ಸೋಮವಾರಪೇಟೆ, ಆ. 14: ಕಳೆದ ನಾಲ್ಕೈದು ದಶಕಗಳ ಹಿಂದಿನ ದಿನಗಳನ್ನು ಕಣ್ಮುಂದೆ ತರುತ್ತಿರುವ ವರುಣನ ಆರ್ಭಟಕ್ಕೆ ಕೊನೆ ಇಲ್ಲದಂತಾಗಿದೆ. ದಿನದಿಂದ ದಿನಕ್ಕೆ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು, ಸೋಮವಾರಪೇಟೆ ವ್ಯಾಪ್ತಿಯಲ್ಲಿನ ಮೇಘ ಸ್ಫೋಟಕ್ಕೆ ಜನಜೀವನ ಅಕ್ಷರಶಃ ತತ್ತರಿಸಿದೆ. ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಈಗಾಗಲೇ 320 ಇಂಚು ಮಳೆ ದಾಖಲಾಗಿದ್ದು, ಜನರ ಪಾಡಂತೂ ಹೇಳತೀರದ್ದಾಗಿದೆ.ಭಾರೀ ಮಳೆಗೆ ಪ್ರಸಕ್ತ ಸಾಲಿನ ಕೃಷಿ ಫಸಲು ಸಂಪೂರ್ಣ ಕೈಚೆಲ್ಲಿದ್ದು, ಕೃಷಿಕ ವರ್ಗ ಭಾರೀ ನಷ್ಟ ಅನುಭವಿಸಲೇಬೇಕಿದೆ. ದಿನದಿಂದ ದಿನಕ್ಕೆ ವರುಣನ ಆರ್ಭಟ ಹೆಚ್ಚಾಗುತ್ತಿರುವದರಿಂದ ಜನಜೀವನದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ.

ತಾಲೂಕಿನ ಶಾಂತಳ್ಳಿ ಹೋಬಳಿ ಮಳೆಯ ಆರ್ಭಟಕ್ಕೆ ಹೆಚ್ಚಾಗಿ ತತ್ತರಿಸಿದ್ದು, ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಕೊತ್ನಳ್ಳಿ, ಕುಡಿಗಾಣಕ್ಕೆ ಈಗಾಗಲೇ ದಾಖಲೆಯ 320 ಇಂಚು ಮಳೆಯಾಗಿದೆ. ಕಳೆದ 2013ರಲ್ಲಿ ಒಟ್ಟಾರೆ 356 ಇಂಚು ಮಳೆಯಾಗಿ ದ್ದುದೇ ಈವರೆಗಿನ ದಾಖಲೆಯಾಗಿತ್ತು. ಪ್ರಸಕ್ತ ವರ್ಷ ಇಲ್ಲಿಯವರೆಗೆ 320 ಇಂಚು ಮಳೆಯಾಗಿದ್ದು, ಹೀಗೆ ಮುಂದುವರೆದರೆ 400 ಇಂಚು ಮಳೆಯಾಗುವ ಅಂದಾಜಿದೆ.

ಕೊತ್ನಳ್ಳಿ ಭಾಗದಲ್ಲಿ ಹರಿಯುವ ಕುಮಾರಧಾರ ನದಿ ತನ್ನ ಎಲ್ಲೆಯನ್ನು ಮೀರಿದೆ. ಹೊಳೆ ತುಂಬಿ ಹರಿಯುತ್ತಿರುವದರಿಂದ ಹೊಳೆಪಾತ್ರದ ಗದ್ದೆಗಳು ಮುಳುಗಿವೆ. ಈ ಮೊದಲು ನಾಟಿ ಮಾಡಿದ್ದ ಗದ್ದೆಗೆ ನೀರು ನುಗ್ಗಿ ಪೈರು ನಾಶವಾದ ಹಿನ್ನೆಲೆ ಮತ್ತೊಮ್ಮೆ ಉತ್ತು ನಾಟಿ ಮಾಡಲಾಗಿತ್ತು. ಈಗಲೂ ಹೊಳೆ ನೀರು ನುಗ್ಗಿರುವದರಿಂದ ಮತ್ತೊಮ್ಮೆ ನಾಟಿ ಮಾಡಲು ಅಸಾಧ್ಯ ಎಂದು ಗ್ರಾಮಸ್ಥ ರಾಜೇಶ್ ತಿಳಿಸಿದ್ದಾರೆ.

ಕುಡಿಗಾಣ, ಕೊತ್ನಳ್ಳಿ ಭಾಗದಲ್ಲಿ ಕಾಫಿ ಈಗಾಗಲೇ ಉದುರಿದೆ, ಕರಿಮೆಣಸಿಗೂ ಸೊರಗು ರೋಗ ಆವರಿಸಿದೆ. ಏಲಕ್ಕಿಯಂತೂ ಅತೀ ಶೀತಕ್ಕೆ ಹಾಳಾಗಿದೆ. ಭಾರೀ ಗಾಳಿಯಾಗುತ್ತಿರುವ ಹಿನ್ನೆಲೆ ಅಸಂಖ್ಯಾತ ಮರಗಳು ಉರುಳಿ ನಷ್ಟವಾಗಿದೆ. ಇದನ್ನು ಸುಧಾರಿಸಿಕೊಳ್ಳುವದು ಹೇಗೆ? ಎಂಬ ಪ್ರಶ್ನೆ ಮೂಡಿದೆ ಎಂದು ಗ್ರಾಮಸ್ಥ ಎಂ.ಟಿ. ದಿನೇಶ್ ಹೇಳಿದ್ದಾರೆ.

ಕುಡಿಗಾಣ ಗ್ರಾಮ ಸಂಪರ್ಕಿಸುವ ಪ್ರಮುಖ ರಸ್ತೆಗೆ ನಿರ್ಮಿಸಿರುವ ಸೇತುವೆಯ ಮೇಲೆ ಹೊಳೆ ನೀರು ಹರಿಯುತ್ತಿರುವದರಿಂದ ಕುಡಿಗಾಣ ಗ್ರಾಮ ಕಳೆದ 1 ವಾರದಿಂದ ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದೆ. ಇದರೊಂದಿಗೆ

(ಮೊದಲ ಪುಟದಿಂದ) ಕುಮಾರಧಾರ ನದಿ ತುಂಬಿ ಹರಿಯುತ್ತಿರುವದರಿಂದ ತಡ್ಡಿಕೊಪ್ಪ ಗ್ರಾಮ ಹೊರ ಪ್ರಪಂಚದಿಂದ ಬೇರ್ಪಟ್ಟು ದ್ವೀಪದಂತಾಗಿದೆ. ಕೊತ್ನಳ್ಳಿ ಗ್ರಾಮಕ್ಕೆ ಕಳೆದ 24 ಗಂಟೆಗಳಲ್ಲಿ 11 ಇಂಚು ಮಳೆ ಸುರಿದಿದೆ.

ಈ ಭಾಗದಲ್ಲಿ ನಿರ್ಮಿಸಿರುವ ರಸ್ತೆಗಳ ಸ್ಥಿತಿಯಂತೂ ದೇವರಿಗೇ ಪ್ರೀತಿ ಎಂಬಂತಿದೆ. ರಸ್ತೆಯ ನಿರ್ವಹಣೆ ಇಲ್ಲದೇ ಇರುವದರಿಂದ ಸಂಚಾರಕ್ಕೆ ಅಯೋಗ್ಯವಾಗಿದೆ. ಕಳೆದ ಕೆಲ ವರ್ಷಗಳವರೆಗೂ ಗ್ರಾಮಸ್ಥರೇ ವರ್ಷಕ್ಕೊಮ್ಮೆ ಶ್ರಮದಾನ ಮಾಡಿ ರಸ್ತೆ ಬದಿ ಕಾಡು ಕಡಿದು ಸ್ವಚ್ಚಗೊಳಿಸುತ್ತಿದ್ದರು. ಗ್ರಾಮಸ್ಥರು ಮಾಡುವ ಕೆಲಸಕ್ಕೆ ಕೆಲ ಗುತ್ತಿಗೆದಾರರು ಬಿಲ್ ಮಾಡಿಸಿಕೊಂಡ ನಂತರ ಗ್ರಾಮಸ್ಥರು ಶ್ರಮದಾನವನ್ನೇ ಬಿಟ್ಟಿದ್ದಾರೆ. ಪರಿಣಾಮ ರಸ್ತೆ ದುಸ್ಥಿತಿಗೆ ತಲುಪಿದೆ.

ಈ ಭಾಗದಲ್ಲಿ ಯುವ ಜನಾಂಗವೇ ಮರೆಯಾಗಿದೆ. ಅಂಗನವಾಡಿಯಲ್ಲಿ ಒಂದು ಮಗುವೂ ಇಲ್ಲ. ಸರ್ಕಾರಿ ಶಾಲೆಯಲ್ಲಿ 9 ವಿದ್ಯಾರ್ಥಿಗಳಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಶಾಲೆಗೆ ತೆರಳುವದೂ ಅಸಾಧ್ಯ ಎಂದು ಗ್ರಾಮದ ಪರಿಸ್ಥಿತಿಯನ್ನು ರಾಜೇಶ್ ಅವರು ಬಿಚ್ಚಿಟ್ಟಿದ್ದಾರೆ.

ಆಲೇಕಟ್ಟೆ ರಸ್ತೆಯ ಭಾನುಪ್ರಕಾಶ್ ಎಂಬವರ ವಾಸದ ಮನೆಯ ಹಿಂಭಾಗ ಬರೆ ಕುಸಿದು ಬಾವಿ ಮುಚ್ಚಿಹೋಗಿದೆ. ಮನೆಗೂ ಸಣ್ಣಪುಟ್ಟ ಹಾನಿಯಾಗಿದೆ. ಕೊಡ್ಲಿಪೇಟೆ ಹೋಬಳಿಯಾದ್ಯಂತ ಮಳೆ ಬಿರುಸುಗೊಂಡಿದ್ದು, ಅಮೀನ, ಖತೀಜ, ದೇವಮ್ಮ, ಇಬ್ರಾಹಿಂ, ಶನಿವಾರಸಂತೆಯ ನಿಂಗಪ್ಪ ಎಂಬವರುಗಳ ಮನೆಯ ಒಳಭಾಗದಲ್ಲಿ ಜಲದ ಸೆಲೆ ಮೂಡಿದೆ. ಪರಿಣಾಮ ಮನೆ ಅತೀ ಶೀತಕ್ಕೆ ಒಳಗಾಗಿದ್ದು, ಅಪಾಯಕಾರಿ ಸ್ಥಿತಿಗೆ ತಲುಪಿವೆ.

ಶಾಂತಳ್ಳಿ ಹೋಬಳಿಯ ಕೂತಿ ಗ್ರಾಮದ ಪುಷ್ಪಲತ ಎಂಬವರ ವಾಸದ ಮನೆಯ ಗೋಡೆ ಕುಸಿದಿದೆ. ಗಣೇಶ್ ಸುಬ್ಬಯ್ಯ ಅವರ ದನದ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಕೊಡಗರಹಳ್ಳಿಯ ಸುವರ್ಣ ಎಂಬವರ ಮನೆ ಮೇಲೆ ಮರ ಬಿದ್ದು, ಸುವರ್ಣ ಅವರ ಎಡಕಾಲು, ತಲೆಗೆ ಪೆಟ್ಟಾಗಿದೆ. 7ನೇ ಹೊಸಕೋಟೆಯ ಅಬ್ದುಲ್ ಮಜೀದ್ ಅವರಿಗೆ ಸೇರಿದ ಮನೆಯ ಮೇಲೆ ಮರ ಉರುಳಿದೆ. ಗದೆಹಳ್ಳದ ತೀಸಮ್ಮ, ಗರಗಂದೂರಿನ ಗಿರೀಶ್, ಮುಸ್ತಫ, ಬೇಬಿ ಅವರುಗಳ ವಾಸದ ಮನೆಗೆ ಹಾನಿಯಾಗಿದೆ.

ಇದರೊಂದಿಗೆ ಹರಗ ಗ್ರಾಮದ ಶಿವಶಂಕರ್ ಎಂಬವರ ವಾಸದ ಮನೆ ಸಂಪೂರ್ಣ ಜಖಂಗೊಂಡಿದೆ. ಶಾಂತಳ್ಳಿಯ ಬಸವರಾಜು ಎಂಬವರಿಗೆ ಸೇರಿದ ಜಾನುವಾರು ಅತೀ ಶೀತಕ್ಕೆ ಮೃತಪಟ್ಟಿದೆ. ಕುಸುಬೂರು ಗ್ರಾಮದ ದೊಡ್ಡಸಿದ್ದಮ್ಮ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಬಜೆಗುಂಡಿ ಗ್ರಾಮದ ನರಸಿ ತಮ್ಮಯ್ಯ ಅವರ ಮನೆಗೆ ಬರೆ ಕುಸಿದಿದ್ದು, ಅದೃಷ್ಟವಶಾತ್ ಪ್ರಾಣ ಹಾನಿ ತಪ್ಪಿದೆ. ದೊಡ್ಡಕೊಡ್ಲಿ ಗ್ರಾಮದ ಗಫರ್, ಸುಶೀಲಮ್ಮ, ತ್ಯಾಗರಾಜ ಕಾಲೋನಿಯ ಸತೀಶ್ ಎಂಬವರುಗಳ ಮನೆಗಳು ಭಾರೀ ಗಾಳಿ ಮಳೆಗೆ ಜಖಂಗೊಂಡಿದೆ.

ಬಜೆಗುಂಡಿ ಗ್ರಾಮದ ಕಮಲಾಕ್ಷಿ ಅವರ ಮನೆಯ ಮುಂಭಾಗ ಮತ್ತು ಶಂಕರ ಅವರ ಮನೆಯ ಹಿಂಭಾಗ ಬರೆ ಕುಸಿತ ಉಂಟಾಗಿದೆ. ವಿದ್ಯುತ್ ಕಂಬ ಉರುಳಿ ಬಿದ್ದಿದ್ದು, ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಗ್ರಾ.ಪಂ. ಸದಸ್ಯ ಕೆ.ಎ. ಯಾಕೂಬ್ ತಿಳಿಸಿದ್ದಾರೆ.

ಇಂದು ಮುಂಜಾನೆ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಐಗೂರಿನಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರು, ಅರಣ್ಯ ಇಲಾಖೆ ಮತ್ತು ಟಾ ಟಾ ಕಾಫಿ ಸಂಸ್ಥೆಯ ಕಾರ್ಮಿಕರು ಸೇರಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹರಗ ಗ್ರಾಮದ ಜೆ.ಎನ್. ಶಿವಶೇಖರ್ ಮನೆ ಭಾಗಶಃ ನಾಶವಾಗಿದೆ. ಮನೆಯ ಛಾವಣಿ, ಗೋಡೆ ಹಾನಿಯಾಗಿದೆ. ಹರಗ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ 6ರಿಂದ ಇಂದು ಬೆಳಗ್ಗೆ 6ರವರೆಗೆ 7 ಇಂಚು ಮಳೆಯಾಗಿದೆ. ಹೆಚ್.ವಿ. ಕಾಳಪ್ಪ, ಹೆಚ್.ಟಿ. ಕಾರ್ಯಪ್ಪ, ಓ.ಎಸ್. ಶಿವಯ್ಯ, ಓ.ಎನ್. ನೇತ್ರಾವತಿ, ಹೆಚ್.ಎಸ್. ಸೋಮಯ್ಯ ಅವರುಗಳಿಗೆ ಸೇರಿದ ಗದ್ದೆಗೆ ನೀರು ನುಗ್ಗಿದ್ದು, ನಾಟಿ ಮಾಡಿದ್ದ ಪೈರು ಸಂಪೂರ್ಣ ನಾಶವಾಗಿದೆ. ಇದರೊಂದಿಗೆ ಕಾಫಿ ಸೇರಿದಂತೆ ಇತರ ಕೃಷಿ ನಷ್ಟವಾಗಿದ್ದು, ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕೆಂದು ಗ್ರಾ.ಪಂ. ಸದಸ್ಯ ತ್ರಿಶೂಲ್ ಆಗ್ರಹಿಸಿದ್ದಾರೆ.

ತುಂಬಿ ಹರಿಯುತ್ತಿರುವ ಕೆರೆಗಳು: ಭಾರೀ ಮಳೆಗೆ ಸೋಮವಾರಪೇಟೆ ಭಾಗದ ಕೆರೆಗಳು ತುಂಬಿ ಹರಿಯುತ್ತಿದೆ. ಪಟ್ಟಣದ ಆನೆಕೆರೆ ಕಳೆದ 27 ವರ್ಷಗಳ ನಂತರ ತುಂಬಿದ್ದು, ಕೋಡಿ ಹರಿಯುತ್ತಿದೆ. ಕೆರೆಯ ಮೇಲ್ಭಾಗದಲ್ಲಿ ಬರೆ ಕುಸಿತವೂ ಸಂಭವಿಸುತ್ತಿದೆ. ಕಳೆದ 27 ವರ್ಷಗಳ ನಂತರ ಪ್ರಸಕ್ತ ವರ್ಷ ಹರಪಳ್ಳಿ ರವೀಂದ್ರ ಅವರು ಹೂಳು ತೆಗೆಸಿದ್ದು, ಆನೆಕೆರೆ ತನ್ನ ಗತವೈಭವಕ್ಕೆ ಮರಳಿದೆ.

ಇದರೊಂದಿಗೆ ಯಡೂರು ದೇವರ ಕೆರೆ ತುಂಬಿದ್ದು, ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಮೇಲೆ ನೀರು ಹರಿಯುತ್ತಿದೆ. ಚೌಡ್ಲು ಕೆರೆಯಲ್ಲೂ ನೀರು ಭರ್ತಿಯಾಗಿದೆ. ಇದರೊಂದಿಗೆ ಲಕ್ಷ್ಮೀ ಕೆರೆ ಸೇರಿದಂತೆ ಖಾಸಗಿ ಕೆರೆಗಳೂ ತುಂಬಿವೆ.

ಮಾದಾಪುರ-ಮಡಿಕೇರಿ ಮುಖ್ಯರಸ್ತೆಯ ಮಾದಾಪುರದಲ್ಲಿ ಬರೆ ಕುಸಿತ ಸಂಭವಿಸಿ ರಸ್ತೆ ಸಂಚಾರಕ್ಕೆ ಸಂಪೂರ್ಣ ತಡೆಯಾಗಿತ್ತು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್, ಅಭಿಯಂತರ ಪೀಟರ್ ಸೇರಿದಂತೆ ಗ್ರಾ.ಪಂ. ಸದಸ್ಯ ಮಜೀದ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇದರೊಂದಿಗೆ ಮಾದಾಪುರ-ನಂದಿಮೊಟ್ಟೆ ರಸ್ತೆಯಲ್ಲಿ ಭೂ ಕುಸಿತ ಸಂಭವಿಸಿದ್ದು, ಮಳೆ ಹೀಗೇ ಮುಂದುವರೆದರೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುದ್ದುಗಲ್ಲು ಗ್ರಾಮದ ಜನಾರ್ಧನ್, ಬರ್ನಾಡ್ ಅವರುಗಳ ಮನೆಗೆ ದುದ್ದುಗಲ್ಲು ಹೊಳೆ ನೀರು ನುಗ್ಗಿದ್ದು, ಅಪಾಯದ ಅಂಚಿನಲ್ಲಿದೆ. ಪ.ಪಂ. ನವರು ಕುಡಿಯುವ ನೀರಿನ ಘಟಕಕ್ಕೆ ಚೆಕ್‍ಡ್ಯಾಂ ನಿರ್ಮಿಸಿರುವ ಹಿನ್ನೆಲೆ ನೀರಿನ ಸಂಗ್ರಹ ಅಧಿಕವಾಗಿ ಮನೆಗಳಿಗೆ ನೀರು ನುಗ್ಗಿದೆ ಎಂದು ಮನೆ ಮಾಲೀಕರು ಆರೋಪಿಸಿದ್ದಾರೆ. ಹಾನಗಲ್ಲು ಫ್ರಾನ್ಸಿಸ್ ಅವರಿಗೆ ಸೇರಿದ ತೋಟದ ಬರೆ ಕುಸಿದಿದ್ದು, ಮನೆಗೂ ಅಪಾಯವಾಗುವ ಸಂಭವವಿದೆ.

ಒಟ್ಟಿನಲ್ಲಿ ವರುಣನ ಆರ್ಭಟಕ್ಕೆ ಸೋಮವಾರಪೇಟೆ ತತ್ತರಿಸಿದೆ. ಭಾರೀ ಪ್ರಮಾಣದ ಹಾನಿಗಳು ಸಂಭವಿಸುತ್ತಿದ್ದು, ಅತೀ ಶೀತಕ್ಕೆ ಶಾಂತಳ್ಳಿ ಹೋಬಳಿಯಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿವೆ. ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ.

- ವಿಜಯ್ ಹಾನಗಲ್