ಮಡಿಕೇರಿ, ಆ. 13: ನಿನ್ನೆ ಗಾಳಿ ಮಳೆ ನಡುವೆ ಗಾಳಿಬೀಡು ಗ್ರಾ.ಪಂ.ಗೆ ಸೇರಿದ 1ನೇ ಮೊಣ್ಣಂಗೇರಿ ನಿವಾಸಿ ಅಚ್ಚಪಟ್ಟಿರ ಮಾಚಮ್ಮ (88) ಎಂಬವರು ಮರಣಪಟ್ಟ ವೇಳೆ, ಮೃತರ ಶವವನ್ನು ಗ್ರಾಮದ ರಸ್ತೆ ಜಲಾವೃತಗೊಂಡ ಪರಿಣಾಮ ಶವ ಸಾಗಿಸಲು ಪಾಡುಪಟ್ಟ ಪ್ರಸಂಗ ಸಂಭವಿಸಿದೆ.
ಅಲ್ಲಿನ ರಸ್ತೆಯು ಗದ್ದೆ ಬಯಲು ನಡುವೆ ಕೂಟುಹೊಳೆ ಹಿನ್ನೀರಿನಿಂದ ಮುಳುಗಡೆಯಾಗಿದ್ದರಿಂದ ಶವ ಸಾಗಿಸಲು ತೊಂದರೆ ಪಡಬೇಕಾಯಿತು. ಮಳೆಯಿಂದ ವಾಹನ ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾಗಿ ಗ್ರಾಮಸ್ಥರು ಶವವನ್ನು ಜಲಾವೃತ ರಸ್ತೆಗಾಗಿ ಹೊತ್ತು ಸಾಗಿಸಿದ ಪ್ರಸಂಗ ಎದುರಾಗಿದೆ.
ಪ್ರಸಕ್ತ ವರ್ಷ ನಗರಸಭೆಯು ಕೂಟುಹೊಳೆ ನೀರು ಸಂಗ್ರಹಾಗಾರದ ಗೇಟ್ಗಳನ್ನು ತೆರೆಯದೆ ಹೆಚ್ಚಿನ ನೀರು ಬಹುತೇಕ ಗದ್ದೆ ಬಯಲು ಸಹಿತ ರಸ್ತೆಯನ್ನು ಆಕ್ರಮಿಸಿಕೊಂಡಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.