ಮಡಿಕೇರಿ, ಆ. 15: ಮುಂದುವರಿದ ಮಳೆ ಕೊಡಗು ಜನತೆಯ ಭವಿಷ್ಯವನ್ನು ಭಯ- ಆತಂಕದತ್ತ ತಂದೊಡ್ಡಿದೆ. ಇಂದಿನ ರಾತ್ರಿಯ ಸ್ಥಿತಿ-ಗತಿಯ ಬಗ್ಗೆ ಕಳವಳಗೊಂಡಿರುವ ಜನತೆ ನಿದ್ರಾ ರಹಿತರಾಗಿ ಕಳೆಯುತ್ತಿದ್ದಾರೆ. ಮಳೆ ಗಾಳಿಯ ಬಾಯಿಗೆ ಮಡಿಕೇರಿ ಸಮೀಪ ವೃದ್ಧೆಯೊಬ್ಬರು ವಿದ್ಯುತ್ ತಂತಿ ತಗಲಿ ಜೀವ ಕಳೆÀದುಕೊಂಡಿದ್ದಾರೆ. ಮಾದಾಪುರ ಬಳಿಯ ಹಟ್ಟಿಹೊಳೆ ಬಾಯ್ಬಿಟ್ಟು ವಾಹನ ಸಂಚಾರ ಸ್ಥಗಿತವಾಗಿದೆ.ಅತ್ಯಂತ ವಿಚಿತ್ರ ಸ್ಥಿತಿಯಲ್ಲಿ ಮಡಿಕೇರಿ ಸಮೀಪದ ಕಾಲೂರು ಗ್ರಾಮದಲ್ಲಿ ನಾಲ್ಕೈದು ಎಕರೆ ಪ್ರದೇಶ ಮನೆಗಳ ಸಹಿತ ಜಾರಿಹೋಗಿದ್ದು, ನಿವಾಸಿಗಳನ್ನು ಸ್ಥಳಾಂತರಗೊಳಿಸ ಲಾಗಿದೆ. ಕುಶಾಲನಗರದಲ್ಲಿ ಹಲವಡೆ ಉಕ್ಕಿದ ನೀರಿನಿಂದಾಗಿ ದೋಣಿಯಲ್ಲಿ ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ. ಶಾಂತಳ್ಳಿ- ಸಕಲೇಶಪುರ ರಸ್ತೆ ಸದ್ಯಕ್ಕೆ ದುರಸ್ತಿಯಾಗದಷ್ಟು ಕಡೆ ಬಿರುಕು ಬಿಟ್ಟಿದೆ. ಮಡಿಕೇರಿ ಮಂಗಳೂರು ರಸ್ತೆ ಯಥಾ ಸ್ಥಿತಿಯಲ್ಲಿ ಬರೆ ಕುಸಿತದಿಂದ ಸಂಪರ್ಕ ಕಳೆದುಕೊಂಡಿದೆ. ಬೊಲೆರೊ ವಾಹನವೊಂದು ನದಿಯಾಚೆ ಬಿದ್ದಿದೆ. ಕೂಡಿಗೆ ಸಮೀಪ ಕೋಳಿ ಫಾರಂಗೆ ನೀರು ನುಗ್ಗಿ 2 ಸಾವಿರಕ್ಕೂ ಅದಿಕü ಕೋಳಿಗಳು ನೀರು ಪಾಲಾಗಿವೆ. ಗುಡ್ಡೆಹೊಸೂರು ಸಮೀಪ ಸರ್ಕಾರಿ ನರ್ಸರಿಗೆ ನೀರು ಬಂದು ಲಕ್ಷಾಂತರ ಮೌಲ್ಯದ ಗಿಡಗಳು ನೆಲಕಚ್ಚಿವೆ. ಬೇತ್ರಿ ಹೊಳೆ ತುಂಬಿ ರಸ್ತೆ ಮೇಲೆ ಹರಿದು ಸಂಚಾರ ಅಸ್ತವ್ಯಸ್ತಗೊಂಡಿದೆ. ಕೊಟ್ಟಮುಡಿ ಯಲ್ಲಿ ಕಾವೇರಿ ಉಕ್ಕಿ ಹರಿಯುತ್ತಿದ್ದು, ಕೊಟ್ಟಮುಡಿಯ 20 ಕುಟುಂಬ ಗಳನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿ ಸಲಾಗಿದೆ.

(ಮೊದಲ ಪುಟದಿಂದ) ಭಾಗಮಂಡಲ ಮಡಿಕೇರಿ ಮತ್ತು ಭಾಗಮಂಡಲ ಅಯ್ಯಂಗೇರಿ ರಸ್ತೆ ಜಲಾವೃತಗೊಂಡು ಎರಡು ದಿನಗಳಾಗಿವೆ. ಗಾಳಿಬೀಡು ಕಾಲೂರು ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಮಾದಾಪುರ ಸೂರ್ಲಬಿ ನಡುವೆ ಗರ್ವಾಲೆಯ ಹಾನಗಲ್ಲು ಹೊಳೆ ಬಳಿ ಭೂಕುಸಿತಗೊಂಡು ರಸ್ತೆ ಸಂಚಾರ ನಿಂತಿದೆ. ವಣಚಲು ಬಳಿ ಚಪ್ಪಂಡೆ ಕೆರೆ ಬಳಿ ಮನೆಗಳ ಒಳಗೆ ನೀರು ಹರಿದಾಡುತ್ತಿದೆ. ಮಾದಾಪುರ ವಿಎಸ್‍ಎಸ್‍ಎಸ್‍ಎನ್ ಬಳಿ ಬರೆ ಕುಸಿದು ಸಂಚಾರಕ್ಕೆ ತೊಂದರೆಯಾಗಿತ್ತು.

ಕೂಡಿಗೆ ಸಮೀಪ ಹಾರಂಗಿ ಮತ್ತು ಕಾವೇರಿ ಒಂದಾಗಿ ಸೇರಿ ಜನ ಜೀವನ ಕಠಿಣವಾಗಿದೆ. ಪೊನ್ನಂಪೇಟೆ - ಟಿ. ಶೆಟ್ಟಿಗೇರಿ ನಡುವೆ ರಾಜ್ಯ ಹೆದ್ದಾರಿ ಬಿರುಕು ಬಿಟ್ಟಿದೆ. ಸಿದ್ದಾಪುರ ಕರಡಿಗೋಡು ಜಲಾವೃತವಾಗಿದ್ದು, ಗಂಜಿ ಕೇಂದ್ರ ಆರಂಭಿಸಲಾಗಿದೆ. ನಿಟ್ಟೂರು ಲಕ್ಷ್ಮಣತೀರ್ಥ ಅಪಾಯದ ಅಂಚಿನಲ್ಲಿದೆ. ಮಡಿಕೇರಿ- ಸುಂಟಿಕೊಪ್ಪ ರಸ್ತೆಯ ಕೆದಕಲ್ ಬಳಿ ಬರೆ ಕುಸಿದು ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಮಡಿಕೇರಿಯ ಹಲವು ಬಡಾವಣೆÉಗಳಲ್ಲಿ ಮನೆಗಳ ಮೇಲೆ ಬರೆ ಜರಿದು ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ.

ಜಿಲ್ಲೆಯ ಅನಾಹುತಗಳ ಬಗ್ಗೆ ಲೋಕೋಪಯೋಗಿ ಸಚಿವ ರೇವಣ್ಣ ಅವರು ಖುದ್ದು ದೂರವಾಣಿ ಮೂಲಕ “ಶಕ್ತಿ” ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರಿಂದ ಆಗಾಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರಲ್ಲದೆ, ಅವರ ಆಪ್ತ ಸಹಾಯಕರ ಮೂಲಕ ಜಾರಿಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದಾರೆ. ಜಿಲ್ಲೆಯ ಒಟ್ಟು ಪರಿಸ್ಥಿತಿ ಬಗ್ಗೆ ವಿವರಿಸಲು ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ನಿಯೋಗವೊಂದನ್ನು ಮುಖ್ಯಮಂತ್ರಿ ಬಳಿ ಕರೆದೊಯ್ಯುವದಾಗಿ ಹೇಳಿಕೆ ನೀಡಿದ್ದಾರೆ.