ಸೋಮವಾರಪೇಟೆ, ಆ. 14: ಬಲಿಷ್ಠ ಸಂಘಟನೆಯಿಂದ ಮಾತ್ರ ಸಮಾಜದಲ್ಲಿ ಸಮುದಾಯಕ್ಕೆ ಶಕ್ತಿ ಬರಲಿದೆ. ಆ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಸಾಗಬಹುದಾಗಿದೆ ಎಂದು ಸೋಮವಾರಪೇಟೆ ನಾರಾಯಣಗುರು ಸೇವಾ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಟಿ. ರವಿ ಅಭಿಪ್ರಾಯಿಸಿದರು.

ನಾರಾಯಣ ಗುರು ಸೇವಾ ಸಮಿತಿ ಹಾಗೂ ತುಳುನಾಡು ಬಿಲ್ಲವ ಮಹಿಳಾ ಸಂಘದ ವತಿಯಿಂದ ಇಲ್ಲಿನ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 6ನೇ ವರ್ಷದ ಆಟಿ ಸಂಭ್ರಮೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯದ ಸಂಘಟನೆಗಳು ಹೆಚ್ಚು ಬಲಗೊಂಡಂತೆ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಉನ್ನತಿ ಸಾಧಿಸಬಹುದು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಿತಿಯ ಅಧ್ಯಕ್ಷ ಬಿ.ಎ. ಭಾಸ್ಕರ್ ಮಾತನಾಡಿ, ಸಮುದಾಯದ ಹಿತ ಚಿಂತನೆಯೊಂದಿಗೆ ಸಂಘ ಕಾರ್ಯನಿರ್ವಹಿಸುತ್ತಿದ್ದು, ನಮ್ಮೊಳಗಿ ರುವ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕಿದೆ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಮಿತಿಯ ಮಾಜಿ ಉಪಾಧ್ಯಕ್ಷ ಬಿ.ಡಿ. ರಘು, ಮಾಜಿ ಕಾರ್ಯದರ್ಶಿ ಬಿ.ಆರ್. ಜಯರಾಂ, ಮಾಜಿ ಖಜಾಂಚಿ ಎಂ.ಆರ್. ಸತೀಶ್, ಡೊಂಬಯ್ಯ, ಮಾಜಿ ಕಾರ್ಯದರ್ಶಿ ಕೆ.ಸಿ. ದಿನೇಶ್, ಮಾಜಿ ಸಹಕಾರ್ಯ ದರ್ಶಿ ಲಾಲೂ ಸಾಲ್ಯಾನ್, ತುಳುನಾಡು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಚಂದ್ರಹಾಸ್, ಸೇವಾ ಸಮಿತಿಯ ಮಾಜಿ ಉಪಾಧ್ಯಕ್ಷೆ ಹೇಮ ಕೃಷ್ಣಪ್ಪ, ದಾನಿಗಳಾದ ಬಿ.ಆರ್. ಚಂದ್ರ ಹಾಸ್ ಅವರುಗಳು ಉಪಸ್ಥಿತರಿದ್ದರು. ನಂತರ ಸಮಾಜದ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಹಗ್ಗಜಗ್ಗಾಟ ಸ್ಪರ್ಧೆ, ಮಕ್ಕಳಿಗೆ ಸೇರಿದಂತೆ ವಯಸ್ಕರಿಗೆ ವಿವಿಧ ಕ್ರೀಡೆ ಹಾಗೂ ಮನೋರಂಜನಾ ಸ್ಪರ್ಧೆಗಳು ನಡೆದವು. ಕಾಗಡಿಕಟ್ಟೆಯ ಸೈನಿಕ ದಿವಂಗತ ಬಿ.ಆರ್. ಮನು ಅವರ ಸ್ಮರಣಾರ್ಥ ಸಹೋದರ ಮಂಜು ನಾಥ್ ಅವರು ಪ್ರಾಯೋಜಿಸಿದ್ದ ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು. ಇದರೊಂದಿಗೆ ಆಟಿ ಮಾಸದ ವಿಶೇಷ ಖಾದ್ಯಗಳನ್ನು ಉಣಬಡಿಸಲಾಯಿತು. ತುಳುನಾಡಿನಲ್ಲಿ ಬಳಸಲ್ಪಡುತ್ತಿದ್ದ ವಿವಿಧ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.