*ಗೋಣಿಕೊಪ್ಪಲು, ಆ. 14: ದಕ್ಷಿಣ ಕೊಡಗಿನಾದ್ಯಂತ ಸೋಮವಾರ ಸಂಜೆ 5 ಗಂಟೆಗೆ ಆರಂಭಗೊಂಡ ಮಳೆ ಮಂಗಳವಾರ ಸಂಜೆವರೆಗೂ ದಕ್ಷಿಣ ಕೊಡಗಿನಾದ್ಯಂತ ಧಾರಾಕಾರವಾಗಿ ಸುರಿಯಿತು. ಮಳೆಯ ರಭಸಕ್ಕೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ.ಶ್ರೀಮಂಗಲ, ಟಿ.ಶೆಟ್ಟಿಗೇರಿ, ನಾಲ್ಕೇರಿ ಹರಿಹರ ಬಲ್ಯಮಂಡೂರು ಭಾಗದಲ್ಲಿ ಲಕ್ಷ್ಮಣತೀರ್ಥ ನದಿ ಪ್ರವಾಹ ಕಾಫಿ ತೋಟವನ್ನೂ ಆವರಿಸಿದೆ. ಕಾನೂರು, ಕೊಟ್ಟಗೇರಿ, ಬಾಳೆಲೆ, ನಿಟ್ಟೂರು, ಜಾಗಲೆ ಭಾಗದಲ್ಲಿ ನದಿ ಬಯಲಿನ ಗದ್ದೆಗಳು ಪ್ರವಾಹದಲ್ಲಿ ಮುಳುಗಿದ್ದರೆ ಮಲ್ಲೂರು, ಬಾಳೆಲೆ ನಡುವಿನ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ. ಈ ಭಾಗದ ಸಂಪರ್ಕ ಸಂಪೂರ್ಣವಾಗಿ ಕಡಿದು ಹೋಗಿದೆ. ತಿತಿಮತಿ, ಕೋಣನಕಟ್ಟೆ, ಸುಳುಗೋಡು, ದೇವನೂರು ಭಾಗದಲ್ಲಿ ಹರಿಯುವ ಕೀರೆಹೊಳೆ ಕೂಡ ಅಪಾಯದ ಮಟ್ಟ ಮೀರಿದೆ. ಕಿರುಗೂರು, ನಲ್ಲೂರು ನಡುವಿನ ಮತ್ತೊಂದು ಕೀರೆಹೊಳೆ ದಡ ಮೀರಿ ಹರಿಯುತ್ತಿದೆ. ಇದರ ಪ್ರವಾಹಕ್ಕೆ ನಲ್ಲೂರು. ಬೆಸಗೂರಿನ ನಾಟಿಮಾಡಿದ ಗದ್ದೆಗಳು ನಲುಗುತ್ತಿವೆ. ಗೋಣಿಕೊಪ್ಪಲಿನ 2ನೇ ಬ್ಲಾಕಿನ ಬಳಿ ಹರಿಯುತ್ತಿರುವ ಕೀರೆಹೊಳೆ ಪ್ರವಾಹ ಭೀತಿ ಮೂಡಿಸಿದೆ. ನದಿಯ ನೀರು ಇಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಆತಂಕ ಎದುರಾಗಿದೆ.

ಕುಟ್ಟ, ಮಂಚಳ್ಳಿ ನಡುವಿನ ರಸ್ತೆ ಅಂಚಿನಲ್ಲಿದ್ದ ಭಾರಿ ಗಾತ್ರದ ಬೀಟೆ ಮರ ನೆಲ್ಲಕ್ಕುರುಳಿ ಈ ಮಾರ್ಗದ ರಸ್ತೆ ಸಂಚಾರ ಸುಮಾರು 4 3 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಬಳಿಕ ಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಜೆಸಿಬಿ ಮೂಲಕ ಮರ ತೆರವುಗಳಿಸಿದ ಬಳಿಕ ಸಂಚಾರ ಆರಂಭಗೊಂಡಿತು. ಕುರ್ಚಿ ಗ್ರಾಮದ ಅಜ್ಜಮಾಡ ಕುಶಾಲಪ್ಪ ಅವರ ಭತ್ತದ ನಾಟಿ ಗದ್ದೆ ಸಂಪೂರ್ಣವಾಗಿ ಜಲವೃತಗೊಂಡಿದೆ.

-ಚಿತ್ರ, ವರದಿ: ಎನ್.ಎನ್.ದಿನೇಶ್