ವೀರಾಜಪೇಟೆ: ವೀರಾಜಪೇಟೆ ವಿಭಾಗದಲ್ಲಿ ಎರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಭಾರೀ ಮಳೆಗೆ ಇಲ್ಲಿನ ಅರಸುನಗರದ ಪೊನ್ನಪ್ಪ ಎಂಬವರ ಮನೆಯ ತಡೆಗೋಡೆ ಕುಸಿದು ರಸ್ತೆ ಸಂಚಾರ ಬಂದ್ ಆಗಿದೆ. ಮಲೆತಿರಿಕೆ ಬೆಟ್ಟದ ಅಯ್ಯಪ್ಪ ದೇವಾಲಯದ ಬಳಿ ಪ್ರಭಾವತಿ, ಪಾರ್ವತಿ ಎಂಬವರ ಮನೆ ಭಾಗಶಃ ಕುಸಿದಿದ್ದು ಪಕ್ಕದ ಉಷಾ ಎಂಬವರ ಮನೆಯ ಎಲ್ಲ ಗೋಡೆಗಳು ಬಿರುಕುಗೊಂಡಿದ್ದು ಕುಸಿಯುವ ಹಂತದಲ್ಲಿದೆ ಎಂದು ಇಲ್ಲಿನ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎನ್.ಪಿ.ಹೇಮ್ ಕುಮಾರ್ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ವಿ.ಬಾಡಗದ ಗಣೇಶ್ ಎಂಬವರ ಮನೆ ಭಾಗಶಃ ಕುಸಿದಿದೆ. ಪೊನ್ನಂಪೇಟೆ ಬಳಿಯ ಕಿರುಗೂರು ಗ್ರಾಮದ ಎಂ.ಎಸ್.ಗೌರಮ್ಮ, ಹಾಗೂ ಪಿ.ಯು.ಸುಮಾ ಎಂಬವರ ಮನೆ ಗೋಡೆಗಳು ಕುಸಿದು ಹಾನಿ ಸಂಭವಿಸಿರುವದಾಗಿ ರೆವಿನ್ಯೂ ಸಿಬ್ಬಂದಿಗಳು ತಾಲೂಕು ಕಚೇರಿಗೆ ದೂರು ಸಲ್ಲಿಸಿದ್ದಾರೆ.
ಬೇತ್ರಿ ಗ್ರಾಮದ ಕಾವೇರಿ ಹೊಳೆ ಭರ್ತಿಯಾಗಲು ಎರಡು ಅಡಿಗಳಷ್ಟು ಬಾಕಿ ಇದ್ದು ನಿರಂತರ ಮಳೆ ಮುಂದುವರೆದರೆ ಬೇತ್ರಿ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಪರ್ಕ ಬಂದ್ ಆಗುವ ಸಾಧ್ಯತೆ ಇದೆ ಎಂದು ಈ ವಿಭಾಗದ ರೆವಿನ್ಯೂ ಇನ್ಸ್‍ಪೆಕ್ಟರ್ ತಾಲೂಕು ಕಚೇರಿಗೆ ವರದಿ ಮಾಡಿದ್ದಾರೆ.
ಬೇತ್ರಿ ಗ್ರಾಮದ ಕಾವೇರಿ ಹೊಳೆಯ ನೀರು ಸೇತುವೆ ಮೇಲೆ ಹರಿದು ರಸ್ತೆ ಸಂಪರ್ಕ ಕಡಿತಗೊಳ್ಳುವ ಸಂಭವವಿರುವದರಿಂದ ಮುಂಜಾಗ್ರತಾ ಕ್ರಮವಾಗಿ ಮೈಸೂರಿನಿಂದ ಮೋಟಾರ್ ಬೋಟನ್ನು ತರಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜು ತಿಳಿಸಿದ್ದಾರೆ.
ಕುಟುಂಬಗಳ ಸ್ಥಳಾಂತರಕ್ಕೆ ಆದೇಶ
ಸಿದ್ದಾಪುರ ಬಳಿಯ ಕರಡಿಗೋಡು ಗ್ರಾಮದಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾವೇರಿ ಹೊಳೆಯ ನೀರಿನ ಪ್ರಮಾಣ ಏರಿಕೆಯಾಗಿದ್ದು ಮಳೆ ಮುಂದುವರೆದರೆ ಪ್ರವಾಹ ಬರುವ ಭೀತಿಯಿಂದಾಗಿ ಎಲ್ಲ ಕುಟುಂಬಗಳನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಆದೇಶಿಸಿದ್ದಾರೆ. ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಗಿನಿಂದಲೇ ಗಂಜಿ ಕೇಂದ್ರವನ್ನು ಆರಂಭಿಸಲಾಗಿದೆ. ಕಾಕೋಟುಪರಂಬು ಬಳಿಯ ನಾಲ್ಕೇರಿ ಹೆಮ್ಮಾಡು ಗ್ರಾಮ ಪೂರ್ಣವಾಗಿ ಜಲಾವೃತ್ತಗೊಂಡಿದ್ದು ದ್ವೀಪದಂತಾಗಿದೆ.
ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದು ಬೆಳಗಿನ ತನಕ ಒಟ್ಟು 3,55 ಇಂಚುಗಳಷ್ಟು ಮಳೆ ಸುರಿದಿದೆ. ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟಕ್ಕೆ ಇಂದಿನವರೆಗೆ ಒಟ್ಟು 196 ಇಂಚುಗಳಷ್ಟು ಮಳೆ ಸುರಿದಿದೆ. ಮುಂಡ್ರೋಟ್ ಅರಣ್ಯ ವಿಭಾಗಕ್ಕೆ ಇಲ್ಲಿಯ ತನಕ ಒಟ್ಟು 198 ಇಂಚುಗಳಷ್ಟು ಮಳೆ ಸುರಿದಿದೆ.
ಕಕ್ಕಟ್ಟ್ ನದಿಗೆ ಕೆಕೆಆರ್ ಬಳಿ ಹಳೆ ಸೇತುವೆ ಮಟ್ಟಕ್ಕೆ ಹರಿಯುತ್ತಿರುವದು ಹುದಿಕೇರಿ ಬಿರುನಾಣಿ ನೂತನ ಸೇತುವೆ ಬಳಿ ಹೈಸೊಡ್ಲೂರು ಗ್ರಾಮದಲ್ಲಿ ರಸ್ತೆಗೆ ಭೂಕುಸಿತಶ್ರೀಮಂಗಲ: ದ.ಕೊಡಗಿನ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಜೀವನ ತತ್ತರಿಸಿದ್ದು, ಜಾನುವಾರುಗಳು ಸಹ ಮೇಯಲು ಕೊಟ್ಟಿಗೆಯಿಂದ ಹೊರಗೆ ತರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸೋಮವಾರ ರಾತ್ರಿ ಹಾಗೂ ಮಂಗಳವಾರ ದಿನ ಪೂರ್ತಿ ಮಳೆ ನಿರಂತರವಾಗಿ ಸುರಿಯುತ್ತಿದೆ. 24 ಗಂಟೆ ಅವಧಿಯಲ್ಲಿ ಬಿರುನಾಣಿ ವ್ಯಾಪ್ತಿಗೆ 12 ಇಂಚಿಗೂ ಅಧಿಕ ಮಳೆಯಾಗಿದೆ. ಶ್ರೀಮಂಗಲ ವ್ಯಾಪ್ತಿಗೆ 8 ಇಂಚು ಮಳೆಯಾಗಿದೆ.
ಬಿರುನಾಣಿ ಪರಕಟಗೇರಿ ಸೇತುವೆ ಬಳಿ ಎರಡು ಕಡೆಯ ಗುಡ್ಡದಿಂದ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತವಾಗಿದೆ. ಇದರಿಂದ ಯಾವದೇ ಪರ್ಯಾಯ ರಸ್ತೆ ಇಲ್ಲದೆ ಇಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತೆರಾಲು ಗ್ರಾಮದಲ್ಲಿ ತಾ.ಪಂ ಮಾಜಿ ಸದಸ್ಯ ಬೊಳ್ಳೇರ ಅಪ್ಪುಟ ಪೊನ್ನಪ್ಪ ಅವರ ಲೈನ್ ಮನೆ ಕುಸಿತವಾಗಿದೆ. ಲೈನ್ ಮನೆಯ ಇನ್ನೊಂದು ಭಾಗದಲ್ಲಿ ಕಾರ್ಮಿಕರು ವಾಸವಿದ್ದ ಕಾರಣ, ಜನರಿಗೆ ತೊಂದರೆಯಾಗುವ ಸಂದರ್ಭ ತಪ್ಪಿದೆ.
ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ನ್‍ಟ್‍ಕುಂದ್‍ನಲ್ಲಿ ಮತ್ತೇ ಸೇತುವೆ ಮತ್ತು ತೂಗು ಸೇತುವೆ ನೀರಿನಲ್ಲಿ ಮುಳುಗಿದೆ. ಇದರಿಂದ ಜನರಿಗೆ ಸಂಪರ್ಕ ಕಡಿತವಾಗಿದೆ.
ಈ ವ್ಯಾಪ್ತಿಗೆ ಕಳೆದ 24 ಗಂಟೆಯಲ್ಲಿ 20.50 ಇಂಚು ಮಳೆಯಾಗಿದೆ ಎಂದು ಇಲ್ಲಿನ ನಿವಾಸಿ ಕರ್ತಮಾಡ ಧನು ತಿಳಿಸಿದ್ದಾರೆ.
ಶ್ರೀಮಂಗಲ-ಟಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲೂ ಬಾರೀ ಮಳೆಯಾಗಿದೆ. ಇಲ್ಲಿನ ಹಲವು ಕಾಫಿ ತೋಟ, ನಾಟಿ ಮಾಡಿದ್ದ ಭತ್ತದ ಗದ್ದೆಗಳು ಲಕ್ಷ್ಮಣ ತೀರ್ಥ ನದಿ ಪ್ರವಾಹದಿಂದ ಜಲಾವೃತವಾಗಿದೆ.
ದ.ಕೊಡಗಿನ ಘಟ್ಟ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಮುಂದುವರೆದಿದ್ದು, ತೀವ್ರ ಗಾಳಿ ಮಳೆಗೆ ಮಾರ್ಗದಲ್ಲಿ ಅಡಚಣೆಯಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತ ಕಳೆದ ಮೂರು ದಿನದಿಂದ ಮುಂದುವರೆದಿದೆ.
ಈ ವ್ಯಾಪ್ತಿಯ ಲಕ್ಷ್ಮಣ ತೀರ್ಥ, ಕಕ್ಕಟ್ಟ್ ನದಿಗಳು ತುಂಬಿ ಹರಿಯುತ್ತಿದೆ. ಟಿ.ಶೆಟ್ಟಿಗೇರಿ, ಬಿರುನಾಣಿ ನಡುವಿನ ಕೆಕೆಆರ್ ಬಳಿ ಕಕ್ಕಟ್ಟ್ ನದಿ ಹಳೆ ಸೇತುವೆ ಮಟ್ಟಕ್ಕೆ ತುಂಬಿ ಹರಿಯುತ್ತಿದೆ. ಬಿ.ಶೆಟ್ಟಿಗೇರಿ ವ್ಯಾಪ್ತಿಗೂ ಧಾರಾಕಾರ ಮಳೆಯಾಗಿದ್ದು, ಕಳೆದ 24 ಗಂಟೆಯಲ್ಲಿ 12.30 ಇಂಚು ಮಳೆಯಾಗಿದೆ. ಇದುವರೆಗೆ 131.79 ಇಂಚು ಮಳೆ ಇಲ್ಲಿಗೆ ದಾಖಲಾಗಿದೆ ಎಂದು ಕಡೇಮಾಡ ಕುಸುಮಾ ಜೋಯಪ್ಪ ತಿಳಿಸಿದ್ದಾರೆ. - ಹರೀಶ್ ಮಾದಪ್ಪ
ನಾಪೆÇೀಕ್ಲು ವ್ಯಾಪ್ತಿಯಲ್ಲಿ : ಮುಂದುವರಿದ ಪ್ರವಾಹ
ನಾಪೆÇೀಕ್ಲು: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟ್ಟಮುಡಿ ಬಳಿ ಕಾವೇರಿ ನದಿ ಪ್ರವಾಹ ರಸ್ತೆ ಮೇಲೆ ಉಕ್ಕಿಹರಿಯುತ್ತಿದ್ದು, ಯಾವದೇ ಕ್ಷಣದಲ್ಲಾದರೂ ರಸ್ತೆ ಸಂಚಾರ ಸ್ಥಗಿತಗೊಳ್ಳಲಿದೆÀ.
ಕಾವೇರಿ ನದಿ ಹರಿಯುತ್ತಿರುವ ಬೊಳಿಬಾಣೆಯಲ್ಲಿ ಕಾವೇರಿ ನದಿ ನೀರಿನ ಪ್ರವಾಹ ರಸ್ತೆಯಲ್ಲಿ ಹರಿಯುತ್ತಿದ್ದು, ನಾಪೆÇೀಕ್ಲು – ಮೂರ್ನಾಡು ವಾಹನ ಸಂಚಾರ ಸ್ಥಗಿತಗೊಂಡಿದೆ. ಕಕ್ಕಬ್ಬೆ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ನಾಪೆÇೀಕ್ಲು - ಪಾರಾಣೆ ರಸ್ತೆಯ ಎತ್ತುಕಡು ಬಳಿ ಪ್ರವಾಹ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ನಾಲಡಿ ಗ್ರಾಮದ ಅಂಬಲಪೆÇಳೆಯಲ್ಲಿ ಪ್ರವಾಹ ಉಂಟಾದ ಕಾರಣ ಕಳೆದ ಎರಡು ದಿನದಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕಕ್ಕಬ್ಬೆ ಪಟ್ಟಣದಿಂದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ತೆರಳುವ ರಸ್ತೆಯಲ್ಲಿ ಕಕ್ಕಬ್ಬೆ ಹೊಳೆಯ ಪ್ರವಾಹದಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಭಾರೀ ಗಾಳಿ ಮತ್ತು ಮಳೆಯಿಂದ ಭೂ ಕುಸಿತ, ಮರ ಬಿದ್ದು ನಷ್ಟ ಉಂಟಾದ ಬಗ್ಗೆ ವರದಿಯಾಗಿದೆ. ಕಾಫಿ, ಕಾಳು ಮೆಣಸು, ಅಡಿಕೆ ಫಸಲು ಗಾಳಿ, ಮಳೆ ಮತ್ತು ತೇವಾಂಶ ಹೆಚ್ಚಾದ ಕಾರಣ ಸಂಪೂರ್ಣ ನೆಲಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ. ನಾಟಿ ಮಾಡಿದ ಭತ್ತದ ಗದ್ದೆಗಳು ಪ್ರವಾಹದ ಕಾರಣ ಸಂಪೂರ್ಣವಾಗಿ ಜಲಾವೃತ್ತಗೊಂಡು ನಷ್ಟ ಸಂಭವಿಸಿದೆ.
ಬರೆ ಕುಸಿತ
ಮಡಿಕೇರಿಯ ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯಲ್ಲಿ ಮನೆಯ ಸಮೀಪವೇ ಬರೆಯೊಂದು ಕುಸಿದು ಮನೆಯ ಗೋಡೆ ಮೇಲೆ ಬಿದ್ದಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಹೆಬ್ಬೆಟ್ಟಗೇರಿ ನಿವಾಸಿ ತುಕ್ರ ಅವರ ಮಾಲೀಕತ್ವದಲ್ಲಿದ್ದ ಮನೆಯ ಸಮೀಪಕ್ಕೆ ಬರೆಯೊಂದು ಕುಸಿದು ಬಿದ್ದಿದೆ. ಮನೆಯ ಪಕ್ಕವೇ ಜಲ ಹರಿದು ಹೋಗುವದರಿಂದ ಮಣ್ಣು ಸಡಿಲಗೊಂಡು ಬರೆಜರಿದಿದೆ. ಇದರಿಂದ ಮನೆಯ ಹಿಂಭಾಗದ ಗೋಡೆಗಳು ಕುಸಿದು ಹೋಗಿದ್ದು ಅದೃಷ್ಟವಶಾತ್ ಯಾವದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯ ಹಿಂಭಾಗದ ಗೋಡೆಯ ಮೇಲೆÉ ಸಂಪೂರ್ಣವಾಗಿ ಬರೆ ಕುಸಿದು ಬಿದ್ದಿರುವದರಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಈ ಕುರಿತು ಮಾತನಾಡಿದ ಮನೆಯ ಮಾಲೀಕ ತುಕ್ರ ಬೆಳಿಗ್ಗೆ 7 ಗಂಟೆಗೆ ಮನೆಯ ಮೇಲೆ ಬರೆ ಬಿದ್ದಿದ್ದು ಅಪಾರ ನಷ್ಟ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.
2 ತಿಂಗಳಿನಿಂದ ಕೆಲಸಕ್ಕೆ ಹೋಗದೆ ನಾನು ತಂದೆ, ತಂಗಿ ಕಷ್ಟದಿಂದಲೇ ಜೀವನ ಸಾಗಿಸುತ್ತಿದ್ದೇವೆ. ತಂಗಿ ಓದುತ್ತಿದ್ದಾಳೆ. ಇದೀಗ ಬರೆ ಜರಿದು ಮನೆ ಕುಸಿತವಾದ್ದರಿಂದ ಜೀವನ ಮತ್ತಷ್ಟು ಕಷ್ಟವಾಗುತ್ತಿದೆ. ಅಡಿಗೆ ಕೋಣೆಯ ಕಡೆಗೆ ಬರೆ ಜರಿದು ಬಿದ್ದಿರುವದರಿಂದ ಆಹಾರ ಪದಾರ್ಥಗಳು ಇಲ್ಲ ಎಂದು ತುಕ್ರ ಅವರ ಮಗ ನಂದೀಶ ಬೇಸರ ವ್ಯಕ್ತಪಡಿಸಿದರು.
ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಕೊಕ್ಕಲೇರ ಅಯ್ಯಪ್ಪ ಭೇಟಿ ನೀಡಿ ತುಕ್ರರವರ ಕುಟುಂಬಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವದಾಗಿ ಭರವಸೆ ನೀಡಿದರು. ಸ್ಥಳಕ್ಕೆ ಕಂದಾಯ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭತ್ತದ ನಾಟಿ ನಾಶ
ಕೂಡಿಗೆ,ಆ.14 : ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಪಟ್ಟಡ ಪ್ರಕಾಶ್ ಹಾಗೂ ಹುದುಗೂರು ಗ್ರಾಮದ ಶಿವಣ್ಣ ಎಂಬವರು ತಮ್ಮ ಗದ್ದೆ ನಾಟಿಯಾದ ಮೂರು ದಿನದ ನಂತರ ಕಳೆ ನಾಶಕವನ್ನು ತಮ್ಮ ನಾಟಿ ಮಾಡಿದ ಜಮೀನಿಗೆ ಹಾಕಿರುತ್ತಾರೆ. ಈ ಕಳೆ ನಾಶಕದಿಂದ ಕಳೆ ನಾಶವಾಗುವ ಬದಲು ನಾಟಿ ಮಾಡಿದ ಭತ್ತದ ಸಸಿಗಳು ಸುಟ್ಟ ಮಾದರಿಯಲ್ಲಿ ಒಣಗಿ ನಾಶವಾಗಿವೆ.
ರೈತರಾದ ಪ್ರಕಾಶ್ ಎಂಬವರ ಎರಡು ಎಕರೆ ಪ್ರದೇಶ ಹಾಗೂ ಶಿವಣ್ಣ ಎಂಬವರ ಎರಡು ಎಕರೆ ನಾಟಿ ಗದ್ದೆಗಳು ಸಂಪೂರ್ಣ ನಾಶವಾಗಿವೆ. ಈ ರೈತರು ಸ್ಥಳೀಯ ಸಹಕಾರ ಸಂಘದಿಂದ ಕಳೆನಾಶಕ ಎಂದು ಅಟ್ರೇನೆಕ್ಸ್ ಕಳೆನಾಶಕವನ್ನು ಖರೀದಿಸಿ ಗದ್ದೆಗೆ ಹಾಕಿದ್ದಾರೆ. ಇದೀಗ ಮರುನಾಟಿ ಮಾಡಲು ಸಸಿಮಡಿಗಳು ಇಲ್ಲದೆ, ಈಗಾಗಲೇ ಎಕರೆಗೆ ಇಪ್ಪತ್ತು ಸಾವಿರಕ್ಕೂ ಅಧಿಕ ಹಣ ಖರ್ಚುಮಾಡಿ ನಷ್ಟಕ್ಕೊಳಗಾಗಿದ್ದಾರೆ.
ಸಂಬಂಧಿಸಿದ ಸ್ಥಳೀಯ ಸಹಕಾರ ಸಂಘಕ್ಕೆ ದೂರು ನೀಡಲಾಗಿದ್ದು, ಕೃಷಿ ಇಲಾಖೆಯ ಅಧಿಕಾರಿಗೂ ಲಿಖಿತವಾಗಿ ದೂರು ನೀಡಲಾಗಿದೆ. ಸಂಬಂಧಪಟ್ಟ ಇಲಾಖೆ, ಕಳೆನಾಶಕ ಕಂಪೆನಿಯವರು ಸ್ಥಳಪರಿಶೀಲಿಸಿ ನೊಂದ ರೈತರಿಗೆ ಪರಿಹಾರ ಒದಗಿಸಬೇಕೆಂದು ಸೀಗೆಹೊಸೂರು ಗ್ರಾಮದ ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಧನಂಜಯ್, ಸಮಿತಿ ಸದಸ್ಯರು ಹಾಗೂ ಹುದುಗೂರು ಗ್ರಾಮದ ಪ್ರಮುಖರಾದ ಚಿಣ್ಣಪ್ಪ, ಚಿಮ್ಮಿಯಣ್ಣ, ಪ್ರಕಾಶ್, ದೇವರಾಜ್, ಕೀರ್ತನ್ ಸೇರಿದಂತೆ ನೂರಾರು ರೈತರು ಒತ್ತಾಯಿಸಿದ್ದಾರೆ.
ಕರಡಿಗೋಡು : 20 ಮನೆ ಜಲಾವೃತ
ಸಿದ್ದಾಪುರ: ಸಿದ್ದಾಪುರ ವ್ಯಾಪ್ತಿಯಲ್ಲಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕರಡಿಗೋಡು ಗ್ರಾಮದ 20 ಮನೆಗಳು ಜಲಾವೃತಗೊಂಡಿದೆ.
ಪ್ರವಾಹಪೀಡಿತ ನದಿದಡದ 10 ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳೀಯ ಸರಕಾರಿ ಶಾಲೆಯಲ್ಲಿ ತೆರೆಯಲಾದ ಗಂಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವಿನು ನೇತೃತ್ವದಲ್ಲಿ ಗ್ರಾಮ ಲೆಕ್ಕಿಗರಾದ ಅನಿಲ್ ಕುಮಾರ್ ಹಾಗೂ ಮಂಜುನಾಥ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿ, ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ.
ಸಿದ್ದಾಪುರದಿಂದ ಕರಡಿಗೋಡುವಿಗೆ ತೆರಳುವ ರಸ್ತೆಯು ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ. ಕರಡಿಗೋಡು ಗ್ರಾಮದ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಆ ಭಾಗದ ನದಿ ದಡದಲ್ಲಿ ಪ್ರವಾಹದ ನೀರಿನ ಒಡೆತಕ್ಕೆ ನದಿ ದಡವು ಕುಸಿಯುತ್ತಿದ್ದು, ಕೆಲವು ಮನೆಗಳು ಬಿರುಕು ಬಿಟ್ಟಿದ್ದು, ಕೆಲ ಮನೆಯ ಹಿಂಬಾಗದ ಶೌಚಾಲಯವು ಪ್ರವಾಹದ ನೀರಿಗೆ ಸಿಲುಕಿ ನೀರುಪಾಲಾಗಿದೆ. ಕರಡಿಗೋಡುವಿನ ನದಿ ದಡದಲ್ಲಿರುವ ಹೊಟೇಲ್ ಒಂದು ಜಲಾವೃತಗೊಂಡಿದ್ದು, ಕರಡಿಗೋಡುವಿನಿಂದ ಚಿಕ್ಕನಹಳ್ಳಿಗೆ ತೆರಳುವ ಸೇತುವೆಯೂ ಕೂಡ ಜಲಾವೃತಗೊಂಡಿದೆ. ಇದರಿಂದಾಗಿ ಚಿಕ್ಕನಹಳ್ಳಿಗೆ ತೆರಳುವ ಸಂಪರ್ಕ ರಸ್ತೆ ಕಡಿತಗೊಂಡಿದೆ.
ಗುಹ್ಯ ಗ್ರಾಮದಲ್ಲೂ ಪ್ರವಾಹದ ಭೀತಿ ಎದುರಾಗಿದ್ದು, ಕೂಡುಗದ್ದೆಯ ನದಿ ದಡದ ಕೆಲವು ಮನೆಗಳ ಬಳಿ ನದಿಯು ಅಪಾಯದ ಅಂಚಿನಲ್ಲಿ ಹರಿಯುತ್ತಿದೆ. ಐತಿಹಾಸಿಕ ಗುಹ್ಯ ಅಗಸ್ತ್ಯೇಶ್ವರ ದೇವಾಲಯದ ಸಂಪರ್ಕ ರಸ್ತೆಯು ಜಲಾವೃತಗೊಂಡಿದ್ದು, ಕಕ್ಕಟ್ಟುಕಾಡುವಿಗೆ ತೆರಳುವ ಸಂಪರ್ಕ ಕಡಿತಗೊಂಡಿದೆ.
ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ರಸ್ತೆಯು ಪ್ರವಾಹ ನೀರಿನಿಂದ ಆವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಬೆಟ್ಟದಕಾಡುವಿನ ಸತ್ಯನಾರಾಯಣ ದೇವಾಲಯದ ಬಳಿ ಇರುವ ನದಿ ದಡದ 4 ಮನೆಗಳು ಜಲಾವೃತಗೊಂಡಿದ್ದು, ಅಲ್ಲಿಯ ನಿವಾಸಿಗಳನ್ನು ಸ್ಥಳೀಯ ಅಂಗನವಾಡಿಯಲ್ಲಿ ತೆರೆದ ಗಂಜೀಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಈ ಸಂದರ್ಭ ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್, ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾ, ಸದಸ್ಯರಾದ ಹನೀಫ,ಬೇಬಿ ಹಾಗೂ ಸ್ಥಳೀಯರು ಜಲಾವೃತಗೊಂಡ ಮನೆಯ ಸಾಮಾಗ್ರಿಗಳನ್ನು ಸ್ಥಳಾಂತರಿಸಲು ಸಹಕಾರ ಮಾಡಿದರು. ಗ್ರಾಮ ಲೆಕ್ಕಿಗೆ ಅನುಷ ಹಾಗೂ ಸಹಾಯಕ ಸ್ವಾಮಿ ಸ್ಥಳದಲ್ಲಿ ಹಾಜರಿದ್ದರು.
ಗಾಳಿ ಮಳೆಗೆ ಕೆಲವೆಡೆಗಳಲ್ಲಿ ಮರಗಳು ಧರೆಗುರುಳಿದ್ದು, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ. ಅಂಬೆಡ್ಕರ್ ನಗರದ ಬಳಿಯ ಮುಖ್ಯ ರಸ್ತೆಯಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
-ಎ.ಎನ್ ವಾಸು
ಹಾರಂಗಿ ಸೋಮವಾರಪೇಟೆ ರಸ್ತೆ ಬಂದ್
ಗುಡ್ಡೆಹೊಸೂರು: ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವದರಿಂದ ಹಾರಂಗಿಯಿಂದ ಸೋಮವಾರಪೇಟೆಗೆ ತೆರಳುವ ರಸ್ತೆಯ ಮೇಲೆ ಸುಮಾರು 5 ಅಡಿಯಷ್ಟು ನೀರು ಹರಿಯುತ್ತಿದ್ದು ಇಲ್ಲಿ ನೀರಿನ ಸೆಳೆತಕ್ಕೆ ದೊಡ್ಡಗಾತ್ರದ ಅಲೆಗಳುಕಂಡುಬರುತ್ತಿವೆ. ನದಿಯ ದಡದಲ್ಲಿ ನಿಂತು ನೋಡಿದರೆ ಸಮುದ್ರದಲ್ಲಿ ಕಾಣಸಿಗುವ ಅಲೆಗಳಂತೆ ಇಲ್ಲಿಯು ಕಾಣಬಹುದಾಗಿದೆ. ಇದೀಗ ಹಾರಂಗಿ ಜಲಾಶಯದತ್ತ್ತ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ.
-ಗಣೇಶ್ ಕುಡೆಕ್ಕಲ್
ಕರೆಂಟ್ ಕಂಬಕ್ಕೆ ಅಪ್ಪಳಿಸಿದ ಮರ
ಸುಂಟಿಕೊಪ್ಪ : ಸುಂಟಿಕೊಪ್ಪದಿಂದ ಮಾದಾಪುರಕ್ಕೆ ಸಂಪರ್ಕ ಸಾಧಿಸುವ ರಸ್ತೆಯಲ್ಲಿ ಭೂ ಕುಸಿತ ಉಂಟಾದ ಕಾರಣ ಮರವೊಂದು ಬಿದ್ದು ಕರೆಂಟ್ ಕಂಬಕ್ಕೆ ತಾಗಿ ನಿಂತಿದೆ. ಸುಂಟಿಕೊಪ್ಪ ಬಳಿಯ ಪನ್ಯದಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಕೆಲ ಹೊತ್ತು ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಉಂಟಾಗಿತ್ತು.