ಗೋಣಿಕೊಪ್ಪಲು, ಆ. 14: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ದ.ಕೊಡಗಿನಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದÀ್ಯಮ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಾ.ರಾ.ಮಹೇಶ್‍ರವರು ಭೇಟಿ ನೀಡಿದರು.ಮೈಸೂರು ತಿತಿಮತಿ ಮಾರ್ಗವಾಗಿ ಆಗಮಿಸಿದ ಸಚಿವರನ್ನು ತಾಲೂಕು ಆಡಳಿತ ಪರವಾಗಿ ತಿತಿಮತಿ ಬಳಿ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಜಯಣ್ಣ ಹೂಗುಚ್ಚ ನೀಡಿ ಸ್ವಾಗತಿಸಿದರು.ತಿತಿಮತಿ ಮೈಸೂರು ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಸೇತುವೆಯನ್ನು ಪರಿಶೀಲಿಸಿದ ಸಚಿವರು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸೇತುವೆ ಗುಣಮಟ್ಟದ ಬಗ್ಗೆ ಚರ್ಚಿಸಿದರು. ನಂತರ ಕೋಣನಕಟ್ಟೆ ಮಾರ್ಗವಾಗಿ ಬಾಳೆಲೆ ಸಮೀಪದ ನಿಟ್ಟೂರು ಸೇತುವೆ ಬಳಿ ಆಗಮಿಸಿದ ಸಚಿವರು ನೀರಿನಿಂದ ಮುಳುಗಡೆಯಾಗಿರುವ ಸಾವಿರಾರು ಎಕರೆ ಭತ್ತದ ಭೂಮಿಯನ್ನು ವೀಕ್ಷಿಸಿದರು. ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯ ಮುಖಂಡರು ಜನಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರುಗಳು ನಿರಂತರ ಸುರಿಯುತ್ತಿರುವ ಮಳೆಯಿಂದ ದ. ಕೊಡಗಿನಲ್ಲಿ ಆಗಿರುವ ಹಾನಿಯ ಬಗ್ಗೆ ವಿವರಣೆ ನೀಡಿದರು.ಈ ಸಂದರ್ಭ ಸೇತುವೆ ಸಮೀಪವಿರುವ ರಸ್ತೆಯ ಎರಡು ಬದಿಗಳಿಗೆ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಳೆಲೆಯ ಅರಮಣಮಾಡ ರಂಜನ್ ಚಂಗಪ್ಪ ಸಚಿವರ ಗಮನ ಸೆಳೆದರು.(ಮೊದಲ ಪುಟದಿಂದ) ಸುದ್ದಿಗಾರರೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‍ರವರು, ಈಗಾಗಲೇ ವಿಪರೀತ ಮಳೆಯಿಂದ ಹಾನಿಗೊಳಗಾದ ರಸ್ತೆ, ರಾಜ್ಯ ಹೆದ್ದಾರಿ ಇನ್ನಿತರ ತೊಂದರೆಗೊಳಗಾದ ಪ್ರದೇಶಗಳ ಮಾಹಿತಿಯನ್ನು ಅಧಿಕಾರಿಗಳಿಂದ ಹಾಗೂ ಜಿಲ್ಲಾಡಳಿತದಿಂದ ಪಡೆದಿದ್ದೇನೆ. ಮುಖ್ಯಮಂತ್ರಿಗಳು ಮಳೆ ಪರಿಹಾರ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ. 20 ಕೋಟಿ ಹಣವು ಜಿಲ್ಲಾಡಳಿತದ ಖಾತೆಯಲ್ಲಿದೆ. ತಕ್ಷಣ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. ಹಣ ಖಾಲಿಯಾದ ತಕ್ಷಣ ಉಳಿದ ಹಣವನ್ನು ಜಿಲ್ಲಾಡಳಿತಕ್ಕೆ ನೀಡಲಾಗುವದು. ಯಾವದೇ ಹಣದ ಸಮಸ್ಯೆ ಇಲ್ಲ ಎಂದ ಅವರು, ಜಿಲ್ಲಾಡಳಿತದ ಸಭೆಯಲ್ಲಿ ಕಾಫಿ ಬೆಳೆಗೆ ಸಾಲ ಮನ್ನಾದ ವಿಚಾರದಲ್ಲಿ ರೈತರಿಗಿರುವ ಗೊಂದಲವನ್ನು ನಿವಾರಣೆ ಮಾಡಲಾಗುವದು; ಈ ಬಗ್ಗೆ ಕಾಫಿ ಮಂಡಳಿಯ ಅಧಿಕಾರಿಗಳೊಂದಿಗೆ ಮಾಹಿತಿ ಸಂಗ್ರಹಿಸುತ್ತೇನೆ ಎಂದರು.

ನಿಟ್ಟೂರು ಸೇತುವೆ ವೀಕ್ಷಿಸಿದ ಸಚಿವರು ನಂತರ ಕಾನೂರು ಭಾಗದ ಸೇತುವೆಯ ಪರಿಶೀಲನೆ ನಡೆಸಿದರು. ಕಾನೂರು ವಿಎಸ್‍ಎಸ್‍ಎನ್ ಬ್ಯಾಂಕ್‍ನ ಸಭಾಂಗಣದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಅರ್ಜಿಯನ್ನು ಸ್ವೀಕರಿಸಿದ ಸಚಿವರು ಗೋಣಿಕೊಪ್ಪ,ಅಮ್ಮತ್ತಿ,ಮೂರ್ನಾಡು ಮಾರ್ಗವಾಗಿ ಜಿಲ್ಲಾ ಕೇಂದ್ರ ಮಡಿಕೇರಿಯತ್ತ ಪ್ರಯಾಣ ಬೆಳೆಸಿದರು.ವಿಪರೀತವಾಗಿ ಸುರಿಯುತ್ತಿದ್ದ ಮಳೆಯ ನಡುವೆ ಸಚಿವರು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ್ದು ವಿಶೇಷವಾಗಿತ್ತು.

ಭೇಟಿಯ ಸಂದರ್ಭ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಪಕ್ಷದ ಮುಖಂಡರಾದ ಮನೆಯಪಂಡ ಬೆಳ್ಯಪ್ಪ, ಕಾರ್ಮಾಡು ಸುಬ್ಬಣ್ಣ, ಎಂ.ಟಿ. ಕಾರ್ಯಪ್ಪ, ಅಕ್ಬರ್, ಸಣ್ಣುವಂಡ ಚಂಗಪ್ಪ, ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಚಕ್ಕೇರ ಸೂರ್ಯ, ಪೊರಂಗಡ ಪವನ್ ಚಿಟ್ಟಿಯಪ್ಪ, ಮಾಚಂಗಡ ಸುಜಾ ಪೂಣಚ್ಚ, ವಾಟೇರಿರ ವಿಜು, ವಿನಿಲ್, ಕೊಳೇರ ದಯಾ ಚಂಗಪ್ಪ, ಕೊಕ್ಕೆಯಂಗಡ ರಂಜನ್, ಕೃಷ್ಣ, ಗಣಪತಿ ಮುಂತಾದವರು ಹಾಜರಿದ್ದರು.

ಡಿವೈಎಸ್ಪಿ ನಾಗಪ್ಪ, ವೃತ್ತ ನಿರೀಕ್ಷಕರಾದ ಪಿ.ಕೆ. ರಾಜು, ದಿವಾಕರ್, ಹಾಗೂ ಪೊಲೀಸ್ ಸಿಬ್ಬಂದಿ ಪೊಲೀಸ್ ಬಂದೋಬಸ್ತ್‍ನಲ್ಲಿ ಪಾಲ್ಗೊಂಡಿದ್ದರು.

-ಹೆಚ್.ಕೆ. ಜಗದೀಶ್