ಮಡಿಕೇರಿ, ಆ. 13: ಕರ್ನಾಟಕ ರಾಜ್ಯ ಸರಕಾರವು ಮತದಾರರ ತೀರ್ಪನ್ನು ಧಿಕ್ಕರಿಸಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯೊಂದಿಗೆ ಆಳ್ವಿಕೆ ನಡೆಸುತ್ತಿದ್ದರೂ ಯಾವದೇ ಅಭಿವೃದ್ಧಿಗೆ ಮುಂದಾಗಿಲ್ಲವೆಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಸ್ಥಳೀಯ ಸಂಸ್ಥೆ ಚುನಾವಣೆ ನಿಮಿತ್ತ ಜಿಲ್ಲೆಗೆ ಭೇಟಿ ನೀಡಿರುವ ಅವರು ಇಲ್ಲಿನ ಸುದರ್ಶನ ಅತಿಥಿ ಗೃಹದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಸರಕಾರವು ಯಾವದೇ ಕೆಲಸ ನಿರ್ವಹಿಸದೇ ಎಲ್ಲವನ್ನೂ ವಾಸ್ತು ಹೆಸರಿನಲ್ಲಿ ಆಲೋಚಿಸುತ್ತಿದೆ. ಇದೊಂದು ಕೆಲಸ ಮಾಡದ ವಾಸ್ತು ಸರಕಾರವೆಂದು ಅವರು ಟೀಕಿಸಿದರು.
ಡ್ರಗ್ ಮಾಫಿಯಾ : ಕರ್ನಾಟಕದಲ್ಲಿ 5 ರಿಂದ 6 ಲಕ್ಷದಷ್ಟು ಬಾಂಗ್ಲಾ ದೇಶದ ಪ್ರಜೆಗಳಿದ್ದು, ಅಕ್ರಮ ಡ್ರಗ್ ಮಾಫಿಯಾ ದಂಧೆಯಲ್ಲಿ ತೊಡಗಿದೆ ಎಂದು ಮಾಜಿ ಗೃಹಮಂತ್ರಿಯೂ ಆಗಿರುವ ಆರ್. ಅಶೋಕ್ ಈ ಸಂದರ್ಭ ಗಂಭೀರ ಆರೋಪ ಮಾಡಿದರು. ಈ ಹಿಂದೆ ಕರ್ನಾಟಕದಲ್ಲಿ ನೈಜೀರಿಯಾ ಮಂದಿ ಈ ದಂಧೆಯಲ್ಲಿ ತೊಡಗಿದ್ದು, ಪೊಲೀಸರು ಅಂತವರನ್ನು ಮಟ್ಟ ಹಾಕಿದ ಬೆನ್ನಲ್ಲೇ ಇಡೀ ರಾಜ್ಯದಲ್ಲಿ ಬಾಂಗ್ಲಾ ವಲಸಿಗರನ್ನು ಬಳಸಿಕೊಂಡು ಶಾಲಾ - ಕಾಲೇಜುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕ ಗಾಂಜಾ ಇತ್ಯಾದಿ ಮಾದಕ ದಂಧೆ ನಡೆಸಲಾಗುತ್ತಿದೆ ಎಂದು ಅವರು ಬೊಟ್ಟು ಮಾಡಿದರು. ಈ ಬಗ್ಗೆ ಸರಕಾರ ಕಠಿಣ ಕ್ರಮಕೈಗೊಳ್ಳುವಂತೆ ವಿಧಾನಮಂಡಲ ಅಧಿವೇಶನದಲ್ಲಿ ತಾವು ಪ್ರಸ್ತಾಪಿಸಿದರೂ ಯಾವದೇ ಪ್ರಯೋಜನವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಏರೋ ಶೋ ಸ್ಥಳಾಂತರ ಗೊತ್ತಿಲ್ಲ : ಬೆಂಗಳೂರಿನಿಂದ ಉತ್ತರ ಪ್ರದೇಶದ ಲಕ್ನೋಗೆ ಏರೋ ಶೋ ಸ್ಥಳಾಂತರಿಸುವ ವಿಚಾರ ತಮಗೆ ಗೊತ್ತಿಲ್ಲವೆಂದು ಸಮರ್ಥಿಸಿಕೊಂಡ ಆರ್. ಅಶೋಕ್ ಈ ಬಗ್ಗೆ ಕೇಂದ್ರ ಸಚಿವ ಅನಂತ್‍ಕುಮಾರ್ ಜೊತೆ ಮಾತುಕತೆ ನಡೆಸಿ ಬೆಂಗಳೂರಿನಲ್ಲೇ ಏರೋ ಶೋ ನಡೆಸಲು ಗಮನ ಸೆಳೆಯುವದಾಗಿ ಭರವಸೆ ನೀಡಿದರು. ಅವರೊಂದಿಗೆ ಶಾಸಕ ಕೆ.ಜಿ. ಬೋಪಯ್ಯ, ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಪ್ರಮುಖರಾದ ರಾಬೀನ್ ದೇವಯ್ಯ, ಉಣ್ಣಿಕೃಷ್ಣ ಮೊದಲಾದವರು ಹಾಜರಿದ್ದರು.