ನಾಪೆÇೀಕ್ಲು, ಆ. 13: ಭಾಗಮಂಡಲ ನಾಪೋಕ್ಲು ರಸ್ತೆ ಜಲಾವೃತವಾಗಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ.ನಾಪೆÇೀಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ಬೆಳಿಗ್ಗಿನಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹ ಭೀತಿ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ನದಿ, ಹೊಳೆ, ಹಳ್ಳಕೊಳ್ಳ, ತೋಡುಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಅಪಾಯದ ಪರಿಸ್ಥಿತಿ ಉಂಟಾಗುವ ಭೀತಿ ಮೂಡಿದೆ.
ನಾಪೆÇೀಕ್ಲು ಸಮೀಪದ ಕೊಟ್ಟಮುಡಿಯಲ್ಲಿ ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ನಾಪೆÇೀಕ್ಲು - ಮೂರ್ನಾಡು ಸಂಪರ್ಕ ಕಡಿತಗೊಳ್ಳುವ ಲಕ್ಷಣಗಳು ಕಂಡು ಬರುತ್ತಿದೆ. ಉಳಿದಂತೆ ಗಾಳಿ, ಮಳೆ, ಪ್ರವಾಹ ಹೊರತು ಪಡಿಸಿ ಯಾವದೇ ಅಹಿತಕರ ಘಟನೆ ವರದಿಯಾಗಿಲ್ಲ.
ಸಿದ್ದಾಪುರ: ಸಿದ್ದಾಪುರ ವ್ಯಾಪ್ತಿ ಭಾರೀ ಗಾಳಿ - ಮಳೆಯ ಪರಿಣಾಮ ಗೂಡುಗದ್ದೆ, ಕರಡಿಗೋಡು, ಬೆಟ್ಟದಕಾಡು, ಹೊಳೆಕರೆ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿದ್ದಾಪುರ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಕರಡಿಗೋಡು ಗ್ರಾಮದಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಅಮ್ಮತ್ತಿ ಹೋಬಳಿಯ ಕಂದಾಯ ಪರಿವೀಕ್ಷಕ ವಿನು ಹಾಗೂ ಗ್ರಾಮಲೆಕ್ಕಿಗಾರರಾದ ಅನಿಲ್ಕುಮಾರ್, ಮಂಜುನಾಥ್ ಅವರು ಸ್ಥಳಕ್ಕೆ ಭೇಟಿ ನೀಡಿ ನದಿ ದಡದ ನಿವಾಸಿಗಳಿಗೆ ಅಪಾಯವಾಗದಂತೆ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.
ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಗುಹ್ಯ ಗ್ರಾಮದ ನಿವಾಸಿ ರಾಧ ಎಂಬವರ ಮನೆ ಭಾಗಶಃ ಕುಸಿದಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಅವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ ಮಾರುತಿ 800 ಕಾರು ಹಾಗೂ ಸ್ಕೂಟಿಯ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ ಎರಡೂ ವಾಹನಗಳು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವಿನು, ಗ್ರಾಮಲೆಕ್ಕಿಗ ಮಂಜುನಾಥ್, ಸಹಾಯಕ ಕೃಷ್ಣ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡ್, ಬಾಡಗರಕೇರಿ, ಬಿರುನಾಣಿ, ತೆರಾಲು, ಪರಕಟಗೇರಿ ಗಳಲ್ಲಿ ಭಾರೀ ಮಳೆಯಾಗುತ್ತಿದೆ. ವಿದ್ಯುತ್ ಕಡಿತಗೊಂಡು ಕಾರ್ಗತ್ತಲು ಆವರಿಸಿದೆ.
ವೀರಾಜಪೇಟೆ ವಿಭಾಗ ಜಲಾವೃತ
ವೀರಾಜಪೇಟೆ: ವೀರಾಜಪೇಟೆ ವಿಭಾಗಕ್ಕೆ ನಿರಂತರ ಭಾರೀ ಮಳೆಯಾಗುತ್ತಿರುವದರಿಂದ ಮಳೆಗೆ ನದಿ ಹಳ್ಳ ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಕೆಲವು ಕಡೆಗಳಲ್ಲಿ ಗದ್ದೆಗಳು ಜಲಾವೃತಗೊಳ್ಳುತ್ತಿವೆ. ಕದನೂರು, ಕಡಂಗಮೂರುರು, ಬೇತ್ರಿ, ಹೆಮ್ಮಾಡು, ಅರಮೇರಿ, ಮ್ಯೆತಾಡಿ ಭಾಗಗಳಲ್ಲಿಯೂ ಭತ್ತದ ನಾಟಿ ನೆಟ್ಟ ಗದ್ದೆಗಳು ಜಲಾವೃತಗೊಂಡು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಶ್ರೀಮಂಗಲ ಹೋಬಳಿಯಲ್ಲಿ ಎಂ.ಎಂ ಕರುಂಬಯ್ಯ ಅವರ ಮನೆಗೆ ಹಾನಿಯಾಗಿದ್ದು ವೀರಾಜಪೇಟೆಯ ಸಿದ್ದಾಪುರ ರಸ್ತೆಯಲ್ಲಿರುವ ಮಲೆತೆರಿಕೆ ಬೆಟ್ಟದಲ್ಲಿ ಪಿ.ಎಸ್ ಸುರೇಶ್ ಅವರ ಮನೆಯ ಒಂದು ಭಾಗ ಕುಸಿದು 20 ಸಾವಿರ ನಷ್ಟವಾಗಿದೆ ಎಂದು ಶಿರಸ್ತೆದಾರ್ ಕೆ.ಎಂ ಚಿಣ್ಣಪ್ಪ ತಿಳಿಸಿದ್ದಾರೆ.
ನಿನ್ನೆ ಬೆಳಗಿನಿಂದ ಇಂದಿನ ಬೆಳಗಿನ 8ಗಂಟೆಯವರೆಗೆ ಈ ವಿಭಾಗಕ್ಕೆ ಒಟ್ಟು 2.4ಇಂಚುಗಳಷ್ಟು ಮಳೆ ಸುರಿದಿದೆ. ಇಂದು ಬೆಳಗಿನಿಂದಲೂ ಮೋಡ ಕವಿದ ವಾತಾವರಣ ಮುಂದುವರೆದಿದ್ದು ಬೆಳಗಿನಿಂದಲೇ ಭಾರೀ ಮಳೆ ಮುಂದುವರೆದಿದೆ.
ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟದಲ್ಲಿಯೂ ನಿನ್ನೆಯಿಂದ ಭಾರೀ ಮಳೆಯಾಗುತ್ತಿದ್ದು ಇಂದು ಬೆಳಗಿನ ಜಾವ ಮಾಕುಟ್ಟದ ಸೇತುವೆ ಬಳಿ ಮರ ಬಿದ್ದುದರಿಂದ ಕೆಲಗಂಟೆಗಳ ಕಾಲ ಲಘು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತೆಂದೂ ಮಾಕುಟ್ಟದ ನಿವಾಸಿಗಳು ತಿಳಿಸಿದ್ದಾರೆ.
ಮಾಕುಟ್ಟ ವಿಭಾಗಕ್ಕೆ ಜನವರಿ ಪ್ರಾರಂಭದಿಂದ ಇಂದಿನವರಗೆ ಒಟ್ಟು 166 ಇಂಚುಗಳಷ್ಟು ಮಳೆ ಸುರಿದಿದೆ. ಮಾಕುಟ್ಟದಲ್ಲಿ ಭಾರೀ ಮಳೆಗೆ ವಿದ್ಯುತ್ ಕೆಲವು ಕಂಬಗಳು ನೆಲಕ್ಕೆ ಉರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸೆಸ್ಕಾಂ ದುರಸ್ತಿಯಲ್ಲಿ ತೊಡಗಿದೆ.