ಮಡಿಕೇರಿ, ಆ. 14: ತಲಕಾವೇರಿಗೆ ಈ ವರ್ಷ ಇದುವರೆಗೆ 270 ಇಂಚು ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕ್ಷೇತ್ರದಲ್ಲಿ 12.50 ಇಂಚು ಮಳೆಯಾಗಿದೆ. ಕಳೆದ ಸಾಲಿನಲ್ಲಿ 151.50 ಇಂಚು ಮಳೆಯಾಗಿತ್ತು. ಆಗಸ್ಟ್ 1 ರಿಂದ 14 ರವರೆಗಿನ ಅವಧಿಯಲ್ಲಿ ಈ ವರ್ಷ 43 ಇಂಚು ಮಳೆಯಾಗಿದ್ದು ಕಳೆದ ವರ್ಷ 17.50 ಇಂಚುಗಳಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ತಲಕಾವೇರಿಗೆ ಎಲ್ಲ ವಿಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ ಎನ್ನುವ ಮಾಹಿತಿ ಅಲ್ಲ್ಲಿನ ಪ್ರಧಾನ ಅರ್ಚಕರಾದ ಟಿ.ಎಸ್. ನಾರಾಯಣಾಚಾರ್ ಅವರಿಂದ ತಿಳಿದುಬಂದಿದೆ. ಇಂದು ಹಾಲು ಕೂಡ ಸರಬರಾಜುಗೊಂಡಿಲ್ಲ. ಪತ್ರಿಕೆಗಳೂ ಲಭ್ಯವಾಗಿಲ್ಲ. ಹೊರ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬದು ತಿಳಿಯುತ್ತಿಲ್ಲ ಎಂದು ನಾರಾಯಣಾಚಾರ್ ತಿಳಿಸಿದರು. ಭಾಗಮಂಡಲದಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿರುವದರಿಂದ ತಲಕಾವೇರಿ ಕ್ಷೇತ್ರಕ್ಕೆ ಓರ್ವ ಯಾತ್ರಾರ್ಥಿಯೂ ಬರಲು ಸಾಧ್ಯವಾಗಿಲ್ಲ.ಭಾಗಮಂಡಲದಲ್ಲಿ ಇಂದು ಸಂಜೆ ಹೊತ್ತಿಗೆ ದೇವಾಲಯದ ಹಿಂಭಾಗದ ಮನೆಗಳತ್ತ ಕಾವೇರಿ ನೀರಿನ ಪ್ರವಾಹ ಮುಂದುವರಿದಿದೆ, ವಿದ್ಯುತ್ ಇಲ್ಲದೆ ಊರಿನಲ್ಲಿ ಗಾಡಾಂಧಕಾರ ಆವರಿಸಿದೆ ಎಂದು ಅಲ್ಲ್ಲಿನ ನಿವಾಸಿ ಕೆ.ಜೆ.ಭರತ್ ತಿಳಿಸಿದ್ದಾರೆ.

ಮಾಹಿತಿ: ಕೆ.ಡಿ. ಸುನಿಲ್