದಿಂದ ಮೇಲೆತ್ತಲಾಯಿತು. ಅಚ್ಚರಿಯೆಂದರೆ ಡಾಮರು ರಸ್ತೆ ಕೂಡ ಕುಸಿಯುತ್ತಿದೆ.
ಸಾಗಾಟ ಸಾಧ್ಯವಿಲ್ಲ
ರಸ್ತೆ ಕುಸಿಯುತ್ತಿರುವದರಿಂದ ಮನೆಗಳಲ್ಲಿರುವ ಸಾಮಗ್ರಿಗಳನ್ನು ಸಾಗಾಟ ಮಾಡಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಎಲ್ಲರ ಮನೆಗಳಲ್ಲೂ ಸಾಮಗ್ರಿಗಳು ಹಾಗೆಯೇ ಇವೆ. ಜೀವ ಉಳಿದರೆ ಸಾಕೆಂದು ಎಲ್ಲರೂ ಮನೆ ತೊರೆದು ಬಂದಿದ್ದಾರೆ. ಪೊನ್ನಪ್ಪ ಅವರ ಮನೆಯ ಅಂಗಳದಲ್ಲಿ ಸಾಮಗ್ರಿಗಳನ್ನು ಹಾಕಿದ್ದಾರಾದರೂ ಅಲ್ಲಿಗೆ ವಾಹನ ತೆರಳಲು ಸಾಧ್ಯವಾಗುತ್ತಿಲ್ಲ. ಸದ್ಯಕ್ಕೆ ಗ್ರಾಮದ ಯುವಕರಾದ ಬಿ.ಕೆ. ಸುರೇಶ್, ನವೀನ್ ದೇರಳ ಹಾಗೂ ಇನ್ನಿತರರು ಗ್ರಾಮಸ್ಥರನ್ನು ಮನೆಗಳಿಂದ ಬೇರೆಡೆಗೆ ತೆರಳುವಂತೆ ಮನವೊಲಿಸಿ ಅಂಗನವಾಡಿ ಬಳಿಗೆÉ ಕರೆ ತಂದಿದ್ದಾರೆ. ಕಂದಾಯ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿ ಗ್ರಾಮ ಲೆಕ್ಕಿಗ ಶಿವಕುಮಾರ್ ಸ್ಥಳಕ್ಕಾಗಮಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ಗಾಳಿಬೀಡು ಶಾಲೆಯಲ್ಲಿ ಗಂಜಿ ಕೇಂದ್ರದಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಿದ್ದಾರೆ. ಇದೀಗ ಗ್ರಾಮದ ಎಂ.ಎಲ್. ತಮ್ಮಯ್ಯ, ಬಿ.ಕೆ. ಪುರಂದರ, ಉಮ್ಮಕ್ಕ, ಭೀಮಯ್ಯ, ವೆಂಕಮ್ಮ, ಸಿ.ಕೆ. ಪೊನ್ನಪ್ಪ, ಭೀಮಯ್ಯ (ಸುಂದರ), ಯೋಗೇಂದ್ರ, ಕೆ.ಎಸ್. ಚೆನ್ನಪ್ಪ, ಕೆ.ಎಸ್. ಜೋಯಪ್ಪ, ಎಂ.ಎಲ್. ಶಿವಪ್ಪ, ಬಿ.ಕೆ. ಸುರೇಶ್ ಅವರುಗಳ ಕುಟುಂಬದ 30ಕ್ಕೂ ಅಧಿಕ ಮಂದಿ ಗಾಳಿಬೀಡು ಪ್ರಾಥಮಿಕ ಶಾಲೆಯ ಗಂಜಿ ಕೇಂದ್ರದಲ್ಲಿದ್ದಾರೆ.
ಗ್ರಾಮಸ್ಥರ ಆಕ್ರೋಶ
ಗ್ರಾಮದಲ್ಲಿ ಆಗಿರುವ ಗಂಡಾಂತರದ ಬಗ್ಗೆ ಗ್ರಾ.ಪಂ. ಅಧ್ಯಕ್ಷ ಸುಭಾಶ್ ಅವರ ಗಮನಕ್ಕೆ ತಂದ ಸಂದರ್ಭ ಸ್ಪಂದಿಸದ ಅಧ್ಯಕ್ಷರು ಕೇವಲವಾಗಿ ಮಾತನಾಡಿದ್ದಲ್ಲದೆ, ಸ್ಥಳಕ್ಕೂ ಆಗಮಿಸದ ಬಗ್ಗೆ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮತ ಕೇಳಲು ಬರುವಾಗ ಇರುವ ಸೌಜನ್ಯ ಇದೀಗ ಅಧ್ಯಕ್ಷರಿಗಿಲ್ಲವೆಂದು ಅಸಮಾ ಧಾನ ವ್ಯಕ್ತಪಡಿಸಿದರು.
ಕಾಲೂರಿನಲ್ಲಿ...
ಸೀತಾರಾಮಪಾಟಿಯ ಪರಿಸ್ಥಿತಿ ಈ ರೀತಿಯದ್ದಾದರೆ, ಸ್ವಲ್ಪ ಮುಂದಕ್ಕೆ ಇರುವ ಕಾಲೂರುವಿಗೆ ಕಾಲಿಡಲು ಮಾರ್ಗವೇ ಇಲ್ಲದಂತಾಗಿದೆ. ಸೀತಾರಾಮಪಾಟಿ ಬಳಿಯ ಇಳಿಜಾರಿನಲ್ಲಿ ಎರಡೂ ಕಡೆಗಳಲ್ಲಿ ಭೂಕುಸಿದಿದ್ದು, ರಸ್ತೆ ಸಂಪೂರ್ಣ ಬಂದ್ ಆಗಿದೆ.
ಅತ್ತ ಕಾಲೂರು ಸೇತುವೆಯ ಮೇಲೆ 4 ಅಡಿಗಳಷ್ಟು ಎತ್ತರದಲ್ಲಿ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಅಲ್ಲದೆ ಅಲ್ಲಿನ ನಿವಾಸಿಗಳಾದ ಐಲಪಂಡ ಪೊನ್ನಪ್ಪ ಹಾಗೂ ಕುಳ್ಳೋಡಂಡ ಪೊನ್ನಪ್ಪ ಎಂಬವರುಗಳ ಮನೆ ಮೇಲೆ ಭೂಕುಸಿತವುಂಟಾಗಿ ನಷ್ಟವಾಗಿದೆ. ಕುಸಿದ ಮಣ್ಣನ್ನು ತೆಗೆದಷ್ಟು ಮತ್ತೆ ಕುಸಿಯುತ್ತಿದ್ದು, ಆತಂಕ ಮೂಡಿಸಿದೆ.
-ಪ್ರತ್ಯಕ್ಷ ವರದಿ : ಕುಡೆಕಲ್ ಸಂತೋಷ್, ಪ್ರಜ್ಞಾ ಜಿ.ಆರ್.