ಮಡಿಕೇರಿ, ಆ. 14: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಹಲವೆಡೆ ಪ್ರವಾಹ ಆವರಿಸಿದೆ. ಭಾಗಮಂಡಲ ದಲ್ಲಿ ಕಾವೇರಿ ಅಪಾಯ ಮಟ್ಟ ತಲಪಿದ್ದು ಎಲ್ಲ ಸಂಪರ್ಕ ರಸ್ತೆಗಳು ಜಲಾವೃತಗೊಂಡಿವೆ. ಸಿದ್ದಾಪುರ ಸನಿಹದ ಕರಡಿಗೋಡು, ನೆಲ್ಲಿಹುದಿಕೇರಿಗಳಲ್ಲಿ ನದಿ ಪ್ರವಾಹದಿಂದ ಮುನ್ನೆಚ್ಚರಿಕೆಯ ಕ್ರಮವಾಗಿ 14 ಕುಟುಂಬಗಳನ್ನು ತಾತ್ಕಾಲಿಕ ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ, ಕಕ್ಕಟ್ ಹೊಳೆಗಳು ಮೇರೆ ಮೀರಿ ಹರಿಯುತ್ತಿವೆ. ಟಿ.ಶೆಟ್ಟಿಗೇರಿ, ಬಿರುನಾಣಿ, ಶ್ರೀಮಂಗಲ ಪ್ರದೇಶಗಳಲ್ಲಿ ಅಪಾಯದ ಮುನ್ಸೂಚನೆಯಿದೆ. ಹೈಸೊಡ್ಲೂರು-ಹುದಿಕೇರಿ ವಿಭಾಗಗಳಲ್ಲಿ ಭಾರೀ ಭೂ ಕುಸಿತಗಳುಂಟಾಗಿವೆ. ಮಡಿಕೇರಿ- ಮಂಗಳೂರು ರಸ್ತೆಯಲ್ಲಿ ಈ ಹಿಂದಿನ ಭೂ ಕುಸಿತದೊಂದಿಗೆ ಇಂದು ಮತ್ತೆ ತಾಳತ್‍ಮನೆಯಲ್ಲಿ ಭೂಕುಸಿತ ವುಂಟಾಗಿ ಸಂಚಾರೀ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಹಾರಂಗಿ ಜಲಾಶಯದಲ್ಲಿ ಒಳ ನೀರು ಹರಿವಿನ ಒತ್ತಡ ಹೆಚ್ಚಾಗುತ್ತಿದ್ದು, ನೀರಿನ ಹರಿವು ಕಡಿಮೆಗೊಳಿಸಲು ಭಾರೀ ಪ್ರಮಾಣ ದಲ್ಲಿ ನದಿಗೆ ನೀರು ಬಿಡುತ್ತಿದ್ದು ಹಿನ್ನೀರಿನ ಅಧಿಕ ಪ್ರಮಾಣದ ನೀರು ಕೂಡಿಗೆ, ಕುಶಾಲನಗರ, ಶಿರಂಗಾಲ ಮೊದಲಾದ ಪ್ರದೇಶಗಳ ನೂರಾರು ಎಕರೆ ಬೆಳೆ ಪ್ರದೇಶವನ್ನು ನುಂಗಿ ಹಾಕುತ್ತಿದೆ. ಬೇತ್ರಿಯಲ್ಲಿ ನದಿ ನೀರು ರಸ್ತೆ ಮೇಲೆ ಬರಲು ಹಾತೊರೆಯುತ್ತಿದೆ. ಕುಶಾಲನಗರದಲ್ಲಿ ಕಾವೇರಿ ಹರಿವು ಹೆಚ್ಚಾಗಿ ಹಲವು ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ.ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿ ಪ್ರದೇಶಗಳ ಜನರು ಮಳೆಯ ಆರ್ಭಟಕ್ಕೆ ಹೆಚ್ಚಾಗಿ ತತ್ತರಿಸಿದ್ದಾರೆ. ಕೊತ್ನಳಿಯಲ್ಲಿ ಕುಮಾರಧಾರ ನದಿ ತನ್ನ ಎಲ್ಲೆ ಮೀರಿದೆ. ಸೋಮವಾರಪೇಟೆ-ಮಡಿಕೇರಿ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಭಾರೀ ಮಳೆಗೆ ಸೋಮವಾರಪೇಟೆ ಭಾಗದ ಕೆರೆಗಳು ತುಂಬಿ ಹರಿಯುತ್ತಿವೆÉ. ಪಟ್ಟಣದ ಆನೆಕೆರೆ ,ಯಡೂರು ದೇವರ ಕೆರೆ ತುಂಬಿದ್ದು, ಚೌಡ್ಲು ಕೆರೆ ತುಂಬಿ ಹರಿಯುತ್ತಿವೆ. ಮಾದಾಪುರದಲ್ಲಿ ಬರೆ ಕುಸಿತ ಸಂಭವಿಸಿ ರಸ್ತೆ ಸಂಚಾರಕ್ಕೆ ಧಕ್ಕೆಯಾಗಿತ್ತು. ಸುಂಟಿಕೊಪ್ಪ- ಮಾದಾಪುರ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ನಾಪೋಕ್ಲು ವಿಭಾಗದ ಬೊಳಿಬಾಣೆಯಲ್ಲಿ ಕಾವೇರಿ ನದಿ ನೀರಿನ ಪ್ರವಾಹ, ನಾಪೆÇೀಕ್ಲು – ಮೂರ್ನಾಡು ವಾಹನ ಸಂಚಾರ ಸ್ಥಗಿತ, ಕಕ್ಕಬ್ಬೆ ನದಿಯ ನೀರಿನ ಮಟ್ಟದಲ್ಲಿ ಏರಿಕೆ, ಎತ್ತುಕಡು ಬಳಿ ಪ್ರವಾಹದಿಂದ ಸಂಚಾರ ಸ್ಥಗಿತ, ನಾಲಡಿ ಗ್ರಾಮದ ಅಂಬಲಪೆÇಳೆಯಲ್ಲಿ ಪ್ರವಾಹದಿಂದ ಸಂಚಾರ ಸ್ಥಗಿತ, ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ತೆರಳುವ ರಸ್ತೆಯಲ್ಲಿ
(ಮೊದಲ ಪುಟದಿಂದ) ಕಕ್ಕಬ್ಬೆ ಹೊಳೆಯ ಪ್ರವಾಹದಿಂದ ಸಂಚಾರ ಸ್ಥಗಿತಗೊಂಡಿದೆ.
ಕೋರಂಗಾಲ, ಅಯ್ಯಂಗೇರಿ ಹಾಗೂ ಸಣ್ಣಪುಲಿಕೋಟು ಗ್ರಾಮಗಳಿಗೆ ಜಿಲ್ಲೆಯ ಎಲ್ಲ ಕಡೆಗಳಿಂದ ಸಂಪರ್ಕ ಸ್ಥಗಿತಗೊಂಡಿದೆ. ಈ ಗ್ರಾಮಗಳು ಅಪಾಯದ ಸ್ಥಿತಿಯಲ್ಲಿವೆ. ಬಲ್ಲಮಾವಟಿ, ಕೊಟ್ಟಮುಡಿ ಹಾಗೂ ಕಡಂಗ ಗ್ರಾಮಗಳಿಗೆ ಸಂಚಾರ ಸ್ಥಗಿತಗೊಂಡಿದೆ. ಭಾಗಮಂಡಲದಲ್ಲಿ ಕಾವೇರಿ ಕೆಸರು ತುಂಬಿದ ನಸುಗೆಂಪು ನೀರಾಗಿ ಹರಿಯುತ್ತಿರುವದು ಗೋಚರವಾಗಿದೆ. ಭಾಗಮಂಡಲದಿಂದ ನಾಪೋಕ್ಲು ರಸ್ತೆಯಲ್ಲಿ ರ್ಯಾಫ್ಟಿಂಗ್ ವ್ಯವಸ್ಥೆಯಿದ್ದರೂ ಪ್ರವಾದೋಪಾದಿಯ ನೀರಿನಲ್ಲಿ ರ್ಯಾಫ್ಟಿಂಗ್‍ನ ಚಾಲನೆ ಆಪಾಯಕಾರಿ ಎಂದು ಕೈ ಬಿಡಲಾಗಿದೆ. ಮಡಿಕೇರಿ-ತಲಕಾವೇರಿ ರಸ್ತೆಯಲ್ಲಿ ಮಾತ್ರ ದೋಣಿಯೊಂದು ನಿರಂತರವಾಗಿ ಸಂಚರಿಸುತ್ತಿದೆ. ಕಾವೇರಿ ನದಿ ಭಾಗಮಂಡಲ ಶ್ರೀ ಭಗಂಡೇಶ್ವರ ದೇಗುಲದ ಮೆಟ್ಟಿಲೇರುತ್ತಿದ್ದು ದೇವಾಲಯದಲ್ಲಿ ಕಾವೇರಿಯು ಶಾಂತಳಾಗುವದಕ್ಕಾಗಿ ಪೂಜಾದಿಗಳನ್ನು ನಡೆಸಲಾಗಿದೆ. ಭಾಗಮಂಡಲದಲ್ಲಿ ಅಂಗಡಿ ಮಳಿಗೆಗಳು ಜಲಾವೃತಗೊಂಡು ಸಂಪೂರ್ಣ ಬಂದ್ ಆಗಿವೆ.
ಮಂಗಳೂರು ರÀಸ್ತೆಯಲ್ಲಿ ಇಂದು ಮತ್ತೆ ತಾಳತ್‍ಮನೆ ಬಳಿ ಭೂಕುಸಿತವುಂಟಾಗಿದ್ದು ಸಂಚಾರಕ್ಕೆ ಧಕ್ಕೆಯಾಗಿದೆ. ನಿನ್ನೆ ದಿನ ಭೂಕುಸಿತವುಂಟಾಗಿದ್ದ ಮದೆನಾಡು ಬಳಿಯ ಕರ್ತೋಜಿಯಲ್ಲಿ 7 ಜೆ.ಸಿ.ಬಿಗಳು ನಿರಂತರವಾಗಿ ಮಣ್ಣು ತೆಗೆಯುವ ಕಾರ್ಯದಲ್ಲಿ ನಿರತವಾಗಿವೆ. ಮಣ್ಣನ್ನು ಹೊರಗೆ ಒಯ್ಯಲು ಕಾಲಾವಕಾಶವಿಲ್ಲದಿರುವದರಿಂದ ಒಂದು ಬದಿಯಿಂದ ತೆಗೆದು ಮತ್ತೊಂದು ಬದಿಗೆ ಹಾಕಲಾಗುತ್ತಿದೆ. ಆದರೆ, ಅಷ್ಟರಲ್ಲಿ ಮತ್ತೆ ಮತ್ತೆ ಭೂಕುಸಿತವುಂಟಾಗುತ್ತಿದ್ದು ಅಡ್ಡಿಯುಂಟುಮಾಡಿದೆ.
15 ದಿನಗಳ ಹಿಂದೆ ಮಡಿಕೇರಿ ಬಳಿ ಮಂಗಳೂರು ರಸ್ತೆಯಲ್ಲಿ ಕುಸಿದಿದ್ದ ರಸ್ತೆಯ ದುರಸ್ತಿ ನಡೆಯುತ್ತಿದ್ದರೂ ವಿಪರೀತ ಮಳೆಗೆ ಸಿಮೆಂಟ್ ಕೊಚ್ಚಿ ಹೋಗುತ್ತಿದ್ದು ತಾತ್ಕಾಲಿಕ ದುರಸ್ತಿಗೂ ಅಡ್ಡಿಯಂಟಾಗಿದೆ. ನಾಪೋಕ್ಲು, ಮಡಿಕೇರಿ ರಸ್ತೆಯು ಕೊಟ್ಟಮುಡಿಯಲ್ಲಿ ಕಾವೇರಿ ನದಿ ರಸ್ತೆಯ ಮೇಲೆ ಹರಿಯುತ್ತಿದೆ.
ಮಡಿಕೇರಿ ಮುಳುಗಡೆ
ನಿನ್ನೆ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಗಾಳಿ-ಮಳೆಗೆ ಮಡಿಕೇರಿ ನಗರ ಭಾಗಶಃ ಮುಳುಗಡೆಯಾಗಿದೆ. ಕಾವೇರಿ ಬಡಾವಣೆ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿದೆ.
ಟಿ. ಜಾನ್ ಬಡಾವಣೆಯಲ್ಲಿ ಭೂಕುಸಿತಗೊಂಡು ತೋಡು ಕಟ್ಟಿಕೊಂಡು ತೋಡಿನ ನೀರು ಸನಿಹದ ಎರಡು ಮನೆಗಳಿಗೆ ನುಗ್ಗಿದೆ. ತೋಡಿನ ಮೇಲ್ಭಾಗದಲ್ಲಿರುವ ಅಂಬೇಡ್ಕರ್ ಬಡಾವಣೆಯ ನಿವಾಸಿಗಳ ಮನೆಗಳು ಅಪಾಯದ ಸ್ಥಿತಿಯಲ್ಲಿವೆ.
ಇನ್ನು ಕನ್ನಿಕಾ ಬಡಾವಣೆಯಲ್ಲಿ ತೋಡು ಉಕ್ಕಿ ಹರಿಯುತ್ತಿದ್ದು, ಭೂಕುಸಿತದೊಂದಿಗೆ ಚರಂಡಿ ನೀರು ರಸ್ತೆ ಮೇಲೆ ಹರಿದು ಕೆಲವು ಮನೆಗಳಿಗೆ ನುಗ್ಗಿದೆ. ಪ್ರಕೃತಿ ಬಡಾವಣೆ ಹಾಗೂ ಪತ್ರಿಕಾಭವನದ ಎದುರಿಗಿರುವ ಬಡಾವಣೆಯಲ್ಲೂ ಚರಂಡಿ ನೀರು ರಸ್ತೆ ಮೇಲೆ ಹಾಗೂ ಮನೆಗಳಿಗೆ ನುಗ್ಗಿದೆ.
ನಗರದ ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಭಾರೀ ಎತ್ತರದಿಂದ ಭೂಕುಸಿತವಾಗಿದ್ದು, ಕಲ್ಲು, ಮಣ್ಣು ಹಿಂಬದಿಯ ಗೋಡೆಯನ್ನು ಸೀಳಿಕೊಂಡು ತಂಗುದಾಣದ ಒಳಕ್ಕೆ ಬಂದಿದೆ. ಸ್ಟೇಟ್ ಬ್ಯಾಂಕ್ ಬಳಿಯಿಂದ ಪ್ರಕೃತಿ ಬಡಾವಣೆವರೆಗಿನ ಕಾಂಕ್ರೀಟ್ ರಸ್ತೆಯಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ಮೇಲೆಯೇ ಅರ್ಧ ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಪ್ರಕೃತಿ ಬಡಾವಣೆಗೆ ನುಗ್ಗಿದೆ. ಇನ್ನುಳಿದಂತೆ ಅಲ್ಲಲ್ಲಿ ಹಾನಿಗಳಾಗಿವೆ.