ಕೂಡಿಗೆ : ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿಯ ನೀರಿನ ಮಟ್ಟ ಹೆಚ್ಚಾಗಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಕಾವೇರಿ ಮತ್ತು ಹಾರಂಗಿ ನದಿ ಸಂಗಮ ಸ್ಥಳ ಕೂಡಿಗೆಯಿಂದ ಮುಂದೆ ಹರಿಯುವ ಕಾವೇರಿ ನದಿಗೆ ಕಣಿವೆ ಹತ್ತಿರ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯ ಮಧ್ಯಭಾಗಕ್ಕೂ ಹಾಗೂ ಹರಿಯುತ್ತಿರುವ ನೀರಿಗೂ ಕೇವಲ 2 ಅಡಿ ಅಂತರವಿದೆ. ಎರಡೂ ನದಿಗಳ ನೀರಿನ ಹೆಚ್ಚಳದಿಂದಾಗಿ ಕಣಿವೆಯ ತೂಗು ಸೇತುವೆಯ ಮೆಟ್ಟಿಲುಗಳು ಹಾಗೂ ಕಾವೇರಿ ನದಿ ದಡದಲ್ಲಿರುವ ದೇವಾಲಯದ ಎದುರಿನಲ್ಲಿರುವ 46 ಮೆಟ್ಟಿಲುಗಳು ನೀರಿಂದಾವೃತವಾಗಿದೆ. ಕೊಡಗು ಮತ್ತು ಪಿರಿಯಾಪಟ್ಟಣ ತಾಲೂಕಿನ 15 ಗ್ರಾಮಗಳಿಗೆ ತೆರಳಲು ಹತ್ತಿರವಾಗಿದ್ದ ಈ ತೂಗು ಸೇತುವೆಯು ಮುಳುಗುವ ಹಂತ ತಲಪಿರುವದರಿಂದ ಸಾರ್ವಜನಿಕರು ಸೇತುವೆ ಮೇಲೆ ತಿರುಗಾಡದಂತೆ ನೀರಾವರಿ ಇಲಾಖೆಯವರು ನಿರ್ಬಂಧ ಹೇರಿದ್ದು, ತೂಗು ಸೇತುವೆಯ ಮೇಲೆ ಸಾರ್ವಜನಿಕರು ಹೋಗದಂತೆ ತಡೆಯಲು ಸಾರ್ವಜನಿಕರ ಹಿತದೃಷ್ಟಿಯಿಂದ ಪೆÇೀಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ.

ಕಾವೇರಿ ನದಿಯ ನೀರಿನ ಮಟ್ಟ ಹೆಚ್ಚಾಗಿರುವದರಿಂದ ತಗ್ಗು ಪ್ರದೇಶಗಳಾದ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆಯ ಕೆಲವು ಭಾಗದ ನಾಟಿ ಮಾಡಿದ ಇಪ್ಪತ್ತೈದು ಎಕರೆಗೂ ಹೆಚ್ಚು ಪ್ರದೇಶವು ನೀರಿನಿಂದ ಜಲಾವೃತಗೊಂಡಿದೆ. ಇಂದು ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥಗೊಂಡಿದೆ. ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದಲೂ ನಿರಂತರವಾಗಿ ಎಡೆಬಿಡದೇ ಮಳೆ ಸುರಿಯುತ್ತಿದೆ. - ನಾಗರಾಜಶೆಟ್ಟಿ

ಕುಶಾಲನಗರ: ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ತೀರದಲ್ಲಿರುವ ಪಟ್ಟಣದ ಬಡಾವಣೆಗಳ ಮನೆಯೊಳಗೆ ನೀರು ಆವರಿಸಿದ ಹಿನ್ನೆಲೆಯಲ್ಲಿ ಕೆಲವು ಮನೆಯಿಂದ ನಿವಾಸಿಗಳು ಸ್ವತಃ ಮನೆ ಖಾಲಿ ಮಾಡಿ ತೆರಳಿದ್ದಾರೆ. ಪಟ್ಟಣದ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳಿಗೆ ನೀರು ನುಗ್ಗಿದ್ದು ಸುಮಾರು 15 ಕ್ಕೂ ಅಧಿಕ ಮನೆಗಳಿಂದ ನಿವಾಸಿಗಳು ಖಾಲಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಸಾಯಿ ಲೇಔಟ್‍ನಲ್ಲಿ ನಿರ್ಮಾಣ ಹಂತದಲ್ಲಿರುವ ಸಾಯಿ ದೇವಾಲಯದ ಸುತ್ತಲೂ ಕಾವೇರಿ ನೀರು ಆವರಿಸಿದೆ. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಒಳಚರಂಡಿ ಯೋಜನೆಯ ವೆಟ್‍ವೆಲ್ ಸೇರಿದಂತೆ ಬಹುತೇಕ ಕಾಮಗಾರಿ ನೀರಿನಲ್ಲಿ ಮುಳುಗಿ ಹೋಗಿದ್ದು ಪೈಪ್ ಮೂಲಕ ಹರಿದು ಬರುತ್ತಿರುವ ಕಲುಷಿತ ತ್ಯಾಜ್ಯ ನದಿಗೆ ಹರಿಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಕುಶಾಲನಗರ ಕನ್ನಡ ಭಾರತಿ ಕಾಲೇಜು ಮತ್ತು ತಗ್ಗು ಪ್ರದೇಶದ ಬಡಾವಣೆಗಳ ಮನೆಗಳ ಸುತ್ತ ಕಾವೇರಿ ನೀರು ತುಂಬಿದ್ದು ಈ ವ್ಯಾಪ್ತಿಯ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಅಯ್ಯಪ್ಪಸ್ವಾಮಿ ದೇವಾಲಯ ಆವರಣ ಗೋಡೆ ತನಕ ಕಾವೇರಿ ತುಂಬಿ ಹರಿಯುತ್ತಿದೆ.

ನದಿಯಲ್ಲಿ ಅಂದಾಜು 30 ಅಡಿಗಿಂತಲೂ ಎತ್ತರದಲ್ಲಿ ನೀರು ಹರಿಯುತ್ತಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕಾವೇರಿ ನದಿಯ ಹಿನ್ನೀರು ಹೊಲ ಗದ್ದೆಗಳಿಗೆ ನುಗ್ಗಿದ್ದು ಬಹುತೇಕ ಕೃಷಿ ಚಟುವಟಿಕೆಗಳು ನೀರಿನಿಂದ ಆವೃತಗೊಂಡ ದೃಶ್ಯ ಕಂಡುಬಂದಿದೆ. ನದಿ ನೀರು ಏರಿಕೆ ಹಿನ್ನೆಲೆಯಲ್ಲಿ ಕುಶಾಲನಗರ ಸಮೀಪದ ಆವರ್ತಿ, ಟಿಬೇಟಿಯನ್ ನಿರಾಶ್ರಿತ ಕೇಂದ್ರಗಳಿಗೆ ತೆರಳುವ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.

ಕುಶಾಲನಗರದಲ್ಲಿ ಸಂತೆ ದಿನವಾದ ಕಾರಣ ನಿರಂತರ ಮಳೆಯಿಂದ ವ್ಯಾಪಾರಿಗಳು ಮತ್ತು ಗ್ರಾಹಕರು ಕೆಸರಿನ ನಡುವೆ ವ್ಯಾಪಾರ ವಹಿವಾಟು ಮಾಡುತ್ತಿದ್ದ ದೃಶ್ಯ ಕಂಡುಬಂತು.

ಅಪಾಯದ ಮುನ್ನೆಚ್ಚರಿಕೆ ಕ್ರಮಕ್ಕೆ ಸಿಬ್ಬಂದಿಗಳು ಕ್ರಮಕೈಗೊಂಡಿದ್ದು ಪ್ರವಾಹದಿಂದ ತೊಂದರೆಗೆ ಈಡಾಗುವ ಜನತೆಯನ್ನು ಸ್ಥಳಾಂತರಿಸಲಾಗುವದು ಎಂದು ನಾಡಕಚೇರಿ ಕಂದಾಯಾಧಿಕಾರಿ ಮಧು ತಿಳಿಸಿದ್ದಾರೆ. - ಸಿಂಚು

ಮೂರ್ನಾಡು : ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತ - ಉರುಳಿದ ಬಂಡೆ ಕಲ್ಲು

ಮೂರ್ನಾಡು : ನಿರಂತರ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮೂರ್ನಾಡು ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮಳೆಯ ಆರ್ಭಟಕ್ಕೆ ಮೂರ್ನಾಡು-ಬಲಮುರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೋಡಂಬೂರಿನ ಹೊಳೆತೋಡುವಿನಲ್ಲಿ ತೋಡಿನ ನೀರು ಹಾಗೂ ಅಸುಪಾಸಿನ ಗದ್ದೆಯ ನೀರು ರಸ್ತೆ ಮೇಲೆ ಹರಿಯುತ್ತಿರುವದರಿಂದ ಈ ಮಾರ್ಗದಲ್ಲಿ ರಸ್ತೆ ಸಂಚಾರ ಮಂಗಳವಾರ ಬೆಳಿಗ್ಗೆಯಿಂದ ಸ್ಥಗಿತಗೊಂಡಿದೆ. ವಾಹನಗಳು ಹೊದ್ದೂರು ವಾಟೆಕಾಡು ಮಾರ್ಗವಾಗಿ ಬಲಮುರಿ, ಪಾರಾಣೆ ಸಂಚರಿಸುತ್ತಿದೆ.

ಬಲಮುರಿಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಕಿರುಸೇತುವೆ ಮೇಲ್ಬಾಗದಲ್ಲಿ ಇಪ್ಪತ್ತು ಅಡಿಗಳಷ್ಟು ನೀರು ಹರಿಯುತ್ತಿದೆ. ಬೇತ್ರಿ ಹಾಗೂ ಮುತ್ತಾರುಮುಡಿ ಕಿರುಹೊಳೆಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಸಣ್ಣಪುಟ್ಟ ತೋಡುಗಳು ತುಂಬಿ ಹರಿಯುತ್ತಿದ್ದು ಗದ್ದೆಗಳು ನೀರಿನ ಮಡುವಾಗಿದೆ.

ಮೂರ್ನಾಡು-ನಾಪೋಕ್ಲು ರಸ್ತೆಯಲ್ಲಿ ಬೊಳಿಬಾಣೆ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂರ್ಪಕ ಸ್ಥಗಿತಗೊಂಡಿದೆ. ನಾಪೋಕ್ಲು ಸಾಗುವ ವಾಹನಗಳು ಕುಂಬಳದಾಳು ಮಾರ್ಗವಾಗಿ ನಾಪೋಕ್ಲು ಸಂಚರಿಸುವಂತಾಗಿದೆ. ಮಳೆಯ ಆರ್ಭಟಕ್ಕೆ ಕೂಲಿಕಾರ್ಮಿಕರು ಕೆಲಸಗಳಿಗೆ ತೆರಳಲಾಗದೆ ಮನೆಯಲ್ಲಿ ಕೂರುವಂತಾಗಿದೆ. ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತಗೊಂಡು ಜನರು ಪರದಾಡುವಂತಾಗಿದೆ.

* ಬೃಹತ್ ಗಾತ್ರದ ಬಂಡೆ ಕಲ್ಲು ಉರುಳಿ ಬಿದ್ದು ಮನೆ ಸಂಪೂರ್ಣ ಹಾನಿಗೊಂಡ ಘಟನೆ ಸೋಮವಾರ ನಡು ರಾತ್ರಿ ಹೊದ್ದೂರು ಗ್ರಾಮದಲ್ಲಿ ನಡೆದಿದೆ.

ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯಪ್ಪ ಕಾಲೋನಿ ನಿವಾಸಿ ಬಿ.ಎಸ್. ಶಿವಪ್ಪ ಅವರ ಮನೆಗೆ ಬೃಹತ್ ಗಾತ್ರದ ಬಂಡೆ ಕಲ್ಲು ಉರುಳಿ ಬಿದ್ದು ಮನೆ ಸಂಪೂರ್ಣ ಹಾನಿಗೊಳಗಾಗಿದೆ. ಸೋಮವಾರ ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಬರೆಯ ಮೇಲ್ಬಾಗದಲ್ಲಿ ಇದ್ದ ಬಂಡೆ ಕಲ್ಲು ಮಣ್ಣು ಸಮೇತ ಜಾರಿ ಬಂದು ಮನೆಗೆ ಅಪ್ಪಳಿಸಿದೆ. ಸುಮಾರು 200 ಅಡಿಗಳ ಮೇಲ್ಬಾಗದಲ್ಲಿ ಇದ್ದ ಬಂಡೆ ಜಾರಿದ ಪರಿಣಾಮ ಮನೆಯ ಅಡುಗೆ ಕೋಣೆ, ಶೌಚಾಲಯ, ಕೊಟ್ಟಿಗೆ ಹಾಗೂ ಕೊಠಡಿಗಳು ಸಂಪೂರ್ಣ ಹಾನಿಗೊಂಡಿದ್ದು ಮನೆಯ ಹಂಚು ಹಾಗೂ ಸಿಮೆಂಟ್ ಸೀಟ್‍ಗಳು ಜಖಂಗೊಂಡಿದೆ. ರಾತ್ರಿ ಮನೆಯಲ್ಲಿ ಮಲಗಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 5 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಗ್ರಾಮಲೆಕ್ಕಿಗ ಸಂತೋಷ್ ಪಾಟೀಲ್ ಆಗಮಿಸಿ ಪರಿಶೀಲನೆ ನಡೆಸಿದರು. - ಟಿ.ಸಿ.ಎನ್.

ಮನೆಗಳಿಗೆ ಹಾನಿ

*ಸಿದ್ದಾಪುರ : ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲದ ಗ್ರಾಮದ ಪೈಸಾರಿ ನಿವಾಸಿ, ಶೀಲಾ ಎಂಬವರಿಗೆ ಸೇರಿದ ಮನೆ ಮೇಲೆ ಮರ ಬಿದ್ದು, ಹೆಂಚುಗಳು ನಾಶವಾಗಿದೆ. ಅಲ್ಲಿನ ನಿವಾಸಿ ಜಾನಕಿ ಎಂಬವರ ಮನೆಯ ಗೋಡೆ ಭಾರೀ ಮಳೆ - ಗಾಳಿಗೆ ಕುಸಿದು ಬಿದ್ದಿದೆ.

ನಾಟಿ ಗದ್ದೆ ಮುಳುಗಡೆ

ಶ್ರೀಮಂಗಲ: ಶ್ರೀಮಂಗಲ ಹೋಬಳಿ, ಕುರ್ಚಿ, ಬೀರುಗ, ನೆಮ್ಮಲೆ, ತೆರಾಲು, ಬಿರುನಾಣಿ, ಪೂಕಳ ವಿಭಾಗದಲ್ಲಿ ಸುರಿದ 13 ರಿಂದ 18 ಇಂಚು ಮಳೆಗೆ ಮರ ಬಿದ್ದು ಕಾಯಿಮಾನಿ ಕುಟ್ಟ ರಸ್ತೆ ಸಂಚಾರಕ್ಕೆ ತಡೆ ಉಂಟಾಗಿದೆ. ಸರಾಸರಿ 5 ದಿನ ನಾಟಿಗದ್ದೆಯಲ್ಲಿ ನೀರು ನಿಂತ ಪರಿಣಾಮ ನೆಟ್ಟ ನಾಟಿಗಳು ಕೊಳೆತು ಹೋಗಿರುತ್ತದೆ. ಅಡಿಕೆ, ಕಾಫಿ ಮತ್ತು ಕರಿಮೆಣಸು ಉದುರಿ ನೆಲಕಚ್ಚಿರುತ್ತದೆ. ಇದೇ ರೀತಿ ಮಳೆ ಗಾಳಿ ಮುಂದುವರೆದರೆ ಮತ್ತಷ್ಟು ಬೆಳೆ ನಷ್ಟವಾಗುವದಲ್ಲದೆ ವಾಸಿಸುವ ಮನೆಗಳು ಸಹ ಜಲಾವೃತಗೊಂಡು ಬೀಳುವ ಪರಿಸ್ಥಿತಿ ತಲೆದೋರಿದೆ. -ಅಜ್ಜಮಾಡ ಕುಶಾಲಪ್ಪ